ಅಂಕೋಲಾ : ತಾಯಿತನ ಹಾಗೂ ಮಾತೃಪ್ರೇಮ ಅದೆಂತಹುದೇ ಸಂದರ್ಭದಲ್ಲಿಯೂ ಒಡಮೂಡಬಹುದು ಎಂಬುದಕ್ಕೆ ಸಾಕ್ಷ್ಯವಾದ ಘಟನೆಯೊಂದು ನಡೆದಿದೆ. ಈ ಘಟನೆ ಎಂತಹುದೇ ಜನರನ್ನೂ ಮನ ಕಲಕುವಂತೆ ಇದೆ.
ಬಡತನವೂ ಹಾಗೆಯೇ ಆ ಸಂದರ್ಭದಲ್ಲಿ ಎಂತಹ ನಿರ್ಣಯ ತೆಗೆದುಕೊಳ್ಳುವಂತೆ ಮಾಡುತ್ತದೆ ಎಂಬುದಕ್ಕೆ ಈ ಘಟನೆ ಸಾಕ್ಷಿಯಾಗಿದೆ. ಕಡು ಬಡತನದ ದಿಸೆಯಲ್ಲಿ ಮಹಿಳೆಯೋರ್ವಳು ತನ್ನ ನವಜಾತ ಶಿಶುವನ್ನೇ ಸರ್ಕಾರಿ ಆಸ್ಪತ್ರೆಯ ನರ್ಸ್ ಸಹಾಯದಿಂದ ಹಣ ಪಡೆದು ಬೇರೆಯವರಿಗೆ ಸಾಕಲು ನೀಡಿದ ಘಟನೆ ನಡೆದಿದೆ.

ನಂತರದಲ್ಲಿ ತನ್ನ ಮಗುವನ್ನು ತನಗೆ ಕೊಡಿಸಿ ಎಂದು ಶಿಶು ಅಭಿವೃದ್ಧಿ ಯೋಜನೆ ಅಧಿಕಾರಿಗಳ ಕಚೇರಿಗೆ ಮನವಿ ಮಾಡಿದ ಅಪರೂಪದ ಘಟನೆ ನಡೆದಿದೆ. ಪಟ್ಟಣದ ಅಜ್ಜಿಕಟ್ಟಾದ 35 ವಯಸ್ಸಿನ ಮಹಿಳೆ ಸೆಪ್ಟೆಂಬರ್ 5 ರಂದು ಕಾರವಾರ ಸಿವಿಲ್ ಆಸ್ಪತ್ರೆಯಲ್ಲಿ ಮುದ್ದಾದ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಳಂತೆ, ಬಡತನದ ಕಾರಣ ನನ್ನ ಮಗುವಿಗೆ ಸಾಕಲು ಸಾಧ್ಯವಿಲ್ಲ. ಯಾರಾದರೂ ಹಣ ಕೊಟ್ಟರೆ ನಾನು ಅವರಿಗೆ ಸಾಕಲು ಕೊಡುವುದಾಗಿ ಆಸ್ಪತ್ರೆಯಲ್ಲಿ ಕೆಲಸ ಮಾಡುತ್ತಿದ್ದ ನರ್ಸ್ ಒಬ್ಬರಿಗೆ ತಿಳಿಸಿದ್ದಳು ಎನ್ನಲಾಗಿದೆ.

ನರ್ಸ್ ಈ ವಿಷಯವನ್ನು ಭಟ್ಕಳದ ವ್ಯಕ್ತಿಯೋರ್ವರಿಗೆ ತಿಳಿಸಿದ್ದು ಮಗುವನ್ನು ಮಾರಾಟ ಮಾಡಿಸಿದ್ದಾರೆ ಎನ್ನಲಾಗಿದೆ. ಈ ಕುರಿತು ಶಿಶು ಅಭಿವೃದ್ಧಿ ಅಧಿಕಾರಿ ಅಂಕೋಲಾ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ನಂತರದ ಕೆಲ ದಿನಗಳಲ್ಲಿಯೇ ಶಿಶು ಅಭಿವೃದ್ಧಿ ಯೋಜನೆ ಅಧಿಕಾರಿಗಳ ಕಚೇರಿಗೆ ಬಂದ ಮಗುವಿನ ತಾಯಿ ನಡೆದ ವಿಷಯವನ್ನು ತಿಳಿಸಿ ತನ್ನ ಮಗುವನ್ನು ತನಗೆ ವಾಪಸ್ ಕೊಡಿಸುವಂತೆ ಕಣ್ಣೀರಿಟ್ಟು ಆಗ್ರಹಿಸಿರುವುದಾಗಿ ತಿಳಿದು ಬಂದಿದೆ. ಪ್ರಭಾರ ಸಿ.ಡಿ.ಪಿ.ಓ ಸವಿತಾ ಸಿದ್ಧಯ್ಯ ಶಾಸ್ತ್ರಿಮಠ ಈ ಬಗ್ಗೆ ಕ್ರಮಕ್ಕೆ ಮುಂದಾಗಿರುವುದಾಗಿ ತಿಳಿದುಬಂದಿದೆ.

RELATED ARTICLES  ಕೈಗಾ ೫ ಹಾಗೂ ೬ನೇ ಘಟಕ ವಿರೋಧಿ ಕಾರ್ಯಾಗಾರ ಸಮಾರಂಭ ಸಭೆಗೆ ಬಂದರೂ ವೇದಿಕೆಯೇರದ ಆನಂದ | ಜಿಲ್ಲೆಯ ಎಲ್ಲಾ ಶಾಸಕರೂ ಬರಲಿ ಎಂದು ಪಟ್ಟು