ಗೋಕರ್ಣ: ಸಮಚಿತ್ತತೆ ಅಥವಾ ಸ್ಥಿರ ಚಿತ್ತತೆಯೇ ನಮಗೆ ಕಷ್ಟಕಾಲದಲ್ಲಿ ನೆರವಿಗೆ ಬರುವಂಥದ್ದು. ಎಂಥ ದುಃಖ, ಕಷ್ಟ ಬಂದರೂ, ಗಟ್ಟಿತನದಿಂದ ಅದನ್ನು ಎದುರಿಸಬೇಕು. ಇಂಥ ಸಮಚಿತ್ತತೆ ಸಾಮಾನ್ಯ ಮನುಷ್ಯನನ್ನೂ ಮಹಾತ್ಮನಾಗಿಸಬಲ್ಲದು ಎಂದು ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀ ಶ್ರೀ ರಾಘವೇಶ್ವರಭಾರತೀ ಮಹಾಸ್ವಾಮೀಜಿ ಹೇಳಿದರು. ಅಶೋಕೆಯ ಶ್ರೀ ವಿಷ್ಣುಗುಪ್ತ ವಿಶ್ವವಿದ್ಯಾಪೀಠದ ಆವರಣದಲ್ಲಿ ಕೈಗೊಂಡಿರುವ ಗುರುಕುಲ ಚಾತುರ್ಮಾಸ್ಯದ ಅಂಗವಾಗಿ ಗುರುವಾರ ನಡೆದ ಧರ್ಮಸಭೆಯಲ್ಲಿ ಆಶೀರ್ವಚನ ನೀಡಿದ ಅವರು, ಹಿಗ್ಗು- ಕುಗ್ಗುಗಳಲ್ಲಿ ವಿಚಲಿತರಾಗಬಾರದು. ಸುಖಬಂದಾಗ ಹಿಗ್ಗುವುದು ಹಾಗೂ ದುಃಖ ಬಂದಾಗ ಕುಗ್ಗುವುದು ನಮ್ಮ ಸಹಜ ಗುಣ. ಸುಖ ಬಂದಾಗ ಅಥವಾ ಕಷ್ಟಬಂದಾಗ ‘ಇದು ಹೀಗೇ ಇರದು’ ಎಂಬ ಭಾವನೆ ನಮ್ಮಲ್ಲಿರಬೇಕು ಎಂದು ಸೂಚಿಸಿದರು.
ನೂರು ವರ್ಷವಾದರೂ ನಾವು ಸಹನೆಯಿಂದ ಕಾಯುತ್ತಿದ್ದರೆ ಸಹಜವಾಗಿಯೇ ಅದಕ್ಕೆ ಫಲ ಸಿಗುತ್ತದೆ. ನಹುಶ ಸತ್ಕಾರ್ಯಗಳಿಂದ ಇಂದ್ರ ಪದವಿ ಪಡೆದ. ಆದರೆ ಆ ಸುಖದ ಸುಪ್ಪತ್ತಿಗೆ ನೆತ್ತಿಗೆ ಅಡರಿದಾಗ ಸಪ್ತ ಋಷಿಗಳು ಈತನನ್ನು ಪಲ್ಲಕ್ಕಿಯಲ್ಲಿ ಹೊರುವಂತಾಗಬೇಕಾಯಿತು. ಇದರಿಂದ ಶಾಪಗ್ರಸ್ಥನಾಗಿ ಸರ್ಪವಾಗಿ ಭೂಮಿಗೆ ಬಂದ ಎಂದು ಬಣ್ಣಿಸಿದರು.
ಹಲ್ಲು ಹುಟ್ಟುವಾಗ ಬರುವ ಜ್ವರಕ್ಕೆ ಒಳಗಾಗದ ಶಿಶು ಇರಲು ಸಾಧ್ಯವೇ ಇಲ್ಲ; ಅಂತೆಯೇ ವಿಧಿಯೊದಗೆ ಸಿಲುಕದ ನರಜಂತು ಇಲ್ಲ. ಒದೆಪೆಟ್ಟು ಮುಗಿದಾಗ ರಾಹುವಿನ ಬಾಯಿಯಿಂದ ಹೊರಬಂದ ಗ್ರಹಣಮುಕ್ತ ಚಂದ್ರನಂತೆ ಕಂಗೊಳಿಸಬಹುದು ಎಂಬ ಮಂಕುತಿಮ್ಮನ ಕಗ್ಗವನ್ನು ಉಲ್ಲೇಖಿಸಿದರು.
ಎಲ್ಲ ಕಡಲು ಒಂದಾದರೂ, ಭೂಮಿಯೇ ದೂಳಾದರೂ ಒಳನೆಮ್ಮದಿಯನ್ನು ಕಳೆದುಕೊಳ್ಳಬೇಡ. ಗಾಬರಿಯನ್ನು ಬಿಡಬೇಕು. ಕಡಲಿನ ನೆರೆ ಕೆಳಗಿಳಿಯುತ್ತದೆ; ಮೇಲೆದ್ದ ಧೂಳು ಕೆಳಗಿಳಿಯಲೇಬೇಕು. ಎಲ್ಲಕ್ಕೂ ಒಂದು ಗಡುವು ಇದೆ. ಅದಕ್ಕೆ ಕಾಯುವ ಮನಸ್ಥಿತಿ ನಮ್ಮದಾಗಿರಬೇಕು ಎಂದು ಸೂಚಿಸಿದರು.
ಎಂಟಾಣೆಯನ್ನು ಜತನದಿಂದ ಕಾಪಾಡಿಕೊಂಡು ಬಂದ ಸಂದರ್ಭವನ್ನು, ರಾಮಚಂದ್ರಾಪುರ ಮಠದ ಉಚ್ಛ್ರಾಯ ಸ್ಥಿತಿಗೆ ಏರಿದ ಕ್ಷಣವನ್ನು, ಬಳಿಕ ಬಂದ ಕಷ್ಟಗಳ ಸರಮಾಲೆಯನ್ನು, ಬಳಿಕ ಗೋಸ್ವರ್ಗದಂಥ ಅದ್ಭುತ ಸೃಷ್ಟಿಸಿದ ಕ್ಷಣವನ್ನು ನೆನಪಿಸಿಕೊಂಡು ತಮ್ಮದೇ ಬದುಕಿನ ಏರಿಳಿತಗಳನ್ನು ಉದಾಹರಿಸಿದರು.
ಬದುಕು ಕೂಡಾ ನೇರ ದಾರಿಯಾಗಿರದು; ತಿರುವು, ಏರು ತಗ್ಗು, ಕಲ್ಲು ಮುಳ್ಳುಗಳಿಂದ ಕೂಡಿರುತ್ತದೆ. ಅದನ್ನು ಎದುರಿಸುವ ಸಮಚಿತ್ತ ನಮಗೆ ಬೇಕು. ಸವಾಲುಗಳು ಇಲ್ಲದಿದ್ದರೆ ಜೀವನಕ್ಕೆ ಸ್ವಾರಸ್ಯವೇ ಇಲ್ಲ. ಆದರೆ ಸುಖ- ದುಃಖದ ಸಂದರ್ಭದಲ್ಲೂ ಕರ್ತವ್ಯ ಪರತೆಯನ್ನು ಮರೆಯದಿದ್ದರೆ ಆತ ಮಹಾತ್ಮನಾಗಬಲ್ಲ ಎಂದು ಎಂದು ವಿಶ್ಲೇಷಿಸಿದರು.
ಸುಖ- ದುಃಖ, ಲಾಭ-ನಷ್ಟ, ಜಯ- ಅಪಜಯಗಳ ಚಿಂತೆ ಮಾಡದೇ ಬದುಕಿನ ಯುದ್ಧದಲ್ಲಿ ಹೋರಾಡಬೇಕು. ಧನ, ಜನ, ಗರ್ವ ಎಲ್ಲವೂ ಕ್ಷಣಮಾತ್ರದಲ್ಲೇ ಕಾಲ ಎಲ್ಲವನ್ನೂ ಅಪಹರಿಸಬಲ್ಲದು ಎಂಬ ಶಂಕರರ ಶ್ಲೋಕವನ್ನು ಉದಾಹರಿಸಿದರು. ಈ ಸೂತ್ರವನ್ನು ಬದುಕಿನಲ್ಲಿ ಪಾಲಿಸಿದರೆ ಸುಖವಾಗಿ ಇರಬಹುದು. ಸತತವಾಗಿ ಕರ್ತವ್ಯಪರತೆಯನ್ನು ಮರೆಯಬಾರದು. ಎಚ್ಚರ ಇರುವಷ್ಟೂ ಹೊತ್ತು ಕರ್ತವ್ಯ ಪಾಲನೆ ಮಾಡುವುದೇ ಸರಿ ಎಂದು ಪ್ರತಿಪಾದಿಸಿದರು.
ಆರೆಸ್ಸೆಸ್ ಮುಖಂಡ ಕಲ್ಲಡ್ಕ ಪ್ರಭಾಕರ ಭಟ್ ಮಾತನಾಡಿ, ಧರ್ಮ ಅಂದರೆ ಸೇವೆ ಮತ್ತು ತ್ಯಾಗ ಎನ್ನುವ ಮನೋಭಾವದಿಂದ ಭಾರತದಲ್ಲಿ ಲಕ್ಷಾಂತರ ಸನ್ಯಾಸಿಗಳು ತಮ್ಮ ವೈಯಕ್ತಿಕ ಭೋಗ ಭಾಗ್ಯಗಳನ್ನು ತ್ಯಾಗ ಮಾಡಿ ದೇಶಕ್ಕಾಗಿ ಸಮರ್ಪಣೆ ಮಾಡಿಕೊಂಡಿದ್ದಾರೆ. ಸಮಾಜದ ಹಿತವೇ ತಮ್ಮ ಹಿತ ಎಂಬ ಭಾವನೆಯಿಂದ ತಮ್ಮ ಜೀವನ ಮುಡಿಪಾಗಿಟ್ಟಿದ್ದಾರೆ. ಅನೇಕ ಸನ್ಯಾಸಿಗಳು ವಿಜ್ಞಾನಿಗಳಾಗಿದ್ದರೆ, ಮತ್ತೆ ಹಲವು ಮಂದಿ ವೈದ್ಯಕೀಯ ಸೇವೆಯಲ್ಲಿ ತೊಡಗಿಸಿಕೊಂಡಿದ್ದರು. ಮತ್ತೆ ಕೆಲವರು ಸಮಾಜ ಸುಧಾರಕರಾದರೆ, ಶಿವಾಜಿಯಂಥವರು ದೇಶಕ್ಕಾಗಿ ಹೋರಾಡಿದರು ಎಂದು ಬಣ್ಣಿಸಿದರು.
ಶಕ್ತಿ ಪ್ರದರ್ಶನವೇ ನಮ್ಮ ಎಲ್ಲ ಸಾಧನೆಗಳಿಗೆ ಪ್ರೇರಕ; ಹಿಂದೂ ಧರ್ಮದ ಪ್ರಖರ ಅಂತಃಸತ್ವವನ್ನು ಪುನರುಜ್ಜೀವನಗೊಳಿಸುವ ವಿಶ್ವವಿದ್ಯಾಪೀಠದ ಮೂಲಕ ರಾಘವೇಶ್ವರ ಶ್ರೀಗಳು ಸಾಮಾಜಿಕ ಕ್ರಾಂತಿಗೆ ಮುನ್ನುಡಿ ಬರೆದಿದ್ದಾರೆ ಎಂದು ಹೇಳಿದರು. ಇದಕ್ಕೆ ಪೂರಕವಾಗಿ ಮಾತೆಯರು ಸಂಸ್ಕøತಿ ರಕ್ಷಣೆಗೆ, ದೇಶರಕ್ಷಣೆಗೆ ಪಣ ತೊಡಬೇಕು ಎಂದು ಕರೆ ನೀಡಿದರು.
ಸತ್ಯನಾರಾಯಣ ಭಟ್ ಮಾಂಕಾಳೆಯವರು ರಚಿಸಿದ ಜೇನು ಪ್ರಪಂಚ ಕೃತಿಯನ್ನು ಶ್ರೀಗಳು ಲೋಕಾರ್ಪಣೆ ಮಾಡಿದರು. ಹಿರಿಯ ದೈವಜ್ಞ ಪ್ರಸನ್ನ ಭಟ್ ಕೊಪ್ಪ, ಕಮಲಾ ಪ್ರಭಾಕರ ಭಟ್, ಬೆಳ್ತಂಗಡಿ ಶಾಸಕ ಹರೀಶ್ ಪೂಂಜಾ, ಶ್ರೀಗಳ ಆಶೀರ್ವಾದ ಪಡೆದರು. ಚಾತುರ್ಮಾಸ್ಯ ಅಂಗವಾಗಿ ಧಾರ್ಮಿಕ ಕಾರ್ಯಕ್ರಮದಲ್ಲಿ ರುದ್ರಹವನ, ಚಂಡಿ ಪಾರಾಯಣ, ರಾಮತಾರಕ ಹವನ, ಘನ ಪಾರಾಯಣ, ಚಂಡಿಹವನ, ಮಾತೆಯರಿಂದ ಕುಂಕುಮಾರ್ಚನೆ ನಡೆದವು.