ಹೊನ್ನಾವರ : ವರ್ಷಧಾರೆ ಎಡಬಿಡದೆ ಸುರಿಯುವ ಮೂಲಕ ಹೊನ್ನಾವರ ಹಾಗೂ ಉತ್ತರಕನ್ನಡದ ಹಲವೆಡೆ ಭಾರೀ ಆತಂಕ ಸೃಷ್ಟಿಸಿದೆ. ಇಂದು ಮಧ್ಯಾಹ್ನ ಎಡಬಿಡದೆ ಸುರಿದ ಮಳೆಯಿಂದಾಗಿ ಜನ ಜೀವನ ಅಸ್ತವ್ಯಸ್ತವಾಗಿದೆ. ಹೊಳೆ ಹಳ್ಳಗಳು ಮತ್ತೆ ಉಕ್ಕಿ ಹರಿದಿದ್ದು, ಜನತೆಯ ಓಡಾಟಕ್ಕೂ ಮಳೆ ತೊಂದರೆ ಮಾಡಿದೆ.

ತಾಲೂಕಿನ ಹಾಡಿನಬಾಳ, ಗುಂಡುಬಾಳ, ಭಾಸ್ಕೆರಿ ಹಾಗೂ ಇನ್ನಿತರ ನದಿ ಪಾತ್ರದ ಸ್ಥಳಗಳಲ್ಲಿ ಪ್ರವಾಹದ ಭೀತಿ ಎದುರಾಗಿದೆ. ಒಮ್ಮಿಂದ ಮೇಲೆ ಏರಿದ ನೀರಿನ ಪ್ರಮಾಣದಿಂದ ಮನೆಯ ಬಾಗಿಲಿಗೆ ನೀರು ಬಂದು ಮುಟ್ಟಿದೆ ಎಂದು ವರದಿಯಾಗಿದೆ. ಜನತೆ ಮಳೆ ಹೆಚ್ಚಿದರೆ ಇನ್ನೇನು ತೊಂದರೆ ಕಾಡಲಿದೆಯೋ? ಎನ್ನುವ ಭಯದಲ್ಲಿ ಬದುಕು ನಡೆಸುವಂತೆ ಆಗಿದೆ.

ರಾಜ್ಯದ ದಕ್ಷಿಣ ಒಳನಾಡಿನಲ್ಲಿ ಮುಂದಿನ ಮೂರು ದಿನಗಳ ಕಾಲ ಮಳೆರಾಯನ ಅಬ್ಬರ ಹೆಚ್ಚಾಗಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಕರಾವಳಿ, ಉತ್ತರ ಒಳನಾಡು ಸೇರಿದಂತೆ ಹಲವೆಡೆ ಮಳೆಯ ಆರ್ಭಟ ತಗ್ಗಿದೆ. ಮುಂದಿನ ಮೂರು ದಿನ ಮಾತ್ರ ಕರಾವಳಿಯ ಎಲ್ಲಾ ಜಿಲ್ಲೆಗಳಿಗೂ ಯಲ್ಲೋ ಅಲರ್ಟ್ ಘೋಷಿಸಲಾಗಿದೆ.

ಕರಾವಳಿ ಜಿಲ್ಲೆಗಳಾದ ಉಡುಪಿ, ಉತ್ತರ ಕನ್ನಡ, ದಕ್ಷಿಣ ಕನ್ನಡದಲ್ಲಿ ವೇಗವಾಗಿ ಗಾಳಿ ಬೀಸುವ ಸಾಧ್ಯತೆಗಳಿದ್ದು, ಮೀನುಗಾರರಿಗೆ ಸಮುದ್ರಕ್ಕೆ ಇಳಿಯದಂತೆ ಮುನ್ಸೂಚನೆ ನೀಡಲಾಗಿದೆ.

RELATED ARTICLES  ಲೈಟ್ ಫಿಶಿಂಗ್ ಹಾಗೂ ಬುಲ್‍ಟ್ರಾಲ್ ನಿಷೇಧಕ್ಕೆ ಕೇಳಿಬಂದಿದೆ ಒತ್ತಾಯ