ಶಿರಸಿ: ಭಗವಂತನ ಸ್ಮರಣೆ ಮಾಡುವಾಗ ತೂಕಡಿಕೆ, ಮಂಕು, ಆಲಸ್ಯ ಇರಬಾರದು ಎಂದು ಸೋಂದಾ ಸ್ವರ್ಣವಲ್ಲೀ ಮಹಾ ಸಂಸ್ಥಾನದ ಮಠಾಧೀಶ ಶ್ರೀಗಂಗಾಧರೇಂದ್ರ ಸರಸ್ವತೀ ಮಹಾಸ್ವಾಮೀಜಿ ನುಡಿದರು.

ಅವರು ಸ್ವರ್ಣವಲ್ಲೀ ಮಹಾ ಸಂಸ್ಥಾನದಲ್ಲಿ ತಮ್ಮ 32ನೇ ಚಾತುರ್ಮಾಸ್ಯ ವೃತಾಚರಣೆಯಲ್ಲಿ ರಾಮಕ್ಷತ್ರೀಯ ಸಮುದಾಯದವರು ಸಲ್ಲಿಸಿದ ಗುರು ಸೇವೆ ಸ್ವೀಕರಿಸಿ ಆಶೀರ್ವಚನ ನುಡಿದರು.

ಭಗವಂತನಲ್ಲಿ ಕೇಳುವಾಗ ತೂಕಡಿಕೆ ಆಗಬಾರದು. ದೇವರಲ್ಲಿ ಧ್ಯಾನಾಸಕ್ತರಾಗಿ ಪ್ರಾರ್ಥಿಸಬೇಕು. ಯಾವುದೇ ಕರ್ಮದಲ್ಲಿ ಗೊತ್ತಿದ್ದೋ ಗೊತ್ತಿಲ್ಲದೆಯೋ ಲೋಪ ದೋಷ ಆಗಿದ್ದರೆ ವಿಷ್ಣು ಸ್ಮರಣೆಯಿಂದ ಕೋಪ ಹೋಗುತ್ತದೆ. ಮಾಡಿದ ಕೆಲಸ ಕೂಡ ಪೂರ್ಣವಾಗುತ್ತದೆ. ಈ ಕಾರಣದಿಂದ ಭಗವಂತನ ಸ್ಮರಣೆ ಆಗಲು ಮಂಕು ಬುದ್ದಿ ಇರಬಾರದು ಎಂದರು.

RELATED ARTICLES  ಕುಮಟಾದ ಹೆಗಡೆ ವಿಪ್ರ ಒಕ್ಕೂಟದಿಂದ ಪ್ರತಿಭಾ ಪುರಸ್ಕಾರ, ಸಮ್ಮಾನ ಕಾರ್ಯಕ್ರಮ

ಸಂಪೂರ್ಣ ಎಚ್ಚರಿಕೆಯಲ್ಲಿ ಕಾರ್ಯ ಮಾಡುವದು ಧರ್ಮದ ಮುಖ್ಯ ಲಕ್ಷಣ. ಮನಸ್ಸು ಚಂಚಲ ಆದರೆ ಪ್ರಮಾದ ಆಗುತ್ತದೆ. ಹೆಜ್ಜೆ ಹೆಜ್ಜೆಗೂ ಎಚ್ಚರಿಕೆಯಲ್ಲಿ ಇರಬೇಕು. ಎಚ್ಚರದ ಸ್ಥಿತಿ ಧರ್ಮದ ಆಚರಣೆಗೆ ಭೂಮಿಕೆ. ಧರ್ಮಾಚರಣೆಗೆ ಜಾಗೃತಿ ಬೇಕು ಸದಾ. ಯಾವುದೇ ಕೆಲಸ ಮಾಡುವದಿದ್ದರೂ ಈ ಜಾಗೃತ ಸ್ಥಿತಿ ಇಟ್ಟುಕೊಂಡರೆ ಪೂರ್ಣ ಪ್ರಮಾಣದಲ್ಲಿ ಕೆಲಸದಲ್ಲಿ ತೊಡಗಿಕೊಳ್ಳಲು ಸಾಧ್ಯ ಆಗುತ್ತದೆ ಎಂದ ಶ್ರೀಗಳು, ಪೂಜೆ ಮಾಡುವದು ಮನಸ್ಸಿನ ಶುದ್ಧಿಗೋಸ್ಕರ. ಮನಸ್ಸು ತೊಡಗದೇ ಹೋದರೆ ಮನಸ್ಸಿನ ಶುದ್ಧಿ ಆಗದು. ಮನಸ್ಸಿನ ಜಾಗೃತಿಗೆ ಪೂಜೆ ಆರಂಭ ಹಾಗೂ ಕೊನೆಗೆ ಕಣ್ಣಿಗೆ ನೀರು ಹಚ್ಚುಕೊಳ್ಳುವದು ಎಂದೂ ವಿಶ್ಲೇಷಿಸಿದರು.

ಮನಸ್ಸು ಇಡೀ ಶರೀರದ ವ್ಯಾಪ್ತಿ ಇರುತ್ತದೆ. ಕೆಲವಡೆ ಅದರ ಸಂವೇದನೆ ಜಾಸ್ತಿ. ಕಣ್ಣಿನಲ್ಲಿ ಅದು ಇನ್ನೂ ಹೆಚ್ಚಿದೆ. ಹಾಗಾಗಿ ಅಲ್ಲಿ ಜಾಗೃತಿ ಮಾಡಿಸಿಕೊಂಡರೆ ಮನಸ್ಸು ಜಾಗೃತ ಆಗಬೇಕು ಎಂದ ಅವರು, ಮನೆಯಲ್ಲಿ ನಿರಂತರ ಭಜನೆ, ಪೂಜೆ ಆಗಬೇಕು. ಇದರಿಂದ ಮನಸ್ಸನ್ನು ಉದ್ದರಿಸಿ ಮೇಲಕ್ಕೆ ಎತ್ತುತ್ತದೆ. ಲೋಕದಲ್ಲಿ ಮನಸ್ಸು ಓಡಾಡುತ್ತಿದ್ದರೆ ಮನಸ್ಸು ಬೀಳುತ್ತದೆ. ಆಲಸ್ಯ, ನಿರುತ್ಸಾಹ, ಕ್ಷುಲ್ಲಕ ಆಲೋಚನೆ, ಸಿಟ್ಟುಗಳೆಲ್ಲ ಮನಸ್ಸು ಬಿದ್ಧ ಸ್ಥಿತಿ. ಅವುಗಳಿಂದ ಮನಸ್ಸು ಮೇಲಕ್ಕೆ ಎತ್ತಲು ಪೂಜೆ, ಭಜನೆ, ಪ್ರಾರ್ಥನೆ ಮಾಡಬೇಕು. ಮನಸ್ಸಿನ ಶುದ್ಧಿ, ನೆಮ್ಮದಿ ಮಾತ್ರವಲ್ಲ, ಕುಟುಂಬದ ವಾತಾವರಣ ಕೂಡ ಚೆನ್ನಾಗಿರುತ್ತದೆ ಎಂದೂ ಹೇಳಿದರು.

RELATED ARTICLES  ಕಾರವಾರ ಕರಾವಳಿ ಉತ್ಸವ 2017ಕ್ಕೆ ಬರುತ್ತಾರಾ ಬಾಲಿವುಡ್ ಸಿಂಗರ್ ಶಾಲ್ಮಲಿ ಕೊಳ್ಗಡೆ?

ಈ ವೇಳೆ ಅಧ್ಯಕ್ಷರಾದ ಎಸ್.ಕೆ.ನಾಯ್ಕ ಪೂಣಾ, ಕಾರ್ಯದರ್ಶಿ ರಾಜೇಶ ಸಾಲೆಹಿತ್ತಲು ಇತರರು ಪಾಲ್ಗೊಂಡಿದ್ದರು.