ಕುಮಟಾ : ಕಾರೊಂದು ರಾತ್ರಿ ಸಮಯದಲ್ಲಿ ಅನುಮಾನಾಸ್ಪದವಾಗಿ ಸಂಚರಿಸಿ ಜನರಲ್ಲಿ ಭಯ ಹುಟ್ಟಿಸಿದ ಘಟನೆ ತಾಲೂಕಿನ ಹೊಳೆಗದ್ದೆಯ ರಾಮನಗಿಂಡಿ ಕ್ರಾಸ್ ಬಳಿ ನಡೆದಿದೆ. ಟೋಲ್ ಗೇಟ್ ಪಾಸ್ ಮಾಡಿಕೊಂಡು ಬಂದ ಕಾರೊಂದು ರಾಮನಗಿಂಡಿ ಕ್ರಾಸ್ ಬಳಿ ರಾತ್ರಿ ಹೊತ್ತು ಅನುಮಾನಾಸ್ಪದವಾಗಿ ನಿಂತುಕೊಂಡಿರುವುದು ಹಲವು ಅನುಮಾನಗಳಿಗೆ ಕಾರಣವಾಗಿದೆ. KA-25 MA 0097 ನೋಂದಣಿ ಹೊಂದಿದ ಕಾರೊಂದು ಆಂಧ್ರಪ್ರದೇಶದ ನೋಂದಣಿ ಹೊಂದಿದ ಬಿಳಿ ಬಣ್ಣದ ಇನ್ನೊಂದು ಐಶಾರಾಮಿ ಕಾರಿನ ಜೊತೆಗೆ ರಾಮನಗಿಂಡಿ ಕ್ರಾಸ್ ಬಳಿ ನಿಂತುಕೊಂಡಿತ್ತು.
ಕೆಲ ಸಮಯದ ಬಳಿಕ ಐಶಾರಾಮಿ ಕಾರು ರಾಮನಗಿಂಡಿ ಕಡಲತೀರದ ಪ್ರದೇಶದಲ್ಲಿ ಅನುಮಾನಾಸ್ಪದವಾಗಿ ಸಂಚರಿಸಿದೆ. ಈ ರಾಮನಗಿಂಡಿ ಕ್ರಾಸ್ ಬಳಿ ನಿಂತುಕೊಂಡಿದ್ದ KA-25 MA 0097 ಪಾಸಿಂಗ್ ಹೊಂದಿದ ಕಾರಿನ ಸಮೀಪವೆ ಚೂರಿಯೊಂದು ಪತ್ತೆಯಾಗಿದೆ. ಇದನ್ನು ಗಮನಿಸಿದ ಸ್ಥಳೀಯರು ಚಾಕು ನೋಡಿ ಗಾಬರಿಗೊಂಡು ಕಾರಿನ ಸಮೀಪ ಹೋಗಲು ಭಯಪಟ್ಟಿದ್ದಾರೆ. ಬಳಿಕ ಈ ಕಾರು ಚೂರಿ ಸಮೇತ ಅಲ್ಲಿಂದ ನಾಪತ್ತೆಯಾಗಿದೆ.
ಇತ್ತಿಚೇಗೆ ಕಳ್ಳಕಾಕರ ಭಯವೂ ಹೆಚ್ಚಾಗಿದ್ದು, ದರೋಡೆಕೋರರ ಕಾರಿರಬಹುದೆ ಎಂಬ ಶಂಕೆ ಸ್ಥಳೀಯರನ್ನು ಕಾಡಿದೆ. ಈಗಾಗಲೇ ಈ ಬಗ್ಗೆ ಕುಮಟಾ ಠಾಣೆ ಪೊಲೀಸರಿಗೆ ಮಾಹಿತಿ ನೀಡಲಾಗಿದೆ. ಸ್ಥಳೀಯರು ಮಾತ್ರ ಈ ಕಾರಿನ ಬಗ್ಗೆ ಆತಂಕದಲ್ಲೆ ರಾತ್ರಿ ಕಳೆಯುವಂತಾಗಿದೆ. ಹೀಗೆ ಅನುಮಾನಾಸ್ಪದವಾಗಿ ಸಂಚರಿಸಿದ ಕಾರಿನ ಬಗ್ಗೆ ಪೊಲೀಸರು ಸೂಕ್ತ ತನಿಖೆ ನಡೆಸಬೇಕೆಂದು ದೇವಗಿರಿ ಗ್ರಾಪಂ ಉಪಾಧ್ಯಕ್ಷ ಎಸ್ ಟಿ ನಾಯ್ಕ ಒತ್ತಾಯಿಸಿದ್ದಾರೆ.