ಕುಮಟಾ: ಆತ್ಮಸಮರ್ಪಣಾ ಭಾವದಿಂದ ದುಡಿದ ಶಿಕ್ಷಕರಿಂದಲೇ ದೇಶ ಬೆಳೆದಿದೆ ಎಂದು ಸಮಾಜ ಕಲ್ಯಾಣ ಮತ್ತು ಹಿಂದುಳಿದ ವರ್ಗಗಳ ಕಲ್ಯಾಣ ಸಚಿವ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಹೇಳಿದರು.
ತಾಲೂಕಿನ ವಿದ್ಯಾಗಿರಿ ಕಲಭಾಗದ ಕೊಂಕಣ ಎಜ್ಯುಕೇಶನ್ ಟ್ರಸ್ಟಿನ ಪ್ರೌಢಶಾಲಾ ಸಭಾಭವನದಲ್ಲಿ ಜಿಲ್ಲಾ ಉತ್ತಮ ಶಿಕ್ಷಕ ಪ್ರಶಸ್ತಿ ಪ್ರದಾನ ಸಮಾರಂಭ ಹಾಗೂ ತಾಲೂಕಿನ ನಿವೃತ್ತ ಶಿಕ್ಷಕರಿಗೆ ಸನ್ಮಾನ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ರಾಜ್ಯ ಯಕ್ಷಗಾನ ಅಕಾಡೆಮಿಯ ಅಧ್ಯಕ್ಷ ಡಾ.ಜಿ.ಎಲ್.ಹೆಗಡೆ ಮಾತನಾಡಿ, ಶಿಕ್ಷಣದಲ್ಲಿ ನ್ಯಾಯ, ತತ್ವ, ಸಂಸ್ಕಾರ ಇರಬೇಕು. ಶಿಕ್ಷಕರು ರಾಷ್ಟ್ರೀಯ ವಾದದಲ್ಲಿ ಹೆಚ್ಚು ಆಸಕ್ತಿ ನೀಡಬೇಕು. ಯಾರದೋ ಮನೆಯ ವಿದ್ಯಾರ್ಥಿ ಸಾಧನೆ ಮಾಡಿದಾಗ ಸಂಭ್ರಮಿಸುವ ಶಿಕ್ಷಕರ ಪ್ರವೃತ್ತಿ ಎಲ್ಲರ ಮೆಚ್ಚುಗೆಗೆ ಪಾತ್ರವಾದದ್ದು. ಕನ್ನಡ ಭಾಷೆ ಗಟ್ಟಿಗೊಳಿಸುವ ಯಕ್ಷಗಾನ ಕೇವಲ ಕುಣಿದರೆ ಸಾಲದು. ಅದರ ಅಧ್ಯಯನ ನಡೆಸಿ ಹೊಸತನ ಸೃಷ್ಟಿಸಬೇಕು. ಜಗತ್ತಿಗೆ ವಿಸ್ಮಯ ನೀಡುವ ವೇದಿಕೆ ಯಕ್ಷಗಾನ. ಇದು ಶೈಕ್ಷಣಿಕ ಮಾಧ್ಯಮವಾಗಬೇಕು. ಪ್ರಗತಿಪರ ಚಿಂತನೆಗಳು ಶಾಲೆಗಳಲ್ಲಿ ನಡೆಯಬೇಕು. ಸಾಮಾಜಿಕ ಬದ್ಧತೆಯ ಶಿಕ್ಷಕ ವೃತ್ತಿ ಪ್ರಗತಿಗೆ ಪೂರಕವಾದದ್ದು ಎಂದರು.
ಶಿಕ್ಷಕನಲ್ಲಿ ಎಲ್ಲ ರೂಪ ಗುಣಗಳನ್ನು ಕಾಣಬಹುದು. ಶಿಕ್ಷಕ ವೃತ್ತಿ ತುಂಬ ಸೂಕ್ಷ್ಮ ಹಾಗೂ ಜವಾಬ್ದಾರಿಯುತವಾದದ್ದು. ಈ ಸಂದರ್ಭದಲ್ಲಿ ಶಿಕ್ಷಕ ಸಮುದಾಯಕ್ಕೆ ಅಭಿನಂದನೆ ಸಲ್ಲಿಸುವದಾಗಿ ತಹಶೀಲ್ದಾರ ವಿವೇಕ ಶೆಣ್ವಿ ಹೇಳಿದರು. ತಾಲೂಕ ಪಂಚಾಯತಿ ಇಓ ನಾಗರತ್ನಾ ನಾಯಕ ಮಾತನಾಡಿ, ಶಿಕ್ಷಕರಿಗೆ ಶುಭ ಕೋರಿದರು. ಸ್ವಾಗತಿಸಿ ಪ್ರಾಸ್ತಾವಿಕ ಮಾತನಾಡಿದ ಡಿಡಿಪಿಐ ಈಶ್ವರ ನಾಯ್ಕ ದೇಶದಲ್ಲಿ ಗುರು ಪರಂಪರೆಯ ಪದ್ಧತಿ ಬಹು ಪುರಾತನವಾದದ್ದು. ಈ ವಿಶಿಷ್ಟ ಗುರು ಪರಂಪರೆ ಶಿಕ್ಷಣ ಕ್ಷೇತ್ರದಲ್ಲಿ ಹೆಸರು ಮಾಡುತ್ತಿದೆ ಎಂದರು.
ಈ ಸಂದರ್ಭದಲ್ಲಿ ಜಿಲ್ಲಾ ಉತ್ತಮ ಶಿಕ್ಷಕರಿಗೆ ಪ್ರಶಸ್ತಿ ಪ್ರದಾನ, ನಿವೃತ್ತ ಶಿಕ್ಷಕರಿಗೆ ಸನ್ಮಾನ, ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದ ಶಿಕ್ಷಕರಿಗೆ ಸೇವಾದಳ ಹಾಗೂ ಸ್ಕೌಟ್ಸ್ ಎಂಡ್ ಗೈಡ್ಸ್ ಪ್ರಮುಖರನ್ನು ಸನ್ಮಾನಿಸಲಾಯಿತು. ಕಲಭಾಗ ಗ್ರಾಮ ಪಂಚಾಯತ ಅಧ್ಯಕ್ಷೆ ಗೀತಾ ಕುಬಾಲ್ ಅಧ್ಯಕ್ಷತೆ ವಹಿಸಿದ್ದರು. ಡಯಟ್ ಪ್ರಾಚಾರ್ಯ ಎನ್.ಜಿ.ನಾಯಕ, ಕೊಂಕಣ ಎಜ್ಯುಕೇಶನ್ ಟ್ರಸ್ಟಿನ ಅಧ್ಯಕ್ಷ ವಿಠಲ ಆರ್.ನಾಯಕ, ಶಿಕ್ಷಣಾಧಿಕಾರಿ ರೇಖಾ ನಾಯ್ಕ, ಲತಾ, ಪುರಸಭೆ ಅಧ್ಯಕ್ಷೆ ಅನುರಾಧಾ ಬಾಳೇರಿ, ಶಿಕ್ಷಕ ಸಂಘದ ಜಿಲ್ಲಾಧ್ಯಕ್ಷ ಆನಂದು ಗಾಂವಕರ, ಬಿಇಓ ಆರ್.ಎಲ್.ಭಟ್ಟ, ಶಿಕ್ಷಕ ಸಂಘದ ತಾಲೂಕಾಧ್ಯಕ್ಷ ರವೀಂದ್ರ ಭಟ್ಟ ಸೂರಿ ಮೊದಲಾದವರು ಉಪಸ್ಥಿತರಿದ್ದರು.