ಕುಮಟಾ: ಇಲ್ಲಿನ ತಾಲೂಕಾ ಪಂಚಾಯತದ ಸಭಾಭವನದಲ್ಲಿ ಸರಕಾರಿ ಪ್ರೌಢಶಾಲಾ ವಿದ್ಯಾರ್ಥಿಗಳಿಗಾಗಿ ಸ್ಥಳೀಯ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ ಹಾಗೂ ತಾಲೂಕಾ ಪ್ರೌಢಶಾಲಾ ಸಮಾಜ ವಿಜ್ಞಾನ ಶಿಕ್ಷಕರ ಸಂಘದ ಸಂಯುಕ್ತ ಆಶ್ರಯದಲ್ಲಿ ತಾಲೂಕಾ ಮಟ್ಟದ ಅಣಕು ಸಂಸತ್ ಸ್ಪರ್ಧೆಯು ನಡೆಯಿತು. ತಾಲೂಕಿನ ಒಟ್ಟು 8 ಸರಕಾರಿ ಪ್ರೌಢಶಾಲೆಗಳಿಂದ ತಲಾ ಐವರು ವಿದ್ಯಾರ್ಥಿಗಳಂತೆ 40 ವಿದ್ಯಾರ್ಥಿಗಳು ಈ ಸ್ಪರ್ಧೆಯಲ್ಲಿ ಭಾಗವಹಿಸಿದ್ದರು.
ಇವರಲ್ಲಿ ಸರಕಾರಿ ಪ್ರೌಢಶಾಲೆ ಬರ್ಗಿಯ ವಿದ್ಯಾರ್ಥಿಗಳಾದ ಆದಿತ್ಯ ವಿವೇಕ ಪಟಗಾರ, ಸುಜಲ ಶಿವಾನಂದ ಪಟಗಾರ, ಆಕಾಶ ಉದಯ ಹರಿಕಾಂತ, ಎನ್. ನಾಗಲಕ್ಷ್ಮಿ, ಸರಕಾರಿ ಪ್ರೌಢಶಾಲೆ ವನ್ನಳ್ಳಿಯ ವಿದ್ಯಾರ್ಥಿಗಳಾದ ಕವನಾ ಸುಬ್ರಾಯ ನಾಯ್ಕ, ಸಿಂಚನಾ ಮಹೇಶ ನಾಯ್ಕ, ಶೋಭಿತಾ ಕಾಂತು ನಾಯ್ಕ, ಕೆಪಿಎಸ್ ನೆಲ್ಲಿಕೇರಿಯ ವಿದ್ಯಾರ್ಥಿಗಳಾದ ನವ್ಯಾ ರಾಮಚಂದ್ರ ಹೆಬ್ಬಾರ, ನಿಯತಿ ರಾಜೇಶ ನಾಯಕ, ದೀಕ್ಷಿತಾ ಶ್ರೀಧರ ಕೋರಗಾಂವಕರ, ಸರಕಾರಿ ಪ್ರೌಢಶಾಲೆ ಬೇಲೆಗದ್ದೆಯ ನೇಹಾಲ್ ಭೂತೆ ಹಾಗೂ ಸಾಯಿಪ್ರಸಾದ ಮೂಡಂಗಿ ಸೇರಿದಂತೆ ಒಟ್ಟು 12 ವಿದ್ಯಾರ್ಥಿಗಳು ಜಿಲ್ಲಾ ಮಟ್ಟದಲ್ಲಿ ನಡೆಯಲಿರುವ ಅಣಕು ಸಂಸತ್ ಸ್ಪರ್ಧೆಗೆ ಆಯ್ಕೆಯಾಗಿರುತ್ತಾರೆ.
ಸ್ಪರ್ಧೆಗೆ ಪೂರ್ವಭಾವಿಯಾಗಿ ಕರ್ನಾಟಕ ರಾಜ್ಯ ಬೋಧಕರ ಸಂಘದ ರಾಜ್ಯಾಧ್ಯಕ್ಷರಾದ ಮಂಜುನಾಥ ಗಾಂವಕರ ಬರ್ಗಿಯವರು ಸ್ಪರ್ಧಾಳುಗಳೊಂದಿಗೆ ರಾಜನೀತಿ ಶಾಸ್ತ್ರಕ್ಕೆ ಸಂಬಂಧಿಸಿದಂತೆ ಸಮಾಲೋಚಿಸಿದರು. ಸಂಘದ ರಾಜ್ಯ ಸಂಚಾಲಕರಾದ ವಿಜಯಕುಮಾರ ನಾಯ್ಕ ರವರು ಸುಗಮಕಾರರಾಗಿ ಕಾರ್ಯ ನಿರ್ವಹಿಸಿದರು. ಸಮಾಜ ವಿಜ್ಞಾನ ಶಿಕ್ಷಕ ಸಂಘದ ಅಧ್ಯಕ್ಷರಾದ ದಯಾನಂದ ದೇಶಭಂಡಾರಿ, ಸಮೂಹ ಸಂಪನ್ಮೂಲ ವ್ಯಕ್ತಿ ಉಮೇಶ ನಾಯ್ಕ ಹಾಗೂ ಶಿಕ್ಷಣ ಸಂಯೋಜಕಿ ಎ. ಪಿ. ಜಯಶ್ರೀ ತೀರ್ಪುಗಾರರಾಗಿದ್ದರು.
ಸ್ಫರ್ಧೆಯ ಮುನ್ನ ತಾಲೂಕಾ ಪಂಚಾಯತದ ಪ್ರಭಾರ ಕಾರ್ಯನಿರ್ವಹಣಾಧಿಕಾರಿ ನಾಗರತ್ನಾ ನಾಯಕ ರವರ ಅಧ್ಯಕ್ಷತೆಯಲ್ಲಿ ನಡೆದ ಸಭಾ ಕಾರ್ಯಕ್ರಮವನ್ನು ಕೆನರಾ ಹೆಲ್ತ್ ಸೆಂಟರ್ ನ ವೈದ್ಯ ಡಾII ಜಿ ಜಿ ಹೆಗಡೆ ಉದ್ಘಾಟಿಸಿದರು. ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ರಾಜೇಂದ್ರ ಭಟ್ಟ ರವರು ಸ್ವಾಗತಿಸಿ- ಪ್ರಾಸ್ತಾವಿಕ ನುಡಿಗಳನ್ನಾಡಿದರು. ಶಿಕ್ಷಣ ಸಂಯೋಜಕಿ ದೀಪಾ ಕಾಮತ ಪ್ರಾರ್ಥಿಸಿದರು.