ಹೊನ್ನಾವರ : ಸ್ಪಂದನ ಕೆರೆಕೋಣ, ಹಳೆ ವಿದ್ಯಾರ್ಥಿಗಳ ಸಂಘ ಮತ್ತು ಎಸ್‌ಡಿಎಂಸಿ ಕೆರೆಕೋಣ ಆಶ್ರಯದಲ್ಲಿ ಶಿಕ್ಷಕರ ದಿನಾಚರಣೆಯ ಅಂಗವಾಗಿ ಶಿಕ್ಷಕರಿಗೆ ಅಭಿವಂದನೆ ಕಾರ್ಯಕ್ರಮವನ್ನು ಹಿರಿಯ ಪ್ರಾಥಮಿಕ ಶಾಲೆ ಕೆರೆಕೋಣನಲ್ಲಿ ಆಯೋಜಿಸಲಾಗಿತ್ತು. ಕಾರ್ಯಕ್ರಮವನ್ನು ಹೊನ್ನಾವರ ತಾಲೂಕಾ ಕ್ಷೇತ್ರ ಶಿಕ್ಷಣಾಧಿಕಾರಿ ಜಿಎಸ್ ನಾಯ್ಕ ಉದ್ಘಾಟಿಸಿದರು. ಅವರು ಮಾತನಾಡಿ ಕೆಲವು ಕಡೆ ಶಿಕ್ಷಕರೇ ಮಕ್ಕಳ ಜೊತೆ ಶಿಕ್ಷಕರ ದಿನಾಚರಣೆಯನ್ನು ಆಚರಿಸಿಕೊಳ್ಳುವ ಅನಿವಾರ್ಯತೆ ಹೊಂದಿದ್ದಾರೆ, ಆದರೆ ಕೆರೆಕೋಣಿನಲ್ಲಿ ಹಳೆ ವಿದ್ಯಾರ್ಥಿಗಳು, SDMCಯವರು, ಊರ ನಾಗರಿಕರು ಸೇರಿ ಶಿಕ್ಷಕ ದಿನಾಚರಣೆಯನ್ನು ಆಚರಿಸಿ ಶಿಕ್ಷಕರನ್ನು ಗೌರವಿಸುವುದರ ಮೂಲಕ ಒಂದು ಒಳ್ಳೆಯ ಸಂಪ್ರದಾಯವನ್ನು ಹುಟ್ಟುಹಾಕಿದ್ದಾರೆ, ಇದು ನಿಜಕ್ಕೂ ಮೆಚ್ಚುವಂತಹ ಕಾರ್ಯ ಎಂದರು. ಮುಂದುವರಿದು ಮಕ್ಕಳ ಸರ್ವತೋಮುಖ ಬೆಳವಣಿಗೆಯಲ್ಲಿ ಶಿಕ್ಷಕರ ಪಾತ್ರ ಅತ್ಯಂತ ಪ್ರಮುಖವಾದದ್ದು ಆ ನಿಟ್ಟಿನಲ್ಲಿ ಈ ಶಾಲೆಯ ಶಿಕ್ಷಕರು ಹೆಚ್ಚಿನ ಶ್ರಮ ವಹಿಸುತ್ತಿದ್ದಾರೆ ಎಂದು ಹೇಳಿ, ಕೆರೆಕೋಣ ಶಾಲೆ ಈ ಹಿಂದಿನಿಂದಲೂ ಒಂದು ದೊಡ್ಡ ಮಟ್ಟದ ಹೆಸರನ್ನ ಉಳಿಸಿಕೊಂಡು ಬಂದಿದೆ ಅದಕ್ಕೆ ಇಲ್ಲಿನ ಶಿಕ್ಷಕರ ಜೊತೆ ಪಾಲಕರು, ಊರ ನಾಗರಿಕರೂ ಕಾರಣ ಎಂದರು.
ಕಾರ್ಯಕ್ರಮದ ಮುಖ್ಯ ಅತಿಥಿ ಶಿಕ್ಷಕರ ಸಂಘದ ಜಿಲ್ಲಾ ಗೌರವ ಅಧ್ಯಕ್ಷ ಮತ್ತು ಹೊನ್ನಾವರ ತಾಲೂಕ ಯುವ ಜನ ಸೇವಾ ಮತ್ತು ಕ್ರೀಡಾ ಅಧಿಕಾರಿ ಸುದೀಶ ನಾಯ್ಕ ಮಾತನಾಡಿ ತಮ್ಮದೇ ಶಿಕ್ಷಕರನ್ನು ಗೌರವಿಸುವುದರ ಮೂಲಕ ಶಿಕ್ಷಕರ ಬೆಂಗಾವಲಾಗಿ ನಿಂತಿರುವುದು ಈ ಊರಿನ ಹಳೆ ವಿದ್ಯಾರ್ಥಿ ಸಂಘ ಮತ್ತುSDMC ಹಿರಿಮೆಗೆ ಸಾಕ್ಷಿಯಾಗಿದೆ ಎನ್ನುತ್ತಾ, ಶಿಕ್ಷಕರನ್ನು ಸನ್ಮಾನಿಸಿ ಗೌರವಿಸುವುದರ ಮೂಲಕ ಶಿಕ್ಷಕರ ಜವಾಬ್ದಾರಿಯನ್ನು ಇನ್ನೂ ಹೆಚ್ಚು ಗೊಳಿಸಿದ್ದಾರೆ ಎಂದರು.
ಅರೇಅಂಗಡಿ ಎಸ್ಎಸ್‌ಕೆಪಿ ಹೈಸ್ಕೂಲಿನ ಮುಖ್ಯಾಧ್ಯಾಪಕರಾದ ಪ್ರಕಾಶ ನಾಯ್ಕ ಮಾತನಾಡಿ ಕೆರೆಕೋಣ ಶಾಲೆಯಲ್ಲಿ ಬಹುಮುಖ ಪ್ರತಿಭೆಯುಳ್ಳ ಶಿಕ್ಷಕರು ಇರುವುದರಿಂದ ಇಲ್ಲಿನ ಮಕ್ಕಳು ಪ್ರತಿಭಾವಂತರಾಗಿದ್ದಾರೆ. ಹಾಗಾಗಿ ಇಲ್ಲಿಂದ ಬರುವ ಮಕ್ಕಳೂ ಹೈಸ್ಕೂಲಿನಲ್ಲಿ ವಿವಿಧ ಕ್ಷೇತ್ರಗಳಲ್ಲಿ ಪ್ರತಿಭೆಗಳನ್ನು ತೋರ್ಪಡಿಸುತ್ತಾರೆ ಅದಕ್ಕೆ ಈ ಶಾಲೆಯ ಶಿಕ್ಷಕರ ಪರಿಶ್ರಮವೇ ಕಾರಣ ಎಂದರು. ಗ್ರಾ.ಪಂ ಮಾಜಿ ಅಧ್ಯಕ್ಷ ಕೇಶವ ಶೆಟ್ಟಿ ಮಾತನಾಡಿ ವೃತ್ತಿಯಲ್ಲಿ ಶ್ರೇಷ್ಠವಾದದ್ದು ಶಿಕ್ಷಕ ವೃತ್ತಿ. ಶಿಕ್ಷಕರಿಂದ ಮಾತ್ರ ಸಮಾಜ ಸುಧಾರಣೆಯನ್ನು ಮಾಡುವ ಮಕ್ಕಳನ್ನು ತಯಾರು ಮಾಡಲು ಸಾಧ್ಯ. ಅಂತಹ ಸತ್ಕಾರ್ಯ ನಮ್ಮ ಶಾಲೆಯ ಶಿಕ್ಷಕರಿಂದ ಆಗುತ್ತಿದೆ ಎಂದರು. ತಾಲೂಕಾ ಶಿಕ್ಷಕರ ಸಂಘದ ಅಧ್ಯಕ್ಷ ಎಂ ಜಿ ನಾಯ್ಕ ಮಾತನಾಡಿ ಶಿಕ್ಷಕರನ್ನು ಗೌರವಿಸುವ ಸಾಂಪ್ರದಾಯ ಅಪರೂಪ ವಾಗಿರುವಂಥದ್ದು. ಆದರೆ ಈ ಶಾಲೆಯ ಹಳೆ ವಿದ್ಯಾರ್ಥಿಗಳು ಎಸ್‌ಡಿಎಂಸಿ ಅವರು ಒಳ್ಳೆಯ ಸಂಪ್ರದಾಯವನ್ನು ಅನುಸರಿಸುವುದರ ಮೂಲಕ ಸಮಾಜಕ್ಕೆ ಮಾದರಿಯಾಗಿದ್ದಾರೆ ಅವರಿಗೆ ತಾಲೂಕ ಶಿಕ್ಷಕರ ಸಂಘದ ಪರವಾಗಿ ವಂದನೆ ಸಲ್ಲಿಸುತ್ತೇನೆ ಎಂದರು.
ಸನ್ಮಾನ ಸ್ವೀಕರಿಸಿದ ಶಿಕ್ಷಕರಾದ ಗಣೇಶ ಭಾಗವತ, ಗಾಯತ್ರಿ ನಾಯ್ಕ, ಲಲಿತಾ ಹೆಗಡೆ, ಸಂದೀಪ ಭಟ್ಟ ಮತ್ತು ಅಂಗನವಾಡಿ ಶಿಕ್ಷಕಿ ಶೈಲಾ ಗಣಪತಿ ಹೆಗಡೆ ಮಾತನಾಡಿ ಶಿಕ್ಷಕರಾಗಿ ನಾವು ನಮ್ಮ ಕರ್ತವ್ಯ ನಿರ್ವಹಿಸಿದ್ದೇವೆ ಅಷ್ಟೇ ಆದರೆ ಇಲ್ಲಿನ ಎಸ್ ಡಿಎಂಸಿ ಮತ್ತು ಹಳೆ ವಿದ್ಯಾರ್ಥಿಗಳ ಸಂಘ ನಮ್ಮನ್ನ ಪ್ರೀತಿಪೂರ್ವಕವಾಗಿ ಸನ್ಮಾನಿಸಿ ಗೌರವಿಸಿರುವುದರಿಂದ ನಮ್ಮ ಜವಾಬ್ದಾರಿ ಇನ್ನೂ ಹೆಚ್ಚಾಗಿದೆ ಎಂದು ಹೇಳಿ ಕೃತಜ್ಞತೆ ಸಲ್ಲಿಸಿದರು. ವೇದಿಕೆಯ ಮೇಲೆ ಸಿ.ಆರ್.ಪಿ ವೀಣಾ ಭಂಡಾರಿ ಮತ್ತು ಎಸ್ ಡಿ ಎಂ ಸಿ ಮಾಜಿ ಅಧ್ಯಕ್ಷ ಗಣೇಶ್ ಭಂಡಾರಿ ಉಪಸ್ಥಿತರಿದ್ದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕೆರೆಕೋಣ ಎಸ್‌ಡಿಎಂಸಿ ಅಧ್ಯಕ್ಷ ರಾಮ ಭಂಡಾರಿ ವಹಿಸಿದ್ದರು.
ಈ ಸಂದರ್ಭದಲ್ಲಿ ಶಾಲಾ ಶಿಕ್ಷಕರ ಜೊತೆಗೆ ಕ್ಷೇತ್ರಶಿಕ್ಷಣಾಧಿಕಾರಿಗಳಾದ ಜಿಎಸ್ ನಾಯಕ್ ರವರಿಗೆ, ಶಿಕ್ಷಕರ ಸಂಘದ ಜಿಲ್ಲಾ ಗೌರವ ಅಧ್ಯಕ್ಷ ಮತ್ತು ಶಿಕ್ಷಕ ಸುದೀಶ ನಾಯಕ್ ರವರಿಗೆ, SKP ಮುಖ್ಯಾಧ್ಯಾಪಕ ಪ್ರಕಾಶ ನಾಯಕರಿಗೆ, ತಾಲೂಕ ಶಿಕ್ಷಕರ ಸಂಘದ ಅಧ್ಯಕ್ಷ ಎಂಜಿ ನಾಯಕರಿಗೆ, ಸಿ ಆರ್ ಪಿ ವೀಣಾ ಭಂಡಾರಿ ಅವರಿಗೆ ಶಾಲು ಹೊದೆಸಿ ಸನ್ಮಾನಿಸಿ ಗೌರವ ವಂದನೆ ಸಲ್ಲಿಸಲಾಯಿತು. ಈ ಕಾರ್ಯಕ್ರಮಕ್ಕೆ ಸುಬ್ರಮಣ್ಯ ನಾಯ್ಕ, ನಾರಾಯಣ ಮಡಿವಾಳ, ನಾಗರಾಜ ಶೆಟ್ಟಿ, ಗಜಾನನ ನಾಯಕ ಮುಂತಾದವರು ಸಹಕರಿಸಿದರು.
ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ಮಹೇಶ್ ಭಂಡಾರಿ ಸ್ವಾಗತಿಸಿ ಕಾರ್ಯಕ್ರಮ ನಿರ್ವಹಿಸಿದರು. ಅಪೂರ್ವ ಭಂಡಾರಿ ವಂದಿಸಿದರು.