ಕುಮಟಾ : ಇಂದು ಬೆಂಗಳೂರಿನ ಐಸಾಕ್ ನ್ಯೂಟನ್ ಹೈಸ್ಕೂಲ್ ಸಭಾಂಗಣ ಐತಿಹಾಸಿಕ ನಿರ್ಧಾರವೊಂದಕ್ಕೆ ಸಾಕ್ಷಿಯಾಗಿದೆ. ರಾಜ್ಯದಲ್ಲಿ ಕಾರ್ಯ ನಿರ್ವಹಿಸುತ್ತಿರುವ ಸರ್ಕಾರಿ ಪ್ರಾಥಮಿಕ ಶಾಲಾ ಗ್ರೇಡ್-2 ದೈಹಿಕ ಶಿಕ್ಷಣ ಶಿಕ್ಷಕರೆಲ್ಲರನ್ನೂ ಒಂದೇ ಸಂಘಟನೆಯಡಿಯಲ್ಲಿ ತರಬೇಕು ಎಂಬ ಸದುದ್ದೇಶವನ್ನಿಟ್ಟುಕೊಂಡು ಇಂದು ಕರೆದಿದ್ದ ದೈಹಿಕ ಶಿಕ್ಷಕರ ಸಭೆಯಲ್ಲಿ 26 ಜಿಲ್ಲೆಗಳ ಪ್ರತಿನಿಧಿಗಳು ಭಾಗವಹಿಸಿ ತಮ್ಮ ಅಭಿಪ್ರಾಯ ಹಂಚಿಕೊಂಡರು. ಅಂತಿಮವಾಗಿ ರಾಜ್ಯದ ಎಲ್ಲಾ ಸರ್ಕಾರಿ ಪ್ರಾಥಮಿಕ ಶಾಲಾ ದೈಹಿಕ ಶಿಕ್ಷಣ ಶಿಕ್ಷಕರು ಕರ್ನಾಟಕ ರಾಜ್ಯ ಸರ್ಕಾರಿ ಪ್ರಾಥಮಿಕ ಶಾಲಾ ಗ್ರೇಡ್-2 ದೈಹಿಕ ಶಿಕ್ಷಣ ಶಿಕ್ಷಕರ ಸಂಘ ದ ಅಡಿಯಲ್ಲಿ ಒಂದಾಗಿ ಮುನ್ನಡೆಯಲು ಒಮ್ಮತದ ನಿರ್ಧಾರ ಕೈಗೊಳ್ಳಲಾಯಿತು. ಸಂಘಟನೆಯ ರಾಜ್ಯಾಧ್ಯಕ್ಷರನ್ನಾಗಿ ಶ್ರೀ ರವೀಂದ್ರ ಭಟ್ಟ ಸೂರಿಯವರನ್ನು ಸರ್ವಾನುಮತದಿಂದ ಆಯ್ಕೆಮಾಡಲಾಯಿತು.
ಎರಡೂ ಸಂಘಗಳೂ ಒಂದುಗೂಡುವ ನಿರ್ಧಾರದ ನಂತರ ಗ್ರೇಡ್-2 ಸಂಘದ ಸಂಸ್ಥಾಪಕರಾದ ಶ್ರೀ ಲೋಕೇಶಪ್ಪನವರೂ ದೂರವಾಣಿ ಸಂಪರ್ಕ ಮಾಡಿ ತಮ್ಮ ಬೆಂಬಲವನ್ನು ಸೂಚಿಸಿದ್ದು ಗ್ರೇಡ್-2 ದೈಹಿಕ ಶಿಕ್ಷಕರ ಸಂತೋಷಕ್ಕೆ ಕಾರಣವಾಯ್ತು. ಇಂದಿನ ಸಭೆಯಲ್ಲಿ ಗ್ರೇಡ್-2 ಸಂಘದ ಅಧ್ಯಕ್ಷರು ಪದಾಧಿಕಾರಿಗಳು, ದೈಹಿಕ ಶಿಕ್ಷಕರ ಸಂಘದ ಪ್ರಧಾನ ಕಾರ್ಯದರ್ಶಿಗಳು ಪದಾಧಿಕಾರಿಗಳು, ವಿವಿಧ ಜಿಲ್ಲಾಧ್ಯಕ್ಷರು,ಪದಾಧಿಕಾರಿಗಳು ಹಾಗೂ ಗ್ರೇಡ್- 1 ಸಂಘದ ಪ್ರಧಾನ ಕಾರ್ಯದರ್ಶಿ ಶ್ರೀ ಶ್ರೀಕಂಠಸ್ವಾಮಿ ಉಪಸ್ಥಿತರಿದ್ದರು.
ಗ್ರೇಡ್- 2 ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ ಶ್ರೀ ಯೋಗೇಶ ಕೊಂಡಾಪುರ ಪ್ರಸ್ತಾವಿಕ ನುಡಿಯೊಂದಿಗೆ ಸ್ವಾಗತಿಸಿದರು. ಗ್ರೇಡ್-2 ಸಂಘದ ಕಲಬುರ್ಗಿ ಜಿಲ್ಲಾ ಕಾರ್ಯದರ್ಶಿ ಶ್ರೀ ಪ್ರಭು ಮಾಚನೂರ ವಂದಿಸಿದರು. ದೈಹಿಕ ಶಿಕ್ಷಕರ ಸಂಘದ ಪ್ರಧಾನ ಕಾರ್ಯದರ್ಶಿ ಶ್ರೀಮತಿ ಪ್ರಮಿಳಾ ಮೇಡಂ ರವರು ಅಚ್ಚುಕಟ್ಟಾಗಿ ಎಲ್ಲಾ ವ್ಯವಸ್ಥೆಯನ್ನೂ ಮಾಡಿದ್ದರು.
ಶಿಕ್ಷಕ ರವೀಂದ್ರ ಭಟ್ಟ ಸೂರಿಯವರು ಸೃಜನಶೀಲ ಶಿಕ್ಷಕರಾಗಿದ್ದು ಶೈಕ್ಷಣಿಕ, ಸಾಹಿತ್ಯ, ಯೋಗದ ಕುರಿತು ವಿದ್ಯಾರ್ಥಿಗಳಲ್ಲಿ ಅರಿವು ಮೂಡಿಸುವುದು, 3000 ಕ್ಕೂ ಅಧಿಕ ಕಾರ್ಯಕ್ರಮ ನಿರೂಪಣೆ, ಶಾಲಾ ಕಾಲೇಜುಗಳಲ್ಲಿ ಉಪನ್ಯಾಸ, ಸಂಪನ್ಮೂಲ ವ್ಯಕ್ತಿಯಾಗಿ ಶೈಕ್ಷಣಿಕ ಕ್ಷೇತ್ರಕ್ಕೆ ಕೊಡುಗೆ, ಸರ್ಕಾರಿ ಶಾಲೆಯಲ್ಲಿ ಮಾಡಿದ ವಿಶೇಷ ಸಾಧನೆ,ಸಂಘಟನಾ ಚತುರತೆ ಗಮನಿಸಿ ಈ ಹಿಂದೆ ಜಿಲ್ಲಾ ಹಾಗೂ ರಾಜ್ಯ ಉತ್ತಮ ಶಿಕ್ಷಕ ಪ್ರಶಸ್ತಿ ಪಡೆದಿದ್ದು, ಅವರ ಅಭಿಮಾನಿಗಳು ಹಾಗೂ ಅವರ ಸ್ನೇಹಿತರು ಅವರಿಗೆ ಅಭಿನಂದನೆ ಸಲ್ಲಿಸಿದ್ದಾರೆ.