ರಾಯಚೂರು: ಕೃಷ್ಣಾ ನದಿಯಲ್ಲಿ ಕೊಚ್ಚಿಕೊಂಡು ಹೋಗುತ್ತಿದ್ದ ಅಣ್ಣನ ಮಗಳನ್ನು ಕಾಪಾಡಲು ಹೋಗಿ ಅಣ್ಣತಮ್ಮಂದಿರಿಬ್ಬರು ನದಿಯಲ್ಲಿ ಕೊಚ್ಚಿ ಹೋದ ಘಟನೆ ರಾಯಚೂರು ತಾಲೂಕಿನ ದೇವದುರ್ಗದ ಕೋಪ್ಪರ ಗ್ರಾಮದ ಬಳಿ ಸಂಭವಿಸಿದ ವರದಿಯಾಗಿದೆ. ಕೊಚ್ಚಿ ಹೋದವರನ್ನು ರಜಾಕ್ ಮುಲ್ಲಾಉಸ್ಮಾನ್ (35), ಮೌಲಾಲಿ ಉಸ್ಮಾನ (32) ಎಂದು ಹೇಳಲಾಗಿದೆ. ಕೊಪ್ಪರ ಗ್ರಾಮದ ಇವರು ಕುಟುಂಬ ಸಮೇತ ನದಿ ದಂಡೆಯಲ್ಲಿ ಬಟ್ಟೆ ತೊಳೆಯಲು ಹೋಗಿದ್ದರು. ಈ ಸಂದರ್ಭದಲ್ಲಿ ಅವರ ಅಣ್ಣನ ಮಗಳು ಕಾಲು ಜಾರಿ ನೀರಿಗೆ ಬಿದ್ದು ಕೊಚ್ಚಿಕೊಂಡು ಹೋಗುವುದನ್ನು ನೋಡಿ, ಆಕೆಯ ರಕ್ಷಣೆಗಾಗಿ ನೀರಿಗೆ ಇಳಿದಿದ್ದಾರೆ.ಆದರೆ ಈಜುಬಾರದ ಕಾರಣ ಹಾಗೂ ನೀರಿನ ಸೆಳೆತ ಜೋರಾಗಿದ್ದುದರಿಂದ ಇಬ್ಬರೂ ಕೊಚ್ಚಿಕೊಂಡು ಹೋಗಿದ್ದಾರೆ.
ಆದರೆ ಸ್ಥಳೀಯರು ಬಾಲಕಿಯನ್ನು ರಕ್ಷಣೆ ಮಾಡಿದ್ದಾರೆ. ಕುಟುಂಬದವರ ಮುಂದೆಯೇ ಇಬ್ಬರೂ ಸೋದರರು ಕೊಚ್ಚಿಕೊಂಡು ಹೋಗಿದ್ದಾರೆ. ಕುಟುಂಸ್ಥರ ಆಕ್ರಂದನ ಮುಗಿಲುಮುಟ್ಟಿದೆ. ದುಡಿಮೆಗಾಗಿ ಇಬ್ಬರೂ ಹುಬ್ಬಳ್ಳಿಯಲ್ಲಿ ವಾಸವಾಗಿದ್ದರು. ಗ್ರಾಮದಲ್ಲಿ ಉರುಸು ಇದ್ದ ಕಾರಣ ಬಂದಿದ್ದರು.
ಈ ಸುದ್ದಿ ತಿಳಿಯುತ್ತಿದಂತೆ ದೇವದುರ್ಗ ತಹಶೀಲ್ದಾರ್ ಶ್ರೀನಿವಾಸ ಚಾಪಲ್ ಸ್ಥಳಕ್ಕೆ ಭೇಟಿ ನೀಡಿದ್ದಾರೆ. ಸ್ಥಳಕ್ಕೆ ಭೇಟಿ ನೀಡಿದ್ದಾರೆ. ಹಾಗೂ ತಕ್ಷಣವೇ ಅಗ್ನಿಶಾಮಕ ದಳ ಸಿಬ್ಬಂದಿ ಮತ್ತು ನುರಿತ ಈಜುಗಾರರನ್ನು ಕರೆಸಿದ್ದು ಶೋಧಕಾರ್ಯಚರಣೆ ನಡೆಸಲಾಗಿದೆ. ಕೃಷ್ಣಾನದಿಯಲ್ಲಿ ಅಧಿಕ ಪ್ರಮಾಣದಲ್ಲಿ ನೀರು ಹರಿಯುತ್ತಿದ್ದು, ಮಂಗಳವಾರದಿಂದ ಹುಡುಕಾಟ ನಡೆಸಿದರೂ ಸಹೋದರರ ಸುಳಿವು ಸಿಗದ ಹಿನ್ನೆಲೆಯಲ್ಲಿ ಬುಧವಾರ ಬೆಳಿಗ್ಗೆ ಎನ್‌ಡಿಆರ್‌ಎಫ್ ತಂಡವು ಕಾರ್ಯಾಚರಣೆ ಮುಂದುವರಿಸಿದೆ.