ಹಿರೇಗುತ್ತಿ: “ಮನುಷ್ಯ ಹಾಗೂ ಪ್ರಾಣಿಗಳು ಬದುಕಲು ಆಮ್ಲಜನಕ ಅತ್ಯಗತ್ಯ. ಅದೇ ರೀತಿ ಓಝೋನ್ ಕೂಡ ಅಷ್ಟೇ ಮುಖ್ಯ.. ಆದ್ದರಿಂದ ಜೀವರಕ್ಷಕನಾದ ಓಝೋನ್‌ಗೆ ಬೇಕು ಸಂರಕ್ಷಣೆ ” ಎಂದು ಹಿರೇಗುತ್ತಿ ವಲಯ ಅರಣ್ಯಾಧಿಕಾರಿ ಪ್ರವೀಣ ನಾಯಕ ನುಡಿದರು.
ಅವರು ಹಿರೇಗುತ್ತಿ ಸೆಕೆಂಡರಿ ಹೈಸ್ಕೂಲಿನಲ್ಲಿ ವಲಯ ಅರಣ್ಯಾಧಿಕಾರಿಗಳ ಕಾರ್ಯಾಲಯ ಹಿರೇಗುತ್ತಿ ಹಾಗೂ ಸೆಕೆಂಡರಿ ಹೈಸ್ಕೂಲ್, ಪ್ರಕೃತಿ ಇಕೋ ಕ್ಲಬ್ ಇವರ ಸಂಯುಕ್ತಾಶ್ರಯದಲ್ಲಿ ನಡೆದ ವಿಶ್ವ ಓಝೋನ್ ದಿನಾಚರಣೆ ಕಾರ್ಯಕ್ರಮವನ್ನು ಗಿಡಕ್ಕೆ ನೀರೆರೆಯುವ ಮೂಲಕ ಉದ್ಘಾಟಿಸಿ ಮಾತನಾಡಿದರು. “ಮಳೆಗಾಲದಲ್ಲಿ ಕೊಡೆ ನಮ್ಮನ್ನು ಮಳೆಯಿಂದ ರಕ್ಷಿಸುವ ಹಾಗೆ ಓಝೋನ್ ಪದರವು ಅಗೋಚರ ಗುರಾಣಿಯಾಗಿ ಕಾರ್ಯನಿರ್ವಹಿಸುತ್ತದೆ ಈ ಅರ್ಥಪೂರ್ಣ ಕಾರ್ಯಕ್ರಮದ ಪ್ರಯೋಜನವನ್ನು ವಿದ್ಯಾರ್ಥಿಗಳೆಲ್ಲರೂ ಪಡೆದುಕೊಳ್ಳಬೇಕು” ಎಂದರು.
ಮುಖ್ಯ ಅತಿಥಿಗಳಾಗಿ ಆಗಮಿಸಿದ ಶರತ ಶೆಟ್ಟಿ ಆರ್.ಎಫ್.ಓ ಭಟ್ಕಳರವರು ಕಾರ್ಯಕ್ರಮಕ್ಕೆ ಶುಭ ಹಾರೈಸಿದರು.
ಕಾರ್ಯಕ್ರಮದ ಘನ ಅಧ್ಯಕ್ಷತೆ ವಹಿಸಿ ಮಾತನಾಡಿದ ಮುಖ್ಯಾಧ್ಯಾಪಕ ರೋಹಿದಾಸ ಎಸ್ ಗಾಂವಕರ “ ಜೀವರಕ್ಷಕ ಓಝೋನ್ ಪದರಿಗೆ ಬೇಕು ಸಂರಕ್ಷಣೆ, ಸಂರಕ್ಷಣೆಯು ಭೂಮಿಯಲ್ಲಿ ಬದುಕುವ ಪ್ರತಿಯೊಬ್ಬರಿಂದಲೂ ಆಗಬೇಕಾಗಿದೆ ” ಎಂದರು.
ಪ್ರಾಸ್ತಾವಿಕ ನುಡಿಗಳನ್ನಾಡಿದ ಎನ್.ರಾಮು.ಹಿರೇಗುತ್ತಿ “ಈ ಪ್ರಕೃತಿ ಮನುಷ್ಯನಿಗೆ ಬೇಕಾದ ಎಲ್ಲ ಅವಶ್ಯಕತೆಗಳನ್ನು ಪೂರೈಸಿದೆ ಆದರೂ ದುರಾಸೆಯಿಂದ ಮನುಷ್ಯ ಪ್ರಕೃತಿಯ ಶೋಷಣೆ ಮಾಡುತ್ತಿದ್ದಾನೆ. ಪ್ರಕೃತಿ ಮಾತೆ ಮುನಿದರೆ ಮನುಷ್ಯನ ಅಳಿವಿಗೆ ಅರೆಕ್ಷಣ ಸಾಕು ಎಂಬುದನ್ನು ನಾವೆಲ್ಲರೂ ಅರ್ಥಮಾಡಿಕೊಳ್ಳಬೇಕಾಗಿದೆ” ಎಂದರು.
ಕುಮಟಾ ಕಮಲಾ ಬಾಳಿಗಾ ಬಿ.ಎಡ್ ಪ್ರಶಿಕ್ಷಣಾರ್ಥಿ ಮಹಿಮಾ ಜಿ ಗೌಡ “ಓಝೋನ್ ಪದರ ಎಂದರೇನು? ಅದು ಹೇಗೆ ನಿರ್ಮಾಣವಾಗಿದೆ? ಅದನ್ನು ಕಾಪಾಡಿಕೊಳ್ಳುವುದು ಹೇಗೆ? ಎಂಬ ವಿಷಯದ ಕುರಿತು ಮಾತನಾಡಿದರು”.
‘ಓಝೋನ್ ಸಂರಕ್ಷಣೆಯಲ್ಲಿ ವಿದ್ಯಾರ್ಥಿಗಳ ಪಾತ್ರವೇನು’? ಎಂಬ ವಿಷಯದದ ಕುರಿತು ನಡೆದ ಪ್ರಬಂಧ ಸ್ಪರ್ಧೆಯಲ್ಲಿ ವಿಜೇತರಾದ ಪ್ರಥಮ ನಾಗರತ್ನ ಗೌಡ, ದ್ವಿತೀಯ ಕವನ ಜಿ ಗೌಡ, ತೃತೀಯ ನಿರೀಕ್ಷಾ ಡಿ ನಾಯಕ ಇವರಿಗೆ ಬಹುಮಾನ ವಿತರಿಸಲಾಯಿತು. ಬಹುಮಾನ ವಿಜೇತರ ಯಾದಿಯನ್ನು ಬಿ.ಎಡ್ ಪ್ರಶಿಕ್ಷಣಾರ್ಥಿ ಪಾರ್ವತಿ ಜಿ ಹಳ್ಳೇರ ವಾಚಿಸಿದರು.
ಕಾರ್ಯಕ್ರಮ ವೇದಿಕೆಯಲ್ಲಿ ಶಿಕ್ಷಕರಾದ ಬಾಲಚಂದ್ರ ಹೆಗಡೇಕರ, ವಿಶ್ವನಾಥ ಬೇವಿನಕಟ್ಟಿ, ನಾಗರಾಜ ನಾಯಕ, ಜಾನಕಿ ಗೊಂಡ, ಮಹಾದೇವ ಗೌಡ, ಬಾಲಚಂದ್ರ ಅಡಿಗೋಣ, ಇಂದಿರಾ ನಾಯಕ, ಶಿಲ್ಪಾ ನಾಯಕ, ಮದನ ನಾಯಕ, ಕವಿತಾ ಅಂಬಿಗ, ಬಿ.ಇಡಿ ಪ್ರಶಿಕ್ಷಣಾರ್ಥಿಗಳಾದ ವಿದ್ಯಾಧರ ನಾಯಕ ಉಪಸ್ಥಿತರಿದ್ದರು.
ಕಾರ್ಯಕ್ರಮ ನಾಗಶ್ರೀ ಸಂಗಡಿಗರೊಂದಿಗೆ ಆರಂಭವಾಯಿತು. ವಿದ್ಯಾರ್ಥಿ ಪ್ರತಿನಿಧಿ ಎಮ್.ಜಿ ನಾಗಭೂಷಣ ಸರ್ವರನ್ನೂ ಸ್ವಾಗತಿಸಿದರು. ಕಾಂಚಿಕಾ ನಾಯಕ ಕಾರ್ಯಕ್ರಮ ನಿರೂಪಣೆ ಮಾಡಿದರು. ವಿಜೇತ ಗುನಗ ವಂದಿಸಿದರು. ಗೋಪಾಲಕೃಷ್ಣ ಗುನಗಾ, ಗೋವಿಂದ ನಾಯ್ಕ ಸಹಕರಿಸಿದರು.
ವರದಿ : ಎನ್ ರಾಮು ಹಿರೇಗುತ್ತಿ