ಹಳಿಯಾಳ: ಮೋಟಾರ್ ಸೈಕಲ್ ಕದ್ದು ಪರಾರಿಯಾಗಿದ್ದ ಆರೋಪಿಯನ್ನು ಉತ್ತರಕನ್ನಡ ಪೊಲೀಸರು ಧಾರವಾಡದಲ್ಲಿ ಬಂಧಿಸಿ ಆತನಿಂದ ಬೈಕ್ ವಶಕ್ಕೆ ಪಡೆದು ಪ್ರಕರಣ ದಾಖಲಿಸಿರುವ ಘಟನೆ ನಡೆದಿದೆ ಎಂದು ತಿಳಿದುಬಂದಿದೆ.
ಧಾರವಾಡ ಮಾದಿಹಾಳದ ಲಾರಿ ಚಾಲಕನಾಗಿರುವ ಮಹ್ಮದ್ ಇಸಾಕ್ ಅಬ್ದುಲ್ ರೆಹಮಾನ್ ಸೌದಾಗರ್ ಎಂಬಾತ ಬಂಧಿತ ಆರೋಪಿ. ಹಳಿಯಾಳ ತಾಲೂಕಿನ ಅಡಿಕೆ ಹುಸೂರಿನ ಮುಬಾರಕ ಘನಿಸಾಬ ತತ್ವಣಗಿ ಎನ್ನುವವರು ಮೇ.25 ರಂದು ಶುಗರ್ಫ್ಯಾಕ್ಟರಿ ಬಳಿ ನಿಲ್ಲಿಸಿದ್ದ ತನ್ನ ಬೈಕ್ ಯಾರೋ ಕದ್ದೊಯ್ದಿರುವ ಬಗ್ಗೆ ಹಳಿಯಾಳ ಠಾಣೆಯಲ್ಲಿ ದೂರು ನೀಡಿದ್ದರು ಎನ್ನಲಾಗಿದೆ.
ಈ ದೂರಿನ ಕುರಿತಾಗಿ ತನಿಖೆ ಕೈಗೊಂಡಿದ್ದ ಪೊಲೀಸರು ಆರೋಪಿಯ ಸುಳಿವಿನ ಖಚಿತ ಮಾಹಿತಿಯ ಮೇರೆಗೆ ಧಾರವಾಡಕ್ಕೆ ತೆರಳಿ ರೈಲು ನಿಲ್ದಾಣದ ಬಳಿ ಆರೋಪಿಯನ್ನು
ಬಂಧಿಸಿ ವಿಚಾರಣೆ ನಡೆಸಿದ್ದಾರೆ. ನಂತರ ಈತನು ಕದ್ದೊಯ್ದ ಬೈಕನ್ನು ವಶಕ್ಕೆ ಪಡೆದು ಕರೆ ತಂದು ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದಾರೆ ಎಂದು ತಿಳಿದುಬಂದಿದೆ.
ಎಸ್.ಪಿ. ಡಾ. ಸುಮನ ಪೆನ್ನೇಕರ, ಅಡಿಷನಲ್
ಎಸ್.ಪಿ. ಎಸ್. ಬದರಿನಾಥ, ದಾಂಡೇಲಿ ವಿಭಾಗದ ಡಿವೈಎಸ್ಪಿ ಗಣೇಶ ಕೆ. ಎಲ್. ಹಾಗೂ ದಾಂಡೇಲಿ ಸಿ.ಪಿ.ಐ. ರಂಗನಾಥ ನೀಲಮ್ಮನವರ ರವರ ಮಾರ್ಗದರ್ಶನದಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಪಿ.ಎಸ್.ಐ. ವಿನೋದ ರೆಡ್ಡಿ ಹಾಗೂ ಹಳಿಯಾಳ ಪಿಎಸ್‌ಐ ಉಮಾ ಬಸರಕೋಡ ಅಚವರ ನೇತ್ರತ್ವದಲ್ಲಿ ಎ.ಎಸ್.ಐ.ಗಳಾದ ಸಂಜು ಬಿ. ಅಣ್ಣಿಗೇರಿ, ಸುರೇಶ ಘಾಟಗೆ,
ಸಿಬ್ಬಂದಿಗಳಾದ ಇಸ್ಲಾಯಿಲ್ ಕೋಣನಕೇರಿ, ಎಮ್. ಎಮ್. ಮುಲ್ಲಾ, ಶ್ರೀಶೈಲ ಜಿ. ಎಮ್, ಸೋಹಲ್ ನಾಗನೂರ ಹಾಗೂ ಉಮಠ ಹನಗಂಡಿ ಇವರು ಈ ಕಾರ್ಯಾಚರಣೆಯಲ್ಲಿ
ಪಾಲ್ಗೊಂಡಿದ್ದರು. ಆರೋಪಿಯನ್ನು ಪತ್ತೆ ಮಾಡಿದ ಎಲ್ಲ ಅಧಿಕಾರಿ, ಸಿಬ್ಬಂದಿಗಳ ಕಾರ್ಯಕ್ಕೆ ಎಸ್ಪಿ ಸುಮನ್ ಪನ್ನೇಕರವರು ಪ್ರಶಂಸೆ ವ್ಯಕ್ತ ಪಡಿಸಿದ್ದಾರೆ ಎಂದು ವರದಿಯಾಗಿದೆ.