ಯಲ್ಲಾಪುರ: ವಿದ್ಯಾರ್ಥಿಗಳಿಗೆ ಉತ್ತಮ ಗುಣಮಟ್ಟದ ಶಿಕ್ಷಣ ಸಿಗಬೇಕು ಎಂಬ ಉದ್ದೇಶದಿಂದ ಶಿಕ್ಷಣ ಕ್ಷೇತ್ರದಲ್ಲಿ ಹಲವು ಯೋಜನೆಗಳನ್ನು ಸರಕಾರ ಜಾರಿಗೆ ತಂದಿದೆ. ಸಾಮಾನ್ಯ ಜ್ಞಾನ ಬೆಳೆಸಿಕೊಳ್ಳಲು ವಿದ್ಯಾರ್ಥಿಗಳು ಮುಂದಾಗಬೇಕು ಎಂದು ಬಹೃತ್ ಮತ್ತು ಮಧ್ಯಮ ಕೈಗಾರಿಕಾ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಆರ್.ವಿ.ದೇಶಪಾಂಡೆ ಹೇಳಿದರು. ಅವರು ಪಟ್ಟಣದ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ನೂತನ ಕಟ್ಟಡವನ್ನು ಉದ್ಘಾಟಿಸಿ ಮಾತನಾಡಿದರು. ಇಂದಿನ ಮಕ್ಕಳಲ್ಲಿ ಸಾಮಾನ್ಯ ಜ್ಞಾನದ ಕೊರತೆಯಿದೆ. ಸಾಮಾನ್ಯ ಜ್ಞಾನ ಹೊಂದಿದ್ದರೆ ಜೀವನದಲ್ಲಿ ಯಶಸ್ಸುಗಳಿಸಲು ಸಾಧ್ಯವಿದೆ. ದೇಶದಲ್ಲಿ ನಿರುದ್ಯೋಗದ ಸಮಸ್ಯೆ ಹೆಚ್ಚಾಗುತ್ತಿದೆ. ಮುಂದಿನ ದಿನಗಳಲ್ಲಿ ಉದ್ಯೋಗ ಸಿಗುವುದು ಕಷ್ಟದಾಯಕವಾಗಿದೆ. ಸಾಕಷ್ಟು ಇಂಜೀನಿಯರ್‍ಗಳು ನಿರುದ್ಯೋಗಿಗಳಾಗುತ್ತಿದ್ದಾರೆ. ಸಣ್ಣ, ಅತೀ ಸಣ್ಣ ಹಾಗೂ ಬೃಹತ್ ಕೈಗಾರಿಕೆಗಳಲ್ಲಿ 14 ಲಕ್ಷ ಉದ್ಯೋಗವನ್ನು ರಾಜ್ಯ ಸರಕಾರದ ಸೃಷ್ಟಿ ಮಾಡಿದೆ. 2015 ರಲ್ಲಿ ವಿಶ್ವದಲ್ಲಿಯೇ ಅತೀ ಹೆಚ್ಚು ಯುವಕರನ್ನು ಹೊಂದಿರುವ ದೇಶ ನಮ್ಮದಾಗಿ ಉದ್ಯೋಗ ನೀಡುವ ದೇಶವಾಗುತ್ತದೆ ಎಂದರು. ಜನಪ್ರತಿನಿಧಿಗಳು ಸಾಮಾನ್ಯ ಜನರಿಗೆ ತಪ್ಪು ಸಂದೇಶ ನೀಡಬಾರದು. ಸರಕಾರ ಜಾರಿಗೆ ತಂದಿರುವ ಯೋಜನೆಗಳನ್ನು ಜನರಿಗೆ ತಲುಪಿಸಬೇಕು. ಮುಖ್ಯಮಂತ್ರಿ ಅನಿಲ ಭಾಗ್ಯ ಯೋಜನೆಯಡಿ ರಾಜ್ಯದ ಬಿ.ಪಿ.ಎಲ್ ಕಾರ್ಡು ಹೊಂದಿರುವ ಕುಟುಂಬಗಳಿಗೆ ಗ್ಯಾಸ್ ಸಿಲಿಂಡರ್ ಮತ್ತು ಒಲೆಯನ್ನು ಉಚಿತವಾಗಿ ವಿತರಿಸಲಾಗುತ್ತಿದೆ. ಪ್ರತಿಯೊಂದು ಸರಕಾರದಲ್ಲಿ ಒಳ್ಳೆಯ ಅಭಿವೃದ್ಧಿ ಕಾರ್ಯಗಳಾಗಿವೆ. ಯಾರ ಬಗ್ಗೆಯೂ ಟೀಕೆ ಸಮಂಜಸವಲ್ಲ. ಅದರಲ್ಲಿಯೂ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರಕಾರದಲ್ಲಿ ಕರ್ನಾಟಕ ಮತ್ತಷ್ಟು ಅಭಿವೃದ್ಧಿ ಸಾಧಿಸಿದೆ ಎಂದ ಅವರು, ಯಲ್ಲಾಪುರ ಜನತೆ ಅಭಿವೃದ್ಧಿಯನ್ನು ಬಯಸುತ್ತಾರೆ. ಶಿವರಾಮ ಹೆಬ್ಬಾರ ಶಾಸಕರಾಗಿ ಆಯ್ಕೆಯಾದ ನಂತರ ಯಲ್ಲಾಪುರದಲ್ಲಿ ಅಭಿವೃದ್ಧಿ ಯುಗ ಆರಂಭವಾಗಿದೆ. ಮಾತನಾಡುವ ಜನ ಹಲವಾರು ಮಂದಿ ಇದ್ದಾರೆ. ಅವರಲ್ಲಿ ಯಾವ ಕೆಲಸವು ಆಗುವುದಿಲ್ಲ. ಮಾತು ಕಡಿಮೆಯಾಗಿ, ಕೆಲಸ ಹೆಚ್ಚಾಗಬೇಕಿದೆ ಎಂದರು.
ರಾಜ್ಯದ ಕಾಂಗ್ರೆಸ್ ಸರಕಾರ ಆರೋಗ್ಯ, ಶಿಕ್ಷಣ, ಸಾಮಾಜಿಕ ನ್ಯಾಯಕ್ಕೆ ಹೆಚ್ಚು ಮಹತ್ವ ನೀಡಿದೆ. ಎಲ್ಲ ವರ್ಗದ ಜನರಿಗೆ ಉಚಿತವಾಗಿ ಆರೋಗ್ಯ ಸೌಲಭ್ಯ ಸಿಗಬೇಕು ಎಂಬ ಉದ್ದೇಶದಿಂದ ಬರುವ ನವೆಂಬರ್‍ನಲ್ಲಿ ಆರೋಗ್ಯ ಭಾಗ್ಯ ಯೋಜನೆಯನ್ನು ಆರಂಭಿಸಲಾಗುತ್ತದೆ. ಹಲವಾರು ಅಭಿವೃದ್ಧಿ ಯೋಜನೆಗಳನ್ನು ಜಾರಿಗೆ ತರುವ ಮೂಲಕ ದೇಶದಲ್ಲಿ ಕರ್ನಾಟಕ ಅಭಿವೃದ್ಧಿ ಪಥದಲ್ಲಿ ಪ್ರಥಮ ಸ್ಥಾನದಲ್ಲಿದೆ. ಯುವಕ ಯುವತಿಯರಿಗೆ ಕೌಶಲ್ಯಾಭಿವೃದ್ಧಿ ತರಬೇತಿ ನೀಡುವ ಯೋಜನೆಗಳನ್ನು ಸದ್ಯದಲ್ಲಿಯೇ ಜಾರಿಗೆ ತರಲಾಗುತ್ತದೆ ಎಂದರು.
ಅಧ್ಯಕ್ಷತೆ ವಹಿಸಿದ್ದ ಶಾಸಕ ಶಿವರಾಮ ಹೆಬ್ಬಾರ ಮಾತನಾಡಿ, ಯಲ್ಲಾಪುರ ತಾಲೂಕಿಗೆ ಅಬಿವೃದ್ಧಿ ದೃಷ್ಟಿಯಿಂದ ಒಂದು ಮೈಲುಗಲ್ಲಾಗಿದೆ. ಹೇಳಿದ್ದನ್ನು ಮಾಡಿದ್ದೇವೆ. ಮಾಡಿದ್ದನ್ನು ಹೇಳಿಲ್ಲ. ರಾಜ್ಯ ಸರಕಾರ ಸಾಮಾಜಿಕ ನ್ಯಾಯ ನೀಡಲು ಅನೇಕ ಯೋಜನೆಗಳನ್ನು ಅನುಷ್ಠಾನಗೊಳಿಸಿದೆ. ಎಲ್ಲ ವರ್ಗದ ಜನರು ಶಿಕ್ಷಣ ಕ್ಷೇತ್ರದಲ್ಲಿ ಮುಂದೇ ಬರಬೇಕು. ಬಡತನ ನಿರ್ಮೂಲನೆ ಮಾಡಲು ಹತ್ತು ಹಲವು ಜನಪರ ಯೋಜನೆಗಳು ಕಾರ್ಯರೂಪವಾಗಿವೆ ಎಂದರು.
ಪಟ್ಟಣ ಪಂಚಾಯತ ಅಧ್ಯಕ್ಷ ಶಿರೀಷ ಪ್ರಭು, ತಾ.ಪಂ ಅಧ್ಯಕ್ಷೆ ಭವ್ಯಾ ಶೆಟ್ಟಿ, ಖಾದಿ ಗ್ರಾಮೋದ್ಯೋಗ ಮಂಡಳಿ ನಿರ್ದೇಶಕ ವಿಜಯ ಮಿರಾಶಿ, ಜಿ.ಪಂ ಸದಸ್ಯರಾದ ಶ್ರತಿ ಹೆಗಡೆ, ರೂಪಾ ಬೂರ್ಮನೆ, ತಹಸೀಲ್ದಾರ ಡಿ.ಜಿ.ಹೆಗಡೆ, ಕ್ಷೇತ್ರ ಶಿಕ್ಷಣಾಧಿಕಾರಿ ಎನ್.ಆರ್.ಹೆಗಡೆ, ಎ.ಪಿ.ಎಂ.ಸಿ ನಿರ್ದೇಶಕ ಎಂ.ಜಿ.ಭಟ್ಟ ಸಂಕದಗುಂಡಿ ಮತ್ತಿತರರು ಉಪಸ್ಥಿತರಿದ್ದರು. ಶ್ವೇತಾ ಸಂಗಡಿಗರು ಪ್ರಾರ್ಥಿಸಿದರು. ಪದವಿ ಪೂರ್ವ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಕೆ.ಟಿ.ಭಟ್ಟ ಸ್ವಾಗತಿಸಿ ಪ್ರಾಸ್ತಾವಿಕ ಮಾತನಾಡಿದರು. ಉಪನ್ಯಾಸಕ ಜಿ.ಎಚ್.ನಾಯಕ ನಿರೂಪಿಸಿ ವಂದಿಸಿದರು.