ಕುಮಟಾ: ತಮ್ಮ ಆಸಕ್ತಿಯ ಕ್ಷೇತ್ರವನ್ನೇ ವೃತ್ತಿಯನ್ನಾಗಿ ಆರಿಸಿಕೊಂಡು ಮುಂದುವರೆದರೆ ಜೀವನದಲ್ಲಿ ಆನಂದ ಸಾಧ್ಯ.ಅಂಕಗಳ ಹಿಂದೆ ಓಡಬೇಡಿ ಜ್ಞಾನಾರ್ಜನೆಯ ಹಿಂದೆ ಓಡಿ ಅಂಕಗಳು ನಿಮ್ಮನ್ನು ಹಿಂಬಾಲಿಸುತ್ತವೆ ಎಂದು ಪಾರ್ತಗಾಳಿ ಮಠದ ಶ್ರೀ ಶ್ರೀಮದ್ ವಿದ್ಯಾಧೀಶ ಶ್ರೀಪಾದರು ಆಶೀರ್ವಚನದಲ್ಲಿ ವಿದ್ಯಾರ್ಥಿಗಳಿಗೆ ಕಿವಿ ಮಾತನ್ನು ಉಪದೇಶಿಸಿದರು. ಅಲ್ಲದೇ ಮನೆತನದ ಆಚಾರ ವಿಚಾರಗಳನ್ನು ಮುಂದುವರೆಸಿಕೊಂಡು ಹೋಗಬೇಕು. ಒಂದಲ್ಲ ಒಂದು ವಿದ್ಯೆಗಳಲ್ಲಿ ಮಕ್ಕಳು ದೈವದತ್ತ ಪ್ರತಿಭೆಯನ್ನು ಹೊಂದಿರುತ್ತಾರೆ ಅದನ್ನು ಶಿಕ್ಷಕರು ಹಾಗೂ ಪಾಲಕರು ಗುರುತಿಸಿ ಪ್ರೋತ್ಸಾಹಿಸಬೇಕು ಎಂದರು. ವಿದ್ಯೆಯ ಮಹತ್ವವನ್ನು ವಿವಿಧ ದೃಷ್ಟಾಂತಗಳ ಮೂಲಕ ವಿಷದೀಕರಿಸಿದರು. ಪರ್ತಗಾಳಿ ಗುರುಪರಂಪರೆಯ ಇಪ್ಪತ್ತನೇ ಪೀಠಾಪತಿಗಳಾದ ಶ್ರೀಮದ್ ಇಂದಿರಾಕಾಂತ ತೀರ್ಥರ ಅಮೃತ ಹಸ್ತದಿಂದ ಉದ್ಘಾಟನೆಗೊಂಡ ಗಿಬ್ ಸಂಸ್ಥೆಗೆ 20ನೇ ತಾರೀಕಿಗೆ ಆಗಮಿಸಿರುವುದು ವಿಶೇಷ ಎಂದರು.
ಗಿಬ್ ಸಮೂಹ ಸಂಸ್ಥೆಯ ಮಹಾತ್ಮಾ ಗಾಂಧಿ ಪ್ರೌಢಶಾಲೆಗೆ ಮೊದಲು ಭೇಟಿ ನೀಡಿದ ಶ್ರೀಗಳಿಗೆ ಪೂರ್ಣ ಕುಂಭ ಸ್ವಾಗತವನ್ನು ನೀಡಲಾಯಿತು. ಶಾಲಾ ಪರಿಸರ ವೀಕ್ಷಿಸಿದ ಶ್ರೀಗಳು ಮುಖ್ಯ ಶಿಕ್ಷಕರ ಕೊಠಡಿಯಲ್ಲಿ ಜ್ಞಾನದ ಪ್ರತೀಕವಾದ ದೀಪ ಪ್ರಜ್ವಲಸಿ ಮಂಗಳಾರತಿ ಸ್ವೀಕರಿಸಿದರು. ಅಂತೆಯೇ ಗಿಬ್ ಪ್ರಾಥಮಿಕ ಶಾಲೆ, ಗಿಬ್ ಆಂಗ್ಲ ಮಾಧ್ಯಮ ಪ್ರೌಢಶಾಲೆ, ಗಿಬ್ ಪ್ರೌಢಶಾಲೆ, ಗಿಬ್ ಬಾಲಕಿಯರ ಪ್ರೌಢಶಾಲೆಗೆ ತೆರಳಿ ಶೈಕ್ಷಣಿಕ ಪರಿಸರವನ್ನು ವೀಕ್ಷಿಸಿ, ವಿದ್ಯಾರ್ಥಿಗಳೊಂದಿಗೆ ಲಘು ಹಾಸ್ಯದೊಂದಿಗೆ ತಮ್ಮ ಪೂರ್ವಾಶ್ರಮದ ದಿನಗಳನ್ನು ನೆನಪಿಸಿಕೊಂಡರು.
ಸಭಾ ಕಾರ್ಯಕ್ರಮವು ಗಿಬ್ ಬಾಲಕಿಯರ ಪ್ರೌಢಶಾಲೆಯ ಶ್ರೀಮದ್ ಇಂದಿರಾ ಕಾಂತ ಭವನ( ಪಾರ್ಥನಾ ಮಂದಿರ)ದಲ್ಲಿ ಆಯೋಜಿಸಲಾಗಿತ್ತು. ವೈದಿಕರ ವೇದಘೋಷದಿಂದ ಶುಭಾರಂಭಗೊಂಡ ಕಾರ್ಯಕ್ರಮದಲ್ಲಿ ಕಾರ್ಯಾಧ್ಯಕ್ಷ ವಸುದೇವ ಪ್ರಭು ಸ್ವಾಗತ ಹಾಗೂ ಪ್ರಸ್ತಾವಿಕ ನುಡಿಗಳನ್ನು ನುಡಿದರು. ಗಿಬ್ ಸಮೂಹ ಸಂಸ್ಥೆಯ ವಿದ್ಯಾರ್ಥಿನಿಯರು ಮನೋಜ್ಞವಾದ ನೃತ್ಯ ರೂಪಕದ ಸ್ವಾಗತವನ್ನು ಶ್ರೀಗಳ ಚರಣದಲ್ಲಿ ಅರ್ಪಿಸಿದರು. ಸಂಸ್ಥೆಯ ಉಪಾಧ್ಯಕ್ಷ ಮೋಹನ ಶಾನಭಾಗ ಹಾಗೂ ಕಾರ್ಯದರ್ಶಿ ಶ್ರೀನಿವಾಸ ಪ್ರಭು ಗುರು ಪಾದ್ಯಪೂಜೆ, ಗೌರವಾರ್ಪಣೆ ಸಲ್ಲಿಸಿದರು. ಕಾರ್ಯಕ್ರಮಕ್ಕೆ ಕೆನರಾ ಎಜುಕೇಶನ್ ಸೊಸೈಟಿಯ ಸರ್ವ ನಿರ್ದೇಶಕರು, ಗಿಬ್ ಸಮೂಹ ಸಂಸ್ಥೆಯ ಸ್ಥಳೀಯ ವಿದ್ಯಾರ್ಥಿ- ವಿದ್ಯಾರ್ಥಿನಿಯರು, ಎಲ್ಲಾ ಶಾಲೆಗಳ ಮುಖ್ಯಾಧ್ಯಾಪಕರು, ಶಿಕ್ಷಕ ಶಿಕ್ಷಕೇತರ ಸಿಬ್ಬಂದಿಗಳು, ಶಾಲಾಭಿಮಾನಿಗಳು ಉಪಸ್ಥಿತರಿದ್ದರು. ಕಾರ್ಯಕ್ರಮದ ನಿರ್ವಹಣೆಯನ್ನು ಮುಖ್ಯಾಧ್ಯಾಪಕ ವಿನಾಯಕ ಶಾನಭಾಗ ನೇತೃತ್ವದ ಸಿಬ್ಬಂದಿ ವರ್ಗ ಅಚ್ಚುಕಟ್ಟಾಗಿ ನಿರ್ವಹಿಸಿತು. ಕೊನೆಯಲ್ಲಿ ನೆರೆದ ಸರ್ವರಿಗೂ ಗುರುಗಳು ಫಲಮಂತ್ರಾಕ್ಷತೆಯನ್ನು ನೀಡಿ ಆಶೀರ್ವದಿಸಿದರು.