ಗೋಕರ್ಣ : ಸದಾ ಕಾಲ ಪ್ರವಾಸಿಗರಿಂದ ಜಿಗಿಜಿಗಿ ಎನ್ನುತ್ತಿರುವ ಇಲ್ಲಿನ ಮುಖ್ಯ ಕಡಲತೀರದಲ್ಲಿ ನಗ್ನವಾಗಿ ಓಡಾಡುತ್ತಾ ಪ್ರವಾಸಿಗರಿಗೆ ಮುಜುಗರ ಉಂಟು ಮಾಡುತ್ತಿದ್ದ ಮಾನಸಿಕ ಅಸ್ವಸ್ಥನನ್ನು ಪೊಲೀಸರು ಮತ್ತು ಜೀವ ರಕ್ಷಕ ಸಿಬ್ಬಂದಿ ಮೇಲ್ವಿಚಾರಕರು ಸೇರಿ ಹಿಡಿದು ಆತನಿಗೆ ಬಟ್ಟೆ ತೊಡಿಸಿ ತಿಂಡಿ ನೀಡಿ ಉಪಚರಿಸುವ ಮೂಲಕ ಮಾನವೀಯತೆ ಜೊತೆ ಜನರಿಗಾಗುತ್ತಿದ್ದ ತೊಂದರೆಯನ್ನು ತಪ್ಪಿಸಿದ ಘಟನೆ ನಡೆದಿದೆ.
ಮುಂಜಾನೆಯಿಂದ ಪ್ರವಾಸಿಗರ ಹತ್ತಿರ ಹೋಗಿ ನಿಂತುಕೊಳ್ಳುವುದು, ಅಸಭ್ಯವಾಗಿ ವರ್ತಿಸುವುದು ಮಾಡುತ್ತಿದ್ದು, ಇದನ್ನು ಗಮನಿಸಿದ ಕರ್ತವ್ಯದಲ್ಲಿದ್ದ ಲೈಫ್ ಗಾರ್ಡ್ ಮೇಲ್ವಿಚಾರಕ ರವಿ ನಾಯ್ಕ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಪೊಲೀಸರು ಸ್ಥಳಕ್ಕೆ ಆಗಮಿಸಿ ಹರಸಾಹಸ ಮಾಡಿ ಆತನನ್ನು ಹಿಡಿದಿದ್ದಾರೆ. ಪೊಲೀಸ್ ಸಿಬ್ಬಂದಿಯೇ ಬಟ್ಟೆ ಖರೀದಿಸಿ ಆತನಿಗೆ ತೊಡಿಸಿದ್ದು, ಉಪಹಾರ, ಊಟ ನೀಡಿದ್ದಾರೆ.
ಅವನ ಹೆಸರು, ಊರು, ಇತ್ಯಾದಿ ಮಾಹಿತಿ ಪಡೆಯಲು ಪ್ರಯತ್ನಿಸಿದ್ದಾರೆ. ತಮಿಳುನಾಡಿನವ ಎಂದಷ್ಟೇ ಹೇಳಿದ್ದು, ವಿಳಾಸ ದೊರೆತರೆ ಪೊಲೀಸರೇ ಊರಿಗೆ ಕಳುಹಿಸಲು ಸಜ್ಜಾಗಿದ್ದಾರೆ. ಪೊಲೀಸ್ ಸಿಬ್ಬಂದಿಗಳಾದ ರವಿ ಹಡಾಕರ, ಮಂಜು ಉಪ್ಪಾರ ಮತ್ತು ಲೈಫ್ ಗಾರ್ಡ್ ಮೇಲ್ವಿಚಾರಕ ರವಿ ನಾಯ್ಕ ಕಾರ್ಯಕ್ಕೆ ಸಾರ್ವಜನಿಕರು ಮತ್ತು ಪ್ರವಾಸಿಗರು ಕೃತಜ್ಞತೆ ಸಲ್ಲಿಸಿ ಪ್ರಶಂಸಿಸಿದ್ದಾರೆ.