ಮಂಡ್ಯ: ಅನಾರೋಗ್ಯದಿಂದ ಬಳಲುತ್ತಿದ್ದ ನಟ ಎಂ.ರವಿಪ್ರಸಾದ್(43) ಬುಧವಾರ ಸಂಜೆ ನಿಧನರಾಗಿದ್ದಾರೆ. ಅನಾರೋಗ್ಯದಿಂದ ಬಳಲುತ್ತಿದ್ದ ಅವರನ್ನು ಬೆಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ. ಬಾಲ್ಯದಲ್ಲೇ ನಾಟಕಗಳಲ್ಲಿ ಅಭಿನಯಿಸುತ್ತಿದ್ದ ರವಿ, ನಂತರ ಬಣ್ಣದ ಲೋಕದತ್ತ ಒಲವು ಬೆಳೆಸಿಕೊಂಡರು. ಎಂಎ(ಇಂಗ್ಲೀಷ್) ಮತ್ತು ಎಲ್ಎಲ್ಬಿ ಮಾಡಿದ್ದರೂ ಆಯ್ಕೆ ಮಾಡಿಕೊಂಡಿದ್ದ ವೃತ್ತಿ ಮಾತ್ರ ನಟನೆ. 1996 ರಲ್ಲಿ ಜನದನಿ ಹವ್ಯಾಸಿ ನಾಟಕ ತಂಡ ಸೇರಿ ಅಲ್ಲಿಂದ ಟಿ.ಎಸ್.ನಾಗಾಭರಣ ನಿರ್ದೇಶನದ ಮಹಾಮಾಯಿ ಧಾರಾವಾಹಿಯಲ್ಲಿ ನಟಿಸುವ ಮೂಲಕ ಕಿರುತೆರೆ ಜಗತ್ತಿಗೆ ಕಾಲಿಟ್ಟರು. ಅನೇಕ ಧಾರಾವಾಹಿಗಳಲ್ಲಿ ನಟಿಸಿದ್ದರು.

RELATED ARTICLES  ಸೆ. 25 ಕ್ಕೆ "ಮೋಕ್ಷ ಸಂಗ್ರಾಮ" ತಾಳಮದ್ದಳೆ.

ಸಾಹಿತಿ ಡಾ.ಎಚ್.ಎಸ್.ಮುದ್ದೇಗೌಡರ ಪುತ್ರರಾದ ರವಿಪ್ರಸಾದ್, ತಂದೆ-ತಾಯಿ, ಇಬ್ಬರು ತಂಗಿಯರು, ಪತ್ನಿ, ಪುತ್ರ ಸೇರಿದಂತೆ ಅಪಾರ ಬಂಧು-ಬಳಗವನ್ನು ಅಗಲಿದ್ದಾರೆ.

ಮಂಡ್ಯದ ಗೆಳೆಯರ ಬಳಗ ಹಾಗೂ ಜನದನಿ ರಂಗಭೂಮಿ ತಂಡದ ಮೂಲಕ ಕಲೆಯ ಗೀಳು ಅಂಟಿಸಿಕೊಂಡ ರವಿಪ್ರಸಾದ್, ಧಾರಾವಾಹಿ ಮತ್ತು ಸಿನಿಮಾಗಳಲ್ಲಿ ನಟಿಸುತ್ತಲೇ ಮಂಡ್ಯ ರವಿ ಆಗಿ ಪ್ರಸಿದ್ಧಿ ಪಡೆದಿದ್ದರು.

RELATED ARTICLES  ನಿಮ್ಮ ಜನ್ಮರಾಶಿಗೆ ಅನುಗುಣವಾಗಿ (ದಿನಾಂಕ 05-02-2019) ಇಂದಿನ ದಿನ ಫಲಾನುಫಲಗಳು ಹೇಗಿರಲಿದೆ ಗೊತ್ತೆ? 

ಮೊದಲು ಬ್ರೇಕ್ ನೀಡಿದ್ದ ಧಾರಾವಾಹಿ ಮಿಂಚು, ನಂತರ ಮುಕ್ತ ಮುಕ್ತ, ಚಿತ್ರಲೇಖ, ಯಶೋಧೆ, ವರಲಕ್ಷ್ಮಿ ಸ್ಟೋರ್ಸ್ ಸೇರಿದಂತೆ ಸಾಕಷ್ಟು ಧಾರಾವಾಹಿಗಳಲ್ಲಿ ನಟಿಸಿದ್ದಾರೆ. ಕೆಲ ವರ್ಷಗಳ ಹಿಂದೆ ಪ್ರಸಾರವಾದ ಮಗಳು ಜಾನಕಿ ಧಾರಾವಾಹಿಯ ಚಂದು ಭಾರ್ಗಿ ಪಾತ್ರದ ಮೂಲಕ ರವಿ ಅಸಂಖ್ಯಾತ ಅಭಿಮಾನಿಗಳನ್ನು ಹೊಂದಿದ್ದರು. ಅಲ್ಲದೆ, ಕಾಫಿ ತೋಟ ಸೇರಿದಂತೆ ಹಲವು ಸಿನಿಮಾಗಳಲ್ಲೂ ಇವರು ನಟಿಸಿದ್ದಾರೆ.