ಶಿರಸಿ: ಪತ್ರಿಕಾ ರಂಗ ತನ್ನ ಪತ್ರಿಕಾ ಧರ್ಮ ಮೀರದೇ ತನ್ನ ಮೌಲ್ಯ ಉಳಿಸಿಕೊಂಡು ಸಮಾಜಕ್ಕೆ ಉತ್ತಮ ಸಂದೇಶ ನೀಡುವಂತಾಗಲಿ ಎಂದು ಕಾರ್ಮಿಕ ಸಚಿವ ಶಿವರಾಮ ಹೆಬ್ಬಾರ್ ಹೇಳಿದರು. ಇಲ್ಲಿನ ಅಂಬೇಡ್ಕರ್ ಭವನದಲ್ಲಿ ಸ್ಥಳೀಯ ಸುದ್ದಿವಾಹಿನಿ ಕದಂಬ ನ್ಯೂಸ್ ೨೪/೭ ಸುದ್ಧಿವಾಹಿನಿ ಉದ್ಘಾಟಿಸಿ ಅವರು ಮಾತನಾಡಿದರು. ಮಾಧ್ಯಮಗಳು ಪ್ರಜಾಪ್ರಭುತ್ವ ವ್ಯವಸ್ಥೆಯ ಅತ್ಯಂತ್ಯ ಗಂಭೀರವಾಗಿ ಪರಿಗಣಿಸಬೇಕಾಗ ಅಂಗ. ಕಾರ್ಯಾಂಗ ಮತ್ತು ಶಾಸಕಾಂಗವನ್ನು ಹದ್ದುಬಸ್ತಿನಲ್ಲಿಡಬೇಕಾದ ಕೆಲಸವನ್ನು ಪತ್ರಿಕಾರಂಗ ಮಾಡುತ್ತದೆ. ಆದರೆ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಎಲ್ಲರನ್ನು ಎಚ್ಚರಿಸಿ ಸಮಾಜವನ್ನು ಸರಿಯಾದ ದಿಶೆಯಲ್ಲಿ ತೆಗೆದುಕೊಂದು ಹೋಗಬೇಕಾದ ಪತ್ರಿಕಾ ರಂಗ ಎಲ್ಲೋ ಒಂದು ಕಡೆ ತನ್ನ ಕರ್ತವ್ಯ ಪ್ರಜ್ಞೆಯನ್ನು ಕಳೆದುಕೊಳ್ಳುವ ಹಂತಕ್ಕೆ ಇಳಿದು ಬಿಡುವ ಆತಂಕ ಎದುರಾಗಿ ಎಂದರು.
ಇತ್ತೀಚೆಗೆ ಪತ್ರಿಕಾರಂಗದಿಂದ ಆಗುವ ಕೆಲ ತಪ್ಪುಗಳಿಂದ ಭಯದ ವಾತಾವರಣ ನಿರ್ಮಾಣವಾಗುತ್ತಿರುವುದು ಆತಂಕದ ವಿಷಯ. ಪತ್ರಿಕೆ ಅಥವಾ ಮಾಧ್ಯಮದ ವಿರುದ್ಧ ಮಾತನಾಡಿದರೆ ನಮ್ಮ ವಿರುದ್ಧ ಬರೆದು ಬಿಡುತ್ತಾರೆನೋ ಎನ್ನುವ ಭಯ ಉಂಟಾಗುವ ವಾತಾವರಣವಿದೆ. ಇದರಿಂದ ಪತ್ರಿಕೋದ್ಯಮ ತನ್ನ ಮೌಲ್ಯ ಕಳೆದುಕೊಳ್ಳುವ ಹಂತಕ್ಕೆ ತಲುಪಿದೆ ಎಂದು ಆತಂಕ ವ್ಯಕ್ತಪಡಿಸಿದರು.
ಸಾರ್ವಜನಿಕ ಜೀವನವನ್ನು ಅತ್ಯಂತ ಕೀಳುಮಟ್ಟದಲ್ಲಿ ನೋಡುವಂಥ ಪರಿಪಾಠವನ್ನು ಬೆಳೆಸಿಕೊಳ್ಳಬಾರದು. ಅನೇಕ ಒಳ್ಳೆಯ ಪತ್ರಕರ್ತರೂ, ರಾಜಕಾರಣಿಗಳು, ಅಧಿಕಾರಿಗಳು ನಮ್ಮ ನಡುವಿದ್ದಾರೆ. ವ್ಯವಸ್ಥೆ ಲೋಪದಿಂದ ಕೂಡಿದೆ ಎಂದರೆ ಆ ವ್ಯವಸ್ಥೆಯಲ್ಲಿದ್ದವರೆಲ್ಲರೂ ಲೋಪ ಎಸಗಿದ್ದಾರೆ ಎಂದಲ್ಲ. ಆದರೆ ವ್ಯವಸ್ಥೆಯಲ್ಲಿದ್ದ ಜನರು ಒಮ್ಮೆ ತಪ್ಪು ಮಾಡಿದೆ ಎಲ್ಲವೂ ಬುಡಮೇಲಾಗುವ ಸಾಧ್ಯತೆ ಇರುತ್ತದೆ. ಆ ಕ್ಷೇತ್ರಕ್ಕೇ ಕಳಂಕ ಬರುತ್ತದೆ. ಹಾಗೆಯೇ ಮಾಧ್ಯಮವೇ ತಪ್ಪುದಾರಿ ಹಿಡಿದರೆ ಸಮಾಜದ ಮೇಲೆ ಆಗುವ ದುಷ್ಪರಿಣಾಮಗಳನ್ನು ಅರಿಯಬೇಕು ಎಂದರು.
ಕಠುಸತ್ಯ ಜನಪ್ರಿಯವಾಗಲು ಸಾಧ್ಯವಿಲ್ಲ. ಸಮಾಜದಲ್ಲಿ ನಡೆಯುವ ತಪ್ಪುಗಳೂ ಮಾಧ್ಯಮದ ಮೇಲೆ ಪರಿಣಾಮ ಬೀರುತ್ತವೆ. ಸಾರ್ವಜನಿಕ ಜೀವನ ಪತ್ರಿಕಾ ಕ್ಷೇತ್ರ, ಕಾರ್ಯಾಂಗ ಪ್ರಜಾಪ್ರಭುತ್ವದ ವ್ಯವಸ್ಥೆಯ ಜೊತೆ ಹೊಂದಿಕೊಂಡು ಹೋಗುವ ಅವಶ್ಯಕತೆ ಇದೆ. ಸಾಧ್ಯವಾದಷ್ಟು ಪತ್ರಿಕಾ ಧರ್ಮ ಪಾಲನೆ ಮಾಡುವಂತಾಗಲಿ ಎಂದು ಆಶಿಸಿದರು.
ಈ ಸಂದರ್ಭದಲ್ಲಿ ನಗರಸಭೆ ಅಧ್ಯಕ್ಷ ಗಣಪತಿ ನಾಯ್ಕ, ಉದ್ಯಮಿ ಶ್ರೀನಿವಾಸ ಹೆಬ್ಬಾರ್, ಉಪೇಂದ್ರ ಪೈ, ಸ್ಕಾಡ್ ವೆಸ್ ಸಂಸ್ಥೆಯ ಕಾರ್ಯನಿರ್ವಾಹಕ ನಿರ್ದೇಶಕ ಡಾ. ವೆಂಕಟೇಶ ನಾಯ್ಕ, ಶಿರಸಿ ಎ.ಪಿ.ಎಮ್.ಸಿ ಅಧ್ಯಕ್ಷ ಪ್ರಶಾಂತ ಗೌಡ , ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಸುಬ್ರಾಯ್ ಭಟ್ ಬಕ್ಕಳ, ಪತ್ರಕರ್ತರ ಸಂಘದ ತಾಲೂಕು ಅಧ್ಯಕ್ಷ ಸಂದೇಶ ಭಟ್, ನಗರಸಭೆ ಉಪಾಧ್ಯಕ್ಷೆ ವೀಣಾ ಶೆಟ್ಟಿ, ಕದಂಬ ನ್ಯೂಸ್‌ನ ರವೀಶ ಹೆಗಡೆ ಇನ್ನಿತರರು ಇದ್ದರು. ಕದಂಬ ನ್ಯೂಸ್‌ನ ಶ್ರೀಧರ್ ಮೊಗೇರ್ ಸಂಸ್ಥೆಯ ಆಶೋತ್ತರಗಳನ್ನು ತಿಳಿಸಿ ವಂದಿಸಿದರು.