ಕಾರವಾರ : ನಾಡ ಬಂದೂಕು ತಯಾರಿ ಅಪಾಯಕಾರಿ ಜೊತೆಗೆ ಅದು ನಿಯಮಬಾಹಿರವೂ ಕೂಡಾ ಹೌದು. ಅಂತಹ ಕೃತ್ಯದಲ್ಲಿ ತೊಡಗುವುದೂ ಅಪರಾಧವೇ ಆಗಿದೆ. ಆದರೆ ಮನೆಯಲ್ಲಿಯೇ ಅಕ್ರಮವಾಗಿ ನಾಡ ಬಂದೂಕು ತಯಾರಿಸುತ್ತಿದ್ದ ವೇಳೆ ಜಿಲ್ಲಾ ಪೊಲೀಸರ ವಿಶೇಷ ತಂಡ ದಾಳಿ ನಡೆಸಿ ಒಂದು ನಾಡ ಬಂದೂಕು ಮತ್ತು ಬಂದೂಕು ತಯಾರಿಸುವ ಸಾಮಗ್ರಿಗಳನ್ನು ವಶಪಡಿಸಿಕೊಂಡ ಘಟನೆ ವರದಿಯಾಗಿದೆ.
ತಾಲೂಕಿನ ಗೋಪಿಶಿಟ್ಟಾ ಬರ್ನಾವಾಡಾ ನಿವಾಸಿ ಸಂಜು ವಿನಾಯಕ ಆಚಾರಿ ಎಂಬುವವನನ್ನು ಈ ಸಂಬಂಧ ಬಂಧಿಸಲಾಗಿದ್ದು, ಈತ ತನ್ನ ಮನೆಯ ಹಿಂಬದಿಯ ತಗಡಿನ ಶೆಡ್ಡಿನಲ್ಲಿ ಮಾರಾಟ ಮಾಡುವ ಉದ್ದೇಶದಿಂದ ಒಂಟಿ ನಳಿಕೆಯ ನಾಡ ಬಂದೂಕು ತಯಾರಿಸಿ ಇಟ್ಟುಕೊಂಡಿದ್ದ ಎನ್ನಲಾಗಿದೆ.
ಈ ಸಂದರ್ಭದಲ್ಲಿ ಪೊಲೀಸರು ದಾಳಿ ನಡೆಸಿ ಬಂದೂಕು ತಯಾರಿಕೆಗೆ ಬಳಸುವ ಸಾಮಗ್ರಿಗಳನ್ನು ವಶಪಡಿಸಿಕೊಂಡು ಜೊತೆಹೇ ಆರೋಪಿತನ ಮೇಲೆ ಶಸ್ತ್ರಾಸ್ತ್ರ ಖಾಯ್ದೆ ಅಡಿ ಪ್ರಕರಣ ದಾಖಲಿಸಿದ್ದಾರೆ.
ಜಿಲ್ಲಾ ಪೊಲೀಸ್ ವರಿಷ್ಠೆ ಡಾ ಸುಮನ್ ಪೆನ್ನೇಕರ್, ಹೆಚ್ಚುವರಿ ಪೊಲೀಸ್ ಅಧೀಕ್ಷಕ ಬದರಿನಾಥ್ ಅವರ ಮಾರ್ಗದರ್ಶನದಲ್ಲಿ ಜಿಲ್ಲಾ ಪೊಲೀಸ್ ವಿಶೇಷ ವಿಭಾಗದ ಪಿ.ಎಸ್. ಐ ಪ್ರೇಮನಗೌಡ ಪಾಟೀಲ್, ಚಿತ್ತಾಕುಲ ಪಿ.ಎಸ್.ಐ ವಿಶ್ವನಾಥ ನಿಂಗೊಳ್ಳಿ ಸಿಬ್ಬಂದಿಗಳಾದ ಎಚ್. ಸಿ.ರಾಘವೇಂದ್ರ, ಗುರುರಾಜ ನಾಯ್ಕ, ಭಗವಾನ ಗಾಂವಕರ್, ಸಂತೋಷ ಕೆ.ಬಿ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.