ಬೆಂಗಳೂರು: ರಾಜ್ಯದ ಸರ್ಕಾರಿ ಪ್ರಾಥಮಿಕ ಶಾಲೆಗಳಲ್ಲಿ ಕಾರ್ಯ ನಿರ್ವಹಿಸುತ್ತಿರುವ ದೈಹಿಕ ಶಿಕ್ಷಣ ಶಿಕ್ಷಕರು ಒಂದೇ ಸಂಘಟನೆಯಡಿಯಲ್ಲಿ ಕಾರ್ಯ ನಿರ್ವಹಿಸುವ ಒಮ್ಮತದ ನಿರ್ಣಯವನ್ನು ಕೈಗೊಂಡಿದ್ದಾರೆ. ಇತ್ತೀಚೆಗೆ ಬೆಂಗಳೂರಿನ ಐಸಾಕ್ ನ್ಯೂಟನ್ ಹೈಸ್ಕೂಲಿನ ಸಭಾಂಗಣದಲ್ಲಿ ನಡೆದ ಗ್ರೇಡ್-2 ದೈಹಿಕ ಶಿಕ್ಷಣ ಶಿಕ್ಷಕರ ಸಂಘ ಹಾಗೂ ರಾಜ್ಯ ದೈಹಿಕ ಶಿಕ್ಷಕರ ಸಂಘದ ಜಂಟಿ ಸಭೆಯಲ್ಲಿ ಈ ಕುರಿತು ಒಮ್ಮತದ ನಿರ್ಣಯವನ್ನು ಕೈಗೊಳ್ಳಲಾಯಿತು. ಎರಡೂ ಸಂಘಗಳನ್ನು ಒಂದುಗೂಡಿಸಿ ಬಲಿಷ್ಠಸಂಘಟನೆ ಕಟ್ಟುವ ಸದುದ್ದೇಶದಿಂದ ಸಂಘಟಿಸಿದ್ದ ಈ ಸಭೆಯಲ್ಲಿ 28 ಜಿಲ್ಲೆಗಳ ಪ್ರತಿನಿಧಿಗಳು ಹಾಗೂ ಎರಡೂ ಸಂಘದ ಪದಾಧಿಕಾರಿಗಳು ಉಪಸ್ಥಿತರಿದ್ದರು. ಯಾವ ಸಂಘದಲ್ಲಿ ಯಾವ ಸಂಘ ಕೂಡಿಕೊಳ್ಳಬೇಕು ಎಂಬ ಕುರಿತು ಸಾಧಕ ಬಾಧಕಗಳನ್ನು ಚರ್ಚಿಸಿದ ಬಳಿಕ ಅಂತಿಮವಾಗಿ ಕರ್ನಾಟಕ ರಾಜ್ಯ ಸರ್ಕಾರಿ ಪ್ರಾಥಮಿಕ ಶಾಲಾ ಗ್ರೇಡ್- 2 ದೈಹಿಕ ಶಿಕ್ಷಣ ಶಿಕ್ಷಕರ ಸಂಘದಡಿಯಲ್ಲಿ ಎಲ್ಲರೂ ಸಂಘಟಿತರಾಗಿ ಮುಂದುವರಿಯಲು ಸರ್ವಾನುಮತದಿಂದ ತೀರ್ಮಾನಿಸಲಾಯಿತು.
ಒಂದುಗೂಡಿದ ಎರಡು ಸಂಘಗಳ ನೂತನ ಅಧ್ಯಕ್ಷರಾಗಿ ಉತ್ತರಕನ್ನಡ ಜಿಲ್ಲೆಯ ರವೀಂದ್ರ ಭಟ್ಟ ಸೂರಿ ಆಯ್ಕೆಯಾದರು. ಸಂಘದ ಎಲ್ಲಾ ಹಾಲಿ ಪದಾಧಿಕಾರಿಗಳನ್ನು ಯಥಾ ಸ್ಥಾನದಲ್ಲಿ ಮುಂದುವರಿಸಲಾಗಿದ್ದು ನೂತನ ಕಾರ್ಯಾಧ್ಯಕ್ಷರಾಗಿ ಬೆಂಗಳೂರಿನ ಪ್ರಮಿಳಾ ಮೇಡಂ, ಖಜಾಂಚಿಯಾಗಿ ಗೋಪಾಲ್ ಸರ್ ಅವರನ್ನು ಆಯ್ಕೆ ಮಾಡಲಾಯಿತು. ಮುಂದಿನ ದಿನಗಳಲ್ಲಿ ವಿಭಾಗೀಯ ಅಧ್ಯಕ್ಷರನ್ನು ನೇಮಿಸುವ ನಿರ್ಣಯ ಕೈಗೊಳ್ಳಲಾಯಿತು. ವಿಲೀನ ಪ್ರಕ್ರಿಯೆಯ ಕೊನೆಯ ಹಂತದಲ್ಲಿ ಗ್ರೇಡ್-2 ಸಂಘದ ಸಂಸ್ಥಾಪಕರಾದ ಲೋಕೇಶಪ್ಪನವರು ದೂರವಾಣಿಯ ಮೂಲಕ ಸಂಪರ್ಕಿಸಿ ತಮ್ಮ ಸಮ್ಮತಿ ಸೂಚಿಸಿದರು.
ಸಭೆಯಲ್ಲಿ ಗ್ರೇಡ್-2 ಸಂಘದ ಪ್ರಧಾನ ಕಾರ್ಯದರ್ಶಿ ಯೋಗೇಶ ಕೊಂಡಾಪುರ, ಖಜಾಂಚಿ ಲಕ್ಷ್ಮಣ ಮೂರ್ತಿ, ಗೌರವಾಧ್ಯಕ್ಷರಾದ ಪುಟ್ಟಸ್ವಾಮಿ, ಕಾರ್ಯಾಧ್ಯಕ್ಷರಾದ ಬಸವರಾಜಪ್ಪ, ಮಹಿಳಾ ಘಟಕದ ರಾಜ್ಯಾಧ್ಯಕ್ಷರಾದ ಆಶಾ ಬೇಗಂ ಮುನವಳ್ಳಿ, ಹಿರಿಯ ಉಪಾಧ್ಯಕ್ಷರಾದ ವೆಂಕಟೇಶ ಮೂರ್ತಿ, ದೈಹಿಕ ಶಿಕ್ಷಕರ ಸಂಘದ ನಂಜುಂಡಪ್ಪ, ಗುರುಮೂರ್ತಿ , ಮಂಜಪ್ಪ , ಶಕೀಲಾ ಹಾಗೂ ವಿವಿಧ ರಾಜ್ಯ ಪದಾಧಿಕಾರಿಗಳು, ಜಿಲ್ಲಾ ಪದಾಧಿಕಾರಿಗಳು ಸದಸ್ಯರು ಹಾಜರಿದ್ದರು. ನವಂಬರ್ ತಿಂಗಳ ಕೊನೆಯಲ್ಲಿ ರಾಜ್ಯ ಮಟ್ಟದ ಬೃಹತ್ ಸಮಾವೇಶ ನಡೆಸುವ ತೀರ್ಮಾನದೊಂದಿಗೆ ಸಭೆ ಮುಕ್ತಾಯವಾಯಿತು. ಗ್ರೇಡ್-2 ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ ಯೋಗೇಶ ಕೊಂಡಾಪುರ ಪ್ರಾಸ್ತಾವಿಕ ಮಾತಿನೊಂದಿಗೆ ಸ್ವಾಗತಿಸಿದರು, ಗ್ರೇಡ್-2 ಸಂಘದ ಕಲಬುರ್ಗಿ ಜಿಲ್ಲಾ ಕಾರ್ಯದರ್ಶಿ ಪ್ರಭು ಮಾಚನೂರು ವಂದಿಸಿದರು. ಪ್ರಮಿಳಾ ಮೇಡಂ ಅಚ್ಚುಕಟ್ಟಾಗಿ ಕಾರ್ಯಕ್ರಮವನ್ನು ಸಂಘಟಿಸಿದ್ದರು.
ಒಟ್ಟಿನಲ್ಲಿ ಬೆಂಗಳೂರಿನಲ್ಲಿ ನಡೆದ ಸಭೆ ಐತಿಹಾಸಿಕ ತೀರ್ಮಾನವೊಂದಕ್ಕೆ ಸಾಕ್ಷಿಯಾಗಿದ್ದು ರಾಜ್ಯದ ಸರ್ಕಾರಿ ಪ್ರಾಥಮಿಕ ಶಾಲಾ ದೈಹಿಕ ಶಿಕ್ಷಣ ಶಿಕ್ಷಕರ ಸಂತೋಷಕ್ಕೆ ಕಾರಣವಾಗಿದೆ.