ಚಿತ್ರದುರ್ಗ: ‘ಸಮಾವೇಶವನ್ನಷ್ಟೇ ಮಾಡುತ್ತಿದ್ದರೆ ಗುರಿ ಮುಟ್ಟಲು ಸಾಧ್ಯವಿಲ್ಲ. ಮುಖ್ಯಮಂತ್ರಿಗಳಿಗೆ ಆಪ್ತರಾಗಿರುವ ಸ್ವಾಮೀಜಿಗಳು ಅವರ ಮೇಲೆ ಒತ್ತಡ ತಂದು ಲಿಂಗಾಯತ ಧರ್ಮಕ್ಕೆ ಸಾಂವಿಧಾನಿಕ ಮಾನ್ಯತೆ ಘೋಷಿಸುವಂತೆ ಮಾಡಲು ಮುಂದಾಗಬೇಕು’ ಎಂದು ಲಿಂಗಾಯತ ಧರ್ಮ ಮಾನ್ಯತೆ ಹೋರಾಟ ಸಮಿತಿ ನಾಯಕ, ಸಚಿವ ಎಂ.ಬಿ. ಪಾಟೀಲ್ ಸಲಹೆ ನೀಡಿದರು.
ನಗರದಲ್ಲಿ ಮುರುಘಾಮಠದ ವತಿಯಿಂದ ಗುರುವಾರ ಆಯೋಜಿಸಿದ್ದ ‘ಲಿಂಗಾಯತ ಧರ್ಮ – ಸಾಂವಿಧಾನಿಕ ಮಾನ್ಯತೆ ಸಮಾವೇಶ’ದಲ್ಲಿ ಅವರು ಮಾತನಾಡಿದರು.
‘ಫೆಬ್ರುವರಿಯಿಂದ ಚುನಾವಣೆ ನೀತಿ ಸಂಹಿತೆ ಜಾರಿಯಾದರೆ ಏನೂ ಮಾಡಲಾಗದು. ಇದರಲ್ಲಿ ನನ್ನ ಮತ್ತು ವಿನಯ ಕುಲಕರ್ಣಿ ಅವರ ರಾಜಕೀಯ ಪ್ರಶ್ನೆಯೂ ಸೇರಿಕೊಂಡಿದೆ. ಲಿಂಗಾಯತ ಧರ್ಮ ಘೋಷಿಸಲು ಗಡುವು ನೀಡಿ, ಮುಖ್ಯಮಂತ್ರಿ ಮೇಲೆ ಒತ್ತಡ ಹೇರಬೇಕು. ಮುಖ್ಯಮಂತ್ರಿಗಳು ಮುರುಘಾ ಶರಣರು, ಮಹಂತಾಪ್ಪಗಳ ಮಾತನ್ನು ಕೇಳುತ್ತಾರೆ. ಈ ಬಗ್ಗೆ ತ್ವರಿತಗತಿಯಲ್ಲಿ ಕೆಲಸ ಸಾಗಬೇಕು’ ಎಂದು ಅವರು ಹೇಳಿದರು.
ಮುರುಘಾಶರಣರು ಮಾತನಾಡಿ, ‘ಸಮಾವೇಶದ ಜತೆಗೆ ಕಾನೂನು ರೀತಿ ಹೋರಾಟಕ್ಕೆ ಸಜ್ಜಾಗಬೇಕು. ಈ ವಿಚಾರದಲ್ಲಿ ನೆರವಾಗಲು ಕೆಲವರು ಮುಂದೆ ಬಂದಿದ್ದಾರೆ. ಅವರ ಸಹಾಯ ಪಡೆಯಬಹುದು’ ಎಂದು ಸಲಹೆ ನೀಡಿದರು.
ಸಚಿವ ವಿನಯ್ ಕುಲಕರ್ಣಿ ಅವರು ಮಾತನಾಡಿ, ‘ಲಿಂಗಾಯತ ಪ್ರತ್ಯೇಕ ಧರ್ಮ ಹೋರಾಟ ಪಕ್ಷಾತೀತವಾಗಿದೆ. ಲಿಂಗಾಯತರು ಎಲ್ಲ ಪಕ್ಷದಲ್ಲಿದ್ದಾರೆ. ರಾಜ್ಯ ಸರ್ಕಾರ ಇದನ್ನು ಬೆಂಬಲಿಸಿದೆ ಎನ್ನುವುಸು ಸತ್ಯಕ್ಕೆ ದೂರವಾದುದು’ ಎಂದು ಸ್ಪಷ್ಟಪಡಿಸಿದರು.
ಲಿಂಗಾಯತ ಧರ್ಮದ ಹೋರಾಟ ನಿರಂತರವಾಗಿರುತ್ತದೆ. ನವೆಂರ್ 5ರಂದು ಹುಬ್ಬಳ್ಳಿಯಲ್ಲಿ 5 ಲಕ್ಷ ಜನರನ್ನು ಸೇರಿಸಿ ಬೃಹತ್ ಸಮಾವೇಶ ಆಯೋಜಿಸುತ್ತಿದ್ದೇವೆ. ಅದೇ ತಿಂಗಳ ಕೊನೆಯಲ್ಲಿ ಬೆಳಗಾವಿ ಯಲ್ಲಿ ಸಮಾವೇಶ ಇದೆ. ಡಿಸೆಂಬರ್ 10ರಂದು ಬೆಂಗಳೂರಿನಲ್ಲಿ 25 ಲಕ್ಷ ಜನರನ್ನು ಸೇರಿಸಿ ರಾಷ್ಟ್ರೀಯ ಸಮಾವೇಶ ಮಾಡಲಿದ್ದೇವೆ ಎಂದು ಅವರು ಮಾಹಿತಿ ನೀಡಿದರು.