ಪಣಜಿ : ಖ್ಯಾತ ಪತ್ರಕರ್ತ, ತೆಹಲ್ಕಾ ದ ಮಾಜಿ ಮುಖ್ಯ ಸಂಪಾದಕ, ತರುಣ್ ತೇಜ್‌ಪಾಲ್ ವಿರುದ್ಧ ಗೋವೆಯ ಕೋರ್ಟ್‌ನಲ್ಲಿ , ತನ್ನ ಮಾಜಿ ಮಹಿಳಾ ಸಹೋದ್ಯೋಗಿಯ ಮೇಲೆ 2013ರಲ್ಲಿ ಅತ್ಯಾಚಾರ ಎಸಗಿದ, ಲೈಂಗಿಕ ಕಿರುಕುಳ ನೀಡಿದ ಮತ್ತು ಅಕ್ರಮವಾಗಿ ಆಕೆಯನ್ನು ತಡೆಹಿಡಿದ ದೋಷಾರೋಪವನ್ನು ಹೊರಿಸಲಾಗಿದೆ.
ತೇಜ್‌ಪಾಲ್ ವಿರುದ್ಧ ಐಪಿಸಿ ಸೆ.342 ಮತ್ತು 376 (ಅತ್ಯಾಚಾರ) ಸೇರಿದಂತೆ ಇತರ ಹಲವು ಸೆಕ್ಷನ್‌ಗಳಡಿ ದೋಷಾರೋಪ ಹೊರಿಸಲಾಗಿದೆ.
ಈ ಸಂಬಂಧ ನವೆಂಬರ್ 21ರಿಂದ ವಿಚಾರಣೆ ಆರಂಭವಾಗಲಿದೆ. ಆದರೆ ಈ ದೋಷಾರೋಪಗಳನ್ನು ಅಲ್ಲಗಳೆದಿರುವ ತೇಜ್‌ಪಾಲ್ ತಾನು ಅಮಾಯಕ, ಮುಗ್ಧ ಎಂದು ಹೇಳಿಕೊಂಡಿದ್ದಾರೆ.
ಗೋವೆಯ ನ್ಯಾಯಾಲಯ ತನ್ನ ವಿರುದ್ಧದ ದೋಷಾರೋಪಗಳನ್ನು ಕೈಬಿಡಲು ನಿರಾಕರಿಸಿದ ಕಾರಣಕ್ಕೆ ತೇಜ್‌ಪಾಲ್ ಮೊನ್ನೆ ಮಂಗಳವಾರ ಬಾಂಬೆ ಹೈಕೋರ್ಟ್ ಮೆಟ್ಟಲೇರಿದ್ದರು.
ಮುಂಬರುವ ವಿಚಾರಣೆಗೆ ಸಂಬಂಧಿಸಿದಂತೆ ಬಾಂಬೆ ಹೈಕೋರ್ಟಿನ ಪಣಜಿ ಪೀಠದ ಮುಂದೆ ಸಲ್ಲಿಸಿರುವ ಅರ್ಜಿಯ ತಾಜಾ ಸ್ಥಿತಿ ವರದಿಯನ್ನು ಉತ್ತರ ಗೊವೆಯ ಹಚ್ಚುವರಿ ಜಿಲ್ಲಾ ಮತ್ತು ಸೆಶನ್ಸ್ ನ್ಯಾಯಾಲಯ ಕೇಳಿದೆ.