ಬೆಂಗಳೂರು: ಪಾನಮತ್ತನಾಗಿ ಅಪಘಾತ ಎಸಗಿದ ತಿರುಪತಿ ದೇವಳ ಮಂಡಳಿಯ ಮಾಜಿ ಅಧ್ಯಕ್ಷ, ಹಿರಿಯ ರಾಜಕಾರಣಿಯಾಗಿದ್ದ ಆದಿಕೇಶವಲು ಅವರ ಮೊಮ್ಮಗನನ್ನು ಸಾರ್ವಜನಿಕರು ಹಿಗ್ಗಾಮುಗ್ಗಾ ಥಳಿಸಿ ಜಯನಗರ ಸಂಚಾರ ಪೊಲೀಸರ ವಶಕ್ಕೆ ಒಪ್ಪಿಸಿದ್ದಾರೆ.

ಕಾರಿನಲ್ಲಿ 110 ಗ್ರಾಂ ಗಾಂಜಾ ಪತ್ತೆಯಾಗಿದ್ದು ಈ ಸಂಬಂಧ ಪ್ರತ್ಯೇಕ ಪ್ರಕರಣ ದಾಖಲಾಗಿದೆ.

ಆದಿಕೇಶವಲು ಅವರ ಮೊಮ್ಮಗ ಜಯನಗರ 1ನೇ ಬ್ಲಾಕ್‌ ನಿವಾಸಿ ವಿಷ್ಣು (27) ರಾತ್ರಿ 12.30ರ ಸುಮಾರಿಗೆ ಸೌತ್‌ ಎಂಡ್‌ ವೃತ್ತದಲ್ಲಿ ತನ್ನ ಬೆಂಝ್ ಕಾರನ್ನು ವೇಗವಾಗಿ ಚಲಾಯಿಸಿಕೊಂಡು ಓಮಿನಿ ವ್ಯಾನ್‌ಗೆ ಡಿಕ್ಕಿ ಮಾಡಿದ್ದಾನೆ. ಗುದ್ದಿದ ರಭಸಕ್ಕೆ ವ್ಯಾನ್‌ನ ಮುಂಭಾಗ ಸಂಪೂರ್ಣ ಜಖಂಗೊಂಡು ಅದರಲ್ಲಿದ್ದ ಚಾಲಕ, ಇಬ್ಬರು ಮಹಿಳೆಯರು ಹಾಗೂ ಮೂವರು ಮಕ್ಕಳು ಗಾಯಗೊಂಡಿದ್ದಾರೆ ಎಂದು ಪೊಲೀಸರು ಹೇಳಿದರು.

ಅಪಘಾತದ ನಂತರ ಪರಾರಿಯಾಗಲು ಯತ್ನಿಸಿದ ವಿಷ್ಣುನನ್ನು ಸ್ಥಳೀಯರು‌ ಹಿಡಿದು ಹಿಗ್ಗಾಮುಗ್ಗಾ ಥಳಿಸಿದ್ದಾರೆ. ಅಲ್ಕೋಮೀಟರ್‌ನಿಂದ ತಪಾಸಣೆ ನಡೆಸಿದಾಗ, ‌ವಿಷ್ಣು ದೇಹದಲ್ಲಿ ಮದ್ಯದ ಪ್ರಮಾಣ 150 ಮಿ.ಗ್ರಾಂ ಇತ್ತು. (ಕನಿಷ್ಠ ಮಿತಿ 40 ಮಿ.ಗ್ರಾಂ) ಥಳಿತದಿಂದ ಗಾಯಗೊಂಡಿರುವ ಆತನನ್ನು ಮಲ್ಯ ಆಸ್ಪತ್ರೆಗೆ ದಾಖಲಿಸಲಾಗಿದೆ.

ಇದೇ ಕಾರಿನಲ್ಲಿ ಕನ್ನಡದ ಖ್ಯಾತ ಚಿತ್ರ ನಟ ಪ್ರಜ್ವಲ್ ದೇವರಾಜ್ ಹಾಗೂ ದಿಗಂತ್ ಸಹ ಇದ್ದರು ಎಂಬ ಸ್ಥಳೀಯರ ಹೇಳಿಕೆ ಆಧರಿಸಿ ಜಯನಗರ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

RELATED ARTICLES  ವಿದೇಶಿಗ ಮಾತನಾಡುವ ಕನ್ನಡವನ್ನು ಕೇಳಿದರೆ, ಕನ್ನಡಿಗರೇ ನಾಚುವಂತಿದೆ.!

ನಾನು ಕಾರು ಚಾಲನೆ ಮಾಡಿಲ್ಲ. ಸ್ನೇಹಿತನ ಮನೆಯಲ್ಲಿ ನನ್ನ ಒಂದು ಮೊಬೈಲ್ ಬಿಟ್ಟು ಬಂದಿದ್ದೆ. ಅದನ್ನು ತೆಗೆದುಕೊಂಡು ಬರಲು ಪುನಃ ಸಂತೋಷ್‌ನನ್ನು ಕರೆದುಕೊಂಡು ಹೊರಟಿದ್ದೆ. ಈ ವೇಳೆ ಕಾರು ಚಾಲನೆ ಮಾಡುತ್ತಿದ್ದ ಸಂತೋಷ್ ಸೌತ್‌ ಎಂಡ್‌ ವೃತ್ತದಲ್ಲಿ ಒಮ್ಮೆಲೆ ಎದುರಾದ ವ್ಯಾನ್‌ಗೆ ಡಿಕ್ಕಿ ಮಾಡಿದ. ನಂತರ ಕಾರು ಪಾದಚಾರಿ ಮಾರ್ಗಕ್ಕೆ ನುಗ್ಗಿತು ಎಂದು ವಿಷ್ಣು ಹೇಳಿದ್ದರೂ ಸ್ಥಳೀಯರು ವಿಷ್ಣುವೇ ಚಾಲನೆ ಮಾಡುತ್ತಿದ್ದ ಎಂದು ಹೇಳಿಕೆ ನೀಡಿದ್ದಾರೆ.

ಪ್ರಕರಣ ಸಂಬಂಧ ವಿಷ್ಣು ವಿರುದ್ಧ ಅಜಾಗರೂಕತೆಯಿಂದ ವಾಹನ ಚಲಾಯಿಸಿ ಸಾರ್ವಜನಿಕರ ಜೀವಕ್ಕೆ ಕುತ್ತು ತಂದ ಆರೋಪಗಳಡಿ (ಐಪಿಸಿ 279, 337) ಜಯನಗರ ಸಂಚಾರ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಹಾಗೆಯೇ ಕಾರಿನಲ್ಲಿ ಗಾಂಜಾ ಪತ್ತೆಯಾಗಿದ್ದರಿಂದ ಎನ್‌ಡಿಪಿಎಸ್‌ ಕಾಯ್ದೆ ಅಡಿ ಜಯನಗರ ಕಾನೂನು ಸುವ್ಯವಸ್ಥೆ ಠಾಣೆಯಲ್ಲೂ ಪ್ರತ್ಯೇಕ ಪ್ರಕರಣ ದಾಖಲಾಗಿದೆ. ವಿಷ್ಣು ಮದ್ಯಪಾನದ ಜತೆ ಮಾದಕ ವಸ್ತುವನ್ನೂ ಸೇವಿಸಿದ್ದರೇ ಎಂಬುದನ್ನು ತಿಳಿಯಲು ಅವರ ರಕ್ತದ ಮಾದರಿಯನ್ನು ಎಫ್‌ಎಸ್‌ಎಲ್‌ಗೆ ಕಳುಹಿಸಿದ್ದೇವೆ ಎಂದು ತನಿಖಾಧಿಕಾರಿಗಳು ಹೇಳಿದರು.

ನಟ ಪ್ರಜ್ವಲ್ ಹಾಗೂ ದಿಗಂತ್ ಸಹ ಕಾರಿನಲ್ಲಿದ್ದರು ಎಂದು ಕೆಲವರು ಹೇಳಿದ್ದಾರೆ. ಆದರೆ, ಅದಕ್ಕೆ ಇನ್ನೂ ಪುರಾವೆಗಳು ಸಿಕ್ಕಿಲ್ಲ. ಒಂದು ವೇಳೆ ಅವರು ಕಾರಿನಲ್ಲಿದ್ದರೂ ಅದರಲ್ಲಿ ತಪ್ಪೇನು ಇಲ್ಲ. ಇದ್ದುದೇ ನಿಜವಾದರೆ ಹೇಳಿಕೆ ದಾಖಲಿಸಿಕೊಳ್ಳಬೇಕಾಗುತ್ತದೆ. ಹೀಗಾಗಿ, ಅಪಘಾತ ನಡೆದಾಗ ನಟರಿಬ್ಬರು ಎಲ್ಲಿದ್ದರು ಎಂಬುದನ್ನು ಖಚಿತಪಡಿಸಿಕೊಳ್ಳಲು ಅವರ ಮೊಬೈಲ್‌ ಕರೆಗಳ ವಿವರ ಪರಿಶೀಲಿಸುತ್ತಿದ್ದೇವೆ ಎಂದು ತನಿಖಾಧಿಕಾರಿಗಳು ತಿಳಿಸಿದರು.

RELATED ARTICLES  ದಿನಾಂಕ 19/05/2019 ರ ದಿನ ಭವಿಷ್ಯ ಇಲ್ಲಿದೆ.

ಅಪಘಾತ ವಿಚಾರವು ತೀವ್ರ ವಿವಾದ ಸ್ವರೂಪ ಪಡೆದುಕೊಳ್ಳುತ್ತಿದ್ದಂತೆ ನಟ ಪ್ರಜ್ವಲ್ ಶುಕ್ರವಾರ ಮಧ್ಯಾಹ್ನ ಮಾಧ್ಯಮಗಳು ಹಾಗೂ ಸಾಮಾಜಿಕ ತಾಣಗಳ ಮೂಲಕ ಸ್ಪಷ್ಟನೆ ನೀಡಿದ್ದಾರೆ. ನಾನು ನಾಲ್ಕು ದಿನಗಳಿಂದ ಗೋವಾದಲ್ಲಿದ್ದೇನೆ. ಸಿನಿಮಾ ಚಿತ್ರೀಕರಣದಲ್ಲಿ ನಿರತನಾಗಿದ್ದೇನೆ. ಬೆಂಗಳೂರಿನಲ್ಲಿ ಅಪಘಾತ ನಡೆದಿರುವ ಸಂಗತಿ ಮಾಧ್ಯಮಗಳ ಮೂಲಕ ಗೊತ್ತಾಯಿತು. ವಿಷ್ಣು ನನಗೆ ಸ್ನೇಹಿತನೆಂಬ ಕಾರಣಕ್ಕೆ ಆತನ ಜತೆ ನಾನೂ ಇದ್ದೆ ಎಂದು ಹೇಳುತ್ತಿರುವುದು ಸರಿಯಲ್ಲ ಎಂದು ಹೇಳಿರುವ ಪ್ರಜ್ವಲ್, ತಾವು ಚಿತ್ರೀಕರಣದಲ್ಲಿ ಪಾಲ್ಗೊಂಡಿರುವ ವಿಡಿಯೋವನ್ನು ಫೇಸ್‌ಬುಕ್‌ನಲ್ಲಿ ಆಫ್‌ಲೋಡ್ ಸಹ ಮಾಡಿದ್ದಾರೆ.

ಕನಕಪುರದ ರೆಸಾರ್ಟ್‌ನಲ್ಲಿ ಚಿತ್ರೀಕರಣ ನಡೆಯುತ್ತಿದೆ. ನಾನು ಬುಧವಾರ ಬೆಳಿಗ್ಗೆಯಿಂದಲೂ ರೆಸಾರ್ಟ್‌ನಲ್ಲೇ ಇದ್ದೇನೆ. ನನಗೂ ಅಪಘಾತಕ್ಕೂ ಸಂಬಂಧವಿಲ್ಲ. ವಿನಾ ಕಾರಣ ನನ್ನ ಹೆಸರನ್ನು ತಂದಿರುವುದಕ್ಕೆ ಬೇಸರವಾಗಿದೆ’ ಎಂದು ನಟ ದಿಗಂತ್ ಪ್ರತಿಕ್ರಿಯಿಸಿದ್ದಾರೆ.