ಬೆಂಗಳೂರು: ಉತ್ತರ ಕನ್ನಡ ಜಿಲ್ಲೆಗೆ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಮಂಜೂರು ಮಾಡಲು ಇನ್ನೂ ರಾಜ್ಯ ಸರ್ಕಾರದ ಆರ್ಥಿಕ ಇಲಾಖೆ ಒಪ್ಪಿಗೆ ನೀಡಿಲ್ಲ. ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಗೆ ಜಾಗ, ಸಿಬ್ಬಂದಿ, ಉಪಕರಣ ಹಾಗೂ ಹಣಕಾಸು ವೆಚ್ಚದ ಬಗ್ಗೆ ಸಲ್ಲಿಸಿದ್ದ ಪ್ರಸ್ತಾವನೆಯನ್ನೇ ಆರ್ಥಿಕ ಇಲಾಖೆ ತಿರಸ್ಕರಿಸಿದೆ. ಉತ್ತರ ಕನ್ನಡ ಜಿಲ್ಲೆಯ ಜನರ ಬಹುದಿನಗಳ ಕೂಗಿಗೆ ರಾಜ್ಯ ಸರ್ಕಾರ ಬಾಯಿಮಾತಿನಲ್ಲಿ ಭರವಸೆ ನೀಡಿದ್ದು ಬಿಟ್ಟರೆ ಸ್ಪಂದನೆ ನೀಡಿಲ್ಲ ಎಂಬ ಮಾತು ಅಭಿವ್ಯಕ್ತಿಯಾಗಿದೆ. ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ನಿರ್ಮಾಣ ವಿಚಾರಕ್ಕೆ ಸಂಬಂಧಿಸಿದಂತೆ ರಾಜ್ಯ ಸರ್ಕಾರದ ಆರ್ಥಿಕ ಇಲಾಖೆ ಒಪ್ಪಿಗೆ ನೀಡಿಲ್ಲ ಎಂಬ ವಿಚಾರ ಸದ್ದು ಮಾಡಿದೆ.
ವಿಧಾನಸಭೆಯಲ್ಲಿ ಕೇಳಲಾದ ಪ್ರಶ್ನೆಗೆ ಆರೋಗ್ಯ ಇಲಾಖೆಯಿಂದ ಉತ್ತರ ನೀಡಲಾಗಿದೆ. ಆಸ್ಪತ್ರೆಗೆ ಆರ್ಥಿಕ ಇಲಾಖೆ ಒಪ್ಪಿಗೆ ಸಿಕ್ಕಿಲ್ಲ, ಮತ್ತೆ ಪ್ರಸ್ತಾವನೆ ಸಲ್ಲಿಸುವುದಾಗಿ ಆರೋಗ್ಯ ಇಲಾಖೆ ಉತ್ತರಿಸಿದೆ. ಆರ್ಥಿಕ ಇಲಾಖೆಯಿಂದ ಅನುಮತಿ ಸಿಕ್ಕಿದರೆ ಮಾತ್ರ ಜಿಲ್ಲೆಗೆ ಆಸ್ಪತ್ರೆ ಮಂಜೂರು ಮಾಡಲಾಗುತ್ತದೆ. ಹೀಗಾಗಿ ಸದ್ಯಕ್ಕೆ ಜಿಲ್ಲೆಯ ಜನರ ಕನಸು ನನಸಾಗುವ ಲಕ್ಷಣಗಳು ಕಾಣುತ್ತಿಲ್ಲ.
ಉತ್ತರ ಕನ್ನಡ ಜಿಲ್ಲೆಗೆ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ನಿರ್ಮಾಣ ವಿಚಾರವನ್ನು ಕಾರವಾರ ಶಾಸಕಿ ರೂಪಾಲಿ ನಾಯ್ಕ ಇಂದು, ಗುರುವಾರ ವಿಧಾನಸಭಾ ಕಲಾಪದಲ್ಲಿ ಪ್ರಸ್ತಾಪಿಸಿದ್ದಾರೆ. ಚರ್ಚೆ ವೇಳೆ ವಿಚಾರ ಪ್ರಸ್ತಾಪಿಸಿದ ರೂಪಾಲಿ ನಾಯ್ಕ ಉತ್ತರ ಕನ್ನಡಕ್ಕೆ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ಬೇಕೆಂದು ಸದನದಲ್ಲೇ ಪಟ್ಟು ಹಿಡಿದರು.
ಉತ್ತರ ಕನ್ನಡ ಜಿಲ್ಲೆಯಲ್ಲಿ ಸೂಪರ್ ಸ್ಪೆಶಾಲಿಟಿ ಆಸ್ಪತ್ರೆ ಇಲ್ಲದೇ ಸಾರ್ವಜನಿಕರು ತೀವ್ರ ಸಮಸ್ಯೆ ಎದುರಿಸುತ್ತಿರುವ ಕುರಿತು ಕಾರವಾರ- ಅಂಕೋಲಾ ಕ್ಷೇತ್ರದ ಶಾಸಕಿ ರೂಪಾಲಿ ನಾಯ್ಕ ಅವರು ವಿಧಾನಸಭೆಯ ಅಧಿವೇಶನದಲ್ಲಿ ಧ್ವನಿ ಎತ್ತಿದರು. ಪ್ರಶ್ನೋತ್ತರದ ಸಂದರ್ಭದಲ್ಲಿ ಜಿಲ್ಲೆಯ ಪ್ರಮುಖ ಸಮಸ್ಯೆ ಕುರಿತು ಶಾಸಕಿ ರೂಪಾಲಿ ನಾಯ್ಕ ಸದನದಲ್ಲಿ ಪ್ರಸ್ತಾಪಿಸಿ ಜಿಲ್ಲೆಯಲ್ಲಿ ಸೂಪರ್ ಸ್ಪೆಶಾಲಿಟಿ ಆಸ್ಪತ್ರೆ ಕುರಿತು ಅನೇಕ ಬಾರಿ ವಿಷಯ ಪ್ರಸ್ತಾಪ ಮಾಡುತ್ತಾ ಬರಲಾಗಿದೆ ಸುಮಾರು 24 ಕ್ಕೂ ಅಧಿಕ ಮನವಿಗಳನ್ನು ಸಲ್ಲಿಸಲಾಗಿದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಮಾತನಾಡಿದ ಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಆರೋಗ್ಯ ಸಚಿವರು ಅನಾರೋಗ್ಯದ ಕಾರಣ ಸದನದಲ್ಲಿ ಉಪಸ್ಥಿತರಿಲ್ಲ ರೂಪಾಲಿ ನಾಯ್ಕ ಅವರು ಅತ್ಯಂತ ಪ್ರಮುಖ ವಿಷಯವನ್ನೇ ಪ್ರಸ್ತಾಪಿಸಬೇಕೆಂದು ಕೊಂಡಿದ್ದಾರೆ. ಮುಂದಿನ ಬಾರಿ ಆರೋಗ್ಯ ಸಚಿವರು ಉಪಸ್ಥಿತರಿದ್ದ ಸಂದರ್ಭದಲ್ಲಿ ಚರ್ಚೆಗೆ ಅವಕಾಶ ನೀಡುವುದಾಗಿ ತಿಳಿಸಿದರಲ್ಲದೇ ತಾವೂ ಸಹ ಧ್ವನಿಗೂಡಿಸುವುದಾಗಿ ತಿಳಿಸಿದರು.
ಇದಕ್ಕೆ ಸಮಾಧಾನವಾಗದ ರೂಪಾಲಿ ನಾಯ್ಕ ಸಭಾಧ್ಯಕ್ಷರೇ ಈಗ ಸಚಿವರ ಆರೋಗ್ಯ ಸರಿ ಇಲ್ಲ ಮುಂದಿನ ವಾರ ನಮ್ಮ ಆರೋಗ್ಯ ಸರಿ ಇಲ್ಲದೇ ಇದ್ದರೆ ವಿಷಯ ಪ್ರಸ್ತಾಪ ವಿಳಂಬ ಆಗುತ್ತಲೇ ಹೋಗುತ್ತದೆ ದಯವಿಟ್ಟು ಕೈ ಮುಗಿದು ಕೇಳಿ ಕೊಳ್ಳುತ್ತೇನೆ. ಉತ್ತರ ಕನ್ನಡ ಜಿಲ್ಲೆಗೆ ಆಸ್ಪತ್ರೆ ಇಲ್ಲದೇ ತುರ್ತು ಸಂದರ್ಭದಲ್ಲಿ ಬೇರೆ ಜಿಲ್ಲೆಗಳಿಗೆ ಹೋಗುವ ಸಂದರ್ಭದಲ್ಲಿ ತುಂಬಾ ಸಮಸ್ಯೆಗಳನ್ನು ಎದುರಿಸಬೇಕಾಗಿದೆ ಎಂದರು.
ಉತ್ತರ ನೀಡಬೇಕಾದ ಆರೋಗ್ಯ ಸಚಿವರು ಹಾಜರು ಇಲ್ಲದ ಕಾರಣ ಈ ಚರ್ಚೆಯನ್ನು ಅವರ ಉಪಸ್ಥಿತಿಯಲ್ಲೇ ನಡೆಸುವುದು ಸಮಂಜಸ ಎಂದು ಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಅವರು ಶಾಸಕಿ ರೂಪಾಲಿ ನಾಯ್ಕ ಅವರಿಗೆ ತಿಳಿಸಿದರು.