ಭಟ್ಕಳ: ಉತ್ತರ ಕನ್ನಡ ಜಿಲ್ಲಾ ಪೊಲೀಸರು 10 ತಂಡಗಳಾಗಿ ಮಂಗಳವಾರ ಬೆಳ್ಳಂಬೆಳಿಗ್ಗೆ ಭಟ್ಕಳದಲ್ಲಿ ಕಾರ್ಯಾಚರಣೆ ನಡೆಸಿ ಉತ್ತರ ಕನ್ನಡ ಹಾಗೂ ಹೊರ ಜಿಲ್ಲೆಗಳಲ್ಲಿ ಅಪರಾಧ ಕೃತ್ಯಗಳನ್ನು ನಡೆಸಿ ಪೋಕ್ಸೋ, ಅಕ್ರಮ ಜಾನುವಾರು ಸಾಗಾಟ, ಗಾಂಜಾ ಪ್ರಕರಣಗಳಿಗೆ ಸಂಬಂಧಿಸಿದಂತೆ ಪೊಲೀಸರಿಗೆ ಬೇಕಾಗಿದ್ದ ಇಬ್ಬರು ಖತರ್ನಾಕ್ ಅಂತರಾಜ್ಯ ಖದೀಮರನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಎಸ್.ಪಿ. ಡಾ. ಸುಮನ್ ಪನ್ನೇಕರ, ಹೆಚ್ಚುವರಿ ಎಸ್.ಪಿ. ಎಸ್. ಬದರಿನಾಥ ಅವರ ಮಾರ್ಗದರ್ಶನದಲ್ಲಿ ಭಟ್ಕಳ ವಿಭಾಗದ ಡಿ.ಎಸ್.ಪಿ. ಬೆಳ್ಳಿಯಪ್ಪ ಕೆ.ಯು ಅವರ ನೇತೃತ್ವದಲ್ಲಿ ಭಟ್ಕಳ ಶಹರ ಠಾಣೆಯ ಸಿ.ಪಿ.ಐ. ದಿವಾಕರ ಪಿ. ಎಮ್., ಭಟ್ಕಳ ಗ್ರಾಮಾಂತರ ಠಾಣೆಯ ಸಿಪಿಐ ಮಹಾಬಲೇಶ್ವರ ನಾಯ್ಕ ಹಾಗೂ ಇತರೆ ಉಪ ವಿಭಾಗಗಳ 10 ಪೊಲೀಸ್ ಅಧಿಕಾರಿಗಳು ಹಾಗೂ 40 ಪೊಲೀಸ್ ಸಿಬ್ಬಂದಿಗಳು ಸೇರಿ ಒಟ್ಟೂ 10 ತಂಡಗಳನ್ನು ರಚಿಸಲಾಗಿ ಈ ತಂಡಗಳು ಮಂಗಳವಾರ ಬೆಳಿಗ್ಗೆ 5 ಗಂಟೆಗೆ ಕಾರ್ಯಾಚರಣೆಗೆ ಇಳಿದು ಅಪರಾಧಗಳ ಹೆಡೆಮುರಿ ಕಟ್ಟಿದ್ದಾರೆ.
ತಾಲೂಕಿನ ಬಿಲಾಲಖಂಡದ ಅಕ್ರಮ ಸಯ್ಯದ ಮೊಹಮ್ಮದ ಹುಸೇನ್ (20) ಹಾಗೂ ಗೋಪಾಲಕೃಷ್ಣ ರೋಡ್‌ನ ನಿವಾಸಿ ಮೊಹಮ್ಮದ ಇಮ್ರಾನ್ ಮೊಹಮ್ಮದ ಬಾಷಾ ಶೇಖ (33) ಬಂದಿತ ಆರೋಪಿಗಳು.
ಆರೋಪಿ ಅಕ್ರಮ ಸಯ್ಯದ ಈತನು ಭಟ್ಕಳ ಶಹರ ಪೊಲೀಸ್ ಠಾಣೆ, ಭಟ್ಕಳ ಗ್ರಾಮೀಣ ಠಾಣಾ ವ್ಯಾಪ್ತಿಯಲ್ಲಿ ಅಕ್ರಮ ಜಾನುವಾರು ಸಾಗಾಟ, ಗಾಂಜಾ ಸಾಗಾಟ, ಮನೆಕಳ್ಳತನ ಮತ್ತು ಸಾಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ದರೋಡೆ ಪ್ರಕರಣ ಹಾಗೂ ಉಡುಪಿ ಜಿಲ್ಲೆಯಲ್ಲಿ ಪೊಕ್ಸೋ ಪ್ರಕರಣದಲ್ಲಿ ಭಾಗಿಯಾಗಿ ತಲೆಮರೆಸಿಕೊಂಡಿದ್ದನು. ಇನ್ನು ಆರೋಪಿ ಮೊಹಮ್ಮದ ಇಮ್ರಾನ್ ಈತನು ಭಟ್ಕಳ ಶಹರ ಪೊಲೀಸ್ ಠಾಣೆ, ಭಟ್ಕಳ ಗ್ರಾಮೀಣ ಠಾಣಾ ವ್ಯಾಪ್ತಿಯಲ್ಲಿ ಅಕ್ರಮ ಜಾನುವಾರು ಸಾಗಾಟ, ಗಾಂಜಾ ಸಾಗಾಟ ಪ್ರಕರಣದಲ್ಲಿ ಭಾಗಿಯಾಗಿ ತಲೆಮರೆಸಿಕೊಂಡಿದ್ದ.