ಉತ್ತರ ಕನ್ನಡದಲ್ಲಿ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ನಿರ್ಮಾಣಕ್ಕೆ ತಾತ್ವಿಕ ಒಪ್ಪಿಗೆ ಸಿಕ್ಕಿದೆ. ಆದರೂ ಅದರ ಸ್ಥಾಪನೆಗೆ ಇನ್ನೂ ಕೆಲವು ವರ್ಷಗಳು ಬೇಕಾಗಿದ್ದು, ಅದಕ್ಕೂ ಪೂರ್ವದಲ್ಲಿ ಅಗತ್ಯ ಕಾರ್ಯ ಯೋಜನೆಗೆ ಶಾಸಕಿ ರೂಪಾಲಿ ನಾಯ್ಕ ಮತ್ತೆ ಧ್ವನಿಯತ್ತಿದ್ದಾರೆ. ಅಧಿವೇಶನದಲ್ಲಿ ಈ ಕುರಿತಾಗಿ ಪ್ರಸ್ತಾಪಿಸಿದ ಅವರು ಜಿಲ್ಲೆಯಲ್ಲಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಆಗಲೇಬೇಕು. ಎಲ್ಲರೂ ಸೇರಿ ಸ್ಥಳ ನಿಗದಿ ಪಡಿಸುವಂತಾಗಲಿ. ಆದರೆ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ನಿರ್ಮಾಣವಾಗಿ ಆರೋಗ್ಯಸೇವೆ ನೀಡುವ ತನಕ 5-6 ವರ್ಷಗಳು ಬೇಕು. ಅಲ್ಲಿಯ ತನಕ ತುರ್ತಾಗಿ ಕಾರವಾರದ ಮೆಡಿಕಲ್ ಕಾಲೇಜಿನಲ್ಲಿ ತಜ್ಞ ವೈದ್ಯರುಗಳನ್ನು ನೇಮಕ ಮಾಡಿ ಸೂಪರ್ ಸ್ಪೆಷಾಲಿಟಿ ಸೌಲಭ್ಯ ದೊರೆಯುವಂತಾಗಬೇಕು ಎಂದರು.

ಎಂಆರ್ ಐ ಯಂತ್ರ ಸೇರಿದಂತೆ ಎಲ್ಲ ಅಗತ್ಯ ಉಪಕರಣಗಳ ಪೂರೈಕೆಯಾಗಬೇಕು. ಮುಖ್ಯವಾಗಿ 30 ಕೋಟಿ ರೂ.ಗಳ ನಮ್ಮ ಬೇಡಿಕೆಗೆ ಆರ್ಥಿಕ ಇಲಾಖೆ ಈ ಹಿಂದೆ ಸಮ್ಮತಿಸಿರಲಿಲ್ಲ. ಆ 30 ಕೋಟಿ ರೂ. ಕೂಡ ತಕ್ಷಣ ಬಿಡುಗಡೆಯಾಗಬೇಕು. ಉನ್ನತ ಆರೋಗ್ಯ ಸೇವೆ ಇಲ್ಲದೆ ಜನರು ತೊಂದರೆಯಲ್ಲಿದ್ದಾರೆ. ಅದನ್ನು ಶೀಘ್ರದಲ್ಲಿ ಬಗೆಹರಿಸಬೇಕಾದರೆ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ನಿರ್ಮಾಣ ಆಗುವ ಮುನ್ನ ಶೀಘ್ರವಾಗಿ ಕಾರವಾರದ ಮೆಡಿಕಲ್ ಕಾಲೇಜು ಮೇಲ್ದರ್ಜೆಗೆ ಏರಿಸಿ ಅಲ್ಲೇ ಕ್ಯಾನ್ಸರ್, ಯುರೋಲಜಿ, ಹೃದ್ರೋಗ ಚಿಕಿತ್ಸೆ, ನರರೋಗ ಚಿಕಿತ್ಸೆ, ಹೀಗೆ ಸೂಪರ್ ಸ್ಪೆಷಾಲಿಟಿಯ ಎಲ್ಲ ಸೇವೆ ಆರಂಭಿಸಬೇಕು ಎಂದು ಇಂದು ವಿಧಾನಸಭೆಯಲ್ಲಿ ಆಗ್ರಹಿಸಿದರು.

ಹಾಗೆಯೇ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯ ಬಗ್ಗೆ ನಾನು 1525 ದಿನಗಳಿಂದ ಪ್ರಯತ್ನ ನಡೆಸುತ್ತಿರುವುದನ್ನು ಗಮನಕ್ಕೆ ತಂದರು. ಆರೋಗ್ಯ ಸಚಿವರಾದ ಮಾನ್ಯ ಡಾ.ಸುಧಾಕರ ಅವರು ಈ ಬೇಡಿಕೆಯನ್ನು ಈಡೇರಿಸುವುದಾಗಿ ಭರವಸೆ ನೀಡಿದ್ದಾರೆ. ಮಾನ್ಯ ಮುಖ್ಯಮಂತ್ರಿಗಳನ್ನು ಭೇಟಿಯಾದಾಗ ಅವರೂ ಕೂಡ ತಾತ್ವಿಕವಾಗಿ ಸಮ್ಮತಿ ವ್ಯಕ್ತಪಡಿಸಿದ್ದರು. ಮಾನ್ಯ ಬಸವರಾಜ ಬೊಮ್ಮಾಯಿ, ಮಾನ್ಯ ಡಾ.ಸುಧಾಕರ, ಜಿಲ್ಲಾ ಉಸ್ತುವಾರಿ ಸಚಿವರಾದ ಕೋಟ ಶ್ರೀನಿವಾಸ ಪೂಜಾರಿ ಅವರಿಗೆ ಧನ್ಯವಾದಗಳನ್ನು ಸಲ್ಲಿಸುತ್ತೇನೆ. ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಕುರಿತು ವಿಧಾನಸಭೆಯ ಗಮನ ಸೆಳೆದ ನನ್ನ ಪ್ರಶ್ನೆಗೆ ಹಾಗೂ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಗೆ ಬೆಂಬಲವಾಗಿ ನಿಂತ ಎಲ್ಲರಿಗೂ ಧನ್ಯವಾದಗಳು ಎಂದು ಅವರು ಮಾಹಿತಿ ನೀಡಿದ್ದಾರೆ.

RELATED ARTICLES  ಇಂಡಿಯಾ ಬುಕ್ ಆಫ್ ರೆಕಾರ್ಡಗೆ ಪ್ರಮೋದ ಹೆಗಡೆ.