ಕುಮಟಾ: ಪ್ರಾರಂಭಿಕ ಶಿಕ್ಷಣದ ಹಂತದಲ್ಲಿಯೆ ಮಕ್ಕಳಲ್ಲಿ ಚಿಂತನ-ಮಂಥನ ಹಾಗೂ ಹೊಸ ಆಲೋಚನೆಗಳನ್ನು ಬೆಳೆಸುವುದರ ಜೊತೆಗೆ ಅವರ ಮನೋವಿಕಾಸಕ್ಕೆ ಅಡಿಪಾಯ ಹಾಕಲು ಅತ್ಯಂತ ಸಹಕಾರಿಯಾಗಬಲ್ಲ ಅನುಭವಿ ಹಾಗೂ ಚಟುವಟಿಕೆ ಆಧಾರಿತ ಕಲಿಕೆ, ಥೀಮ್ ಆಧಾರಿತ ಕಲಿಕೆ ಚಟುವಟಿಕೆಗಳ ಜೊತೆಗೆ ಗಣಿತ, ಇಂಗ್ಲೀಷ್, ವಿಜ್ಞಾನ ವಿಷಯಕ್ಕೆ ಸಂಬಂಧಿಸಿ ಬಲವಾದ ಅಡಿಪಾಯ ಒದಗಿಸುವದು, ಅರಿವಿನ ಕೌಶಲ್ಯವನ್ನು ಹೆಚ್ಚಿಸುವುದು ಹಾಗೂ ಕಲಿಕಾ ಫಲಿತಾಂಶ ಸುಧಾರಿಸಿ ಸಾಮಾಜಿಕ ಭಾವನಾತ್ಮಕ ಕೌಶಲ್ಯಗಳನ್ನು ಹೆಚ್ಚಿಸುವ ವಿನೂತನ ಮಾದರಿಯ ಕ್ರೀಡೋ ಲ್ಯಾಬ್ ಇಲ್ಲಿನ ಕೊಂಕಣ ಎಜ್ಯುಕೇಶನ್ ಟ್ರಸ್ಟ್ನ ಸರಸ್ವತಿ ವಿದ್ಯಾ ಕೇಂದ್ರದ ಆವಾರದಲ್ಲಿ, ಶ್ರೀ ಸಂಸ್ಥಾನ ಗೋಕರ್ಣ ಪರ್ತಗಾಳಿ ಜೀವೋತ್ತಮ ಮಠದ ಪೀಠಾಧೀಶರಾದ ಶ್ರೀ ಶ್ರೀ ಶ್ರೀಮದ್ ವಿದ್ಯಾಧೀಶ ತೀರ್ಥ ಶ್ರೀಪಾದ ವಡೇರ ಸ್ವಾಮೀಜಿಯವರ ಅಮೃತ ಹಸ್ತದಿಂದ ಉದ್ಘಾಟನೆಗೊಂಡಿತು. ಕಲಿಕಾ ವಿಧಾನವನ್ನು ಸಮಗ್ರವಾಗಿ ಬದಲಿಸುವುದೇ ಕ್ರೀಡೋ ಲ್ಯಾಬ್ ನ ಮುಖ್ಯ ಉದ್ದೇಶವಾಗಿದೆ. ಕ್ರೀಡೋದ ಆಟಿಕೆಗಳು ಮಕ್ಕಳ ಪಾಲಿಗೆ ಸ್ವಯಂ ಕಲಿಕೆಯ ಸಾಮಗ್ರಿಗಳಾಗಿವೆ. ಮಕ್ಕಳು ತಪ್ಪುಗಳನ್ನು ಮಾಡುತ್ತಲೇ ಕಲಿಯುವ ರೀತಿಯಲ್ಲಿಯೇ ಈ ಕಲಿಕಾ ಸಾಮಗ್ರಿಗಳನ್ನು ರೂಪಿಸಲಾಗಿದ್ದು ದೊಡ್ಡ ಪ್ರಮಾಣದ ಮೇಲ್ವಿಚಾರಣೆಯಿಲ್ಲದೆ ಕಲಿಯುವ ಬಗೆಯಲ್ಲಿ ಈ ಆಟಿಕೆಗಳು ತಯಾರಾಗಿದೆ. ಮಕ್ಕಳ ಕಲಿಕಾ ಸಾಮರ್ಥ್ಯ ಹೆಚ್ಚಿಸಲು ಸಾಂಪ್ರದಾಯಿಕ ಶಿಕ್ಷಣ ವಿಧಾನದಲ್ಲಿ ಹೆಚ್ಚು ಶ್ರಮ ಪಡಬೇಕಾಗುತ್ತದೆ. ಆದರೆ ಈ ಲ್ಯಾಬ್ ನಲ್ಲಿ ಬೋಧನಾ ವ್ಯವಸ್ಥೆಯಲ್ಲಿ ಬದಲಾವಣೆ ಅಳವಡಿಕೆಯಿಂದ ಕಲಿಕೆ ಸುಲಭವಾಗುತ್ತದೆ. ಸುಮಾರು ಎರಡು ನೂರಕ್ಕೂ ಅಧಿಕ ವಿವಿಧ ರೀತಿಯ ಚಟುವಟಿಕೆ ಉಪಕರಣಗಳಿದ್ದು, ಎರಡರಿಂದ ಆರು ವರ್ಷದ ಮಕ್ಕಳ ಕಲಿಕೆಯಲ್ಲಿ ಇದು ಮಹತ್ತರ ಪಾತ್ರ ವಹಿಸಲಿದೆ. ಈ ಲ್ಯಾಬ್ ಉತ್ತರ ಕನ್ನಡದಲ್ಲಿ ಅತಿ ವಿರಳ ಪ್ರಮಾಣದಲ್ಲಿ ಶಾಲೆಗಳಲ್ಲಿ ಸಂಯೋಜನೆಗೊಂಡಿದ್ದು, ಕೊಂಕಣ ಎಜುಕೇಶನ್ ಟ್ರಸ್ಟ್ ನಾವಿನ್ಯತೆಯ ಪ್ರಯೋಗಕ್ಕೆ ಮುಂದಾಗಿದೆ ಎಂದು ಸಂಸ್ಥೆಯ ಕಾರ್ಯದರ್ಶಿ ಮುರಳಿಧರ್ ಪ್ರಭುರವರು ಕ್ರೀಡೋ ಲ್ಯಾಬನ್ನು ಪರಿಚಯಿಸಿದರು.
ಕೊಂಕಣ ಎಜ್ಯುಕೇಶನ್ ಟ್ರಸ್ಟ್ ಸಭಾಭವನದಲ್ಲಿ ನಡೆದ ಗೋ-ಪೂಜೆ ಹಾಗೂ ಮಾತೃ-ಪಿತೃ ಪೂಜನೆಯೊಂದಿಗೆ ನೂತನ ಮಾತೃಮಂಡಳಿ ಪದಗ್ರಹಣ ಸಮಾರಂಭದ ದಿವ್ಯ ಉಪಸ್ಥಿತಿ ವಹಿಸಿದ್ದ ಶ್ರೀಗಳು ಆಶೀರ್ವಚನ ನೀಡಿ, ಮಕ್ಕಳಿಗೆ ಪಠ್ಯ-ಪಠ್ಯೇತರ ಶಿಕ್ಷಣದ ಜೊತೆಗೆ ಸಂಸ್ಕಾರ ನೀಡುವ ಆಧ್ಯಾತ್ಮಿಕ ಶಿಕ್ಷಣವೂ ಅಷ್ಟೇ ಅವಶ್ಯಕ. ಕಾಕ ಚೇಷ್ಟಾ, ಬಕೋ ಧ್ಯಾನಂ, ಶ್ವಾನ ನಿದ್ರಾ, ಅಲ್ಪಹಾರಿ, ಗೃಹತ್ಯಾಗಿ ವಿದ್ಯಾರ್ಥಿ ಪಂಚ ಲಕ್ಷಣಂ. ಅಂದರೆ ವಿದ್ಯಾರ್ಥಿ ಜ್ಞಾನಾರ್ಜನೆ ಮಾಡುವಾಗ ನಿರಂತರ ಪ್ರಯತ್ನ, ತಾಳ್ಮೆ, ಜಾಗೃತೆ, ದೇಹಕ್ಕೆ ಬೇಕಾಗುವಷ್ಟೇ ಮಿತ ಆಹಾರ, ಮನೆಯಿಂದ ದೂರತ್ಯಾಗ ಇವನ್ನು ಮೈಗೂಡಿಸಿಕೊಂಡರೆ ಮಾತ್ರ ಸಾಧನೆ ಸಾಧ್ಯ. ಗೋಮಾತೆ ತಮಗೆ ಅತ್ಯಂತ ಪ್ರಿಯವಾದದ್ದು. ಗೋಪೂಜೆ ನೆರವೇರಿಸಿದ್ದು ಅತ್ಯಂತ ಸಂತೋಷದಾಯಕವಾಗಿದೆ ಎಂದರು. ಮಾತೃ-ಪಿತೃ ಪೂಜನೆಯನ್ನು ಆಯೋಜಿಸಿ ವಿದ್ಯಾರ್ಥಿಗಳಲ್ಲಿ ಪೂಜ್ಯತಾ ಭಾವನೆಯನ್ನು ಉದ್ದೀಪನಗೊಳಿಸುವ ಈ ವಿಶಿಷ್ಟ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿ ಸರ್ವರಿಗೂ ಶ್ರೇಯೋಭಿವೃದ್ಧಿ ಲಭಿಸಲಿ, ಒಳ್ಳೆಯದಾಗಲಿ ಎಂದು ಆಶೀರ್ವದಿಸಿದರು.
ಶ್ರೀ ಗುರುಗಳ ಪಾದಪೂಜೆ ನೆರವೇರಿಸಿ ಮಾತನಾಡಿದ ಕೊಂಕಣದ ಅಧ್ಯಕ್ಷರಾದ ವಿಠ್ಠಲ ನಾಯಕ, ಚಾತುರ್ಮಾಸದ ಪುಣ್ಯ ಕಾಲಘಟ್ಟದ ಬಳಿಕ ಶ್ರೀ ಗುರುಗಳು ನಮ್ಮ ಸಂಸ್ಥೆಗೆ ಆಗಮಿಸುತ್ತಿರುವುದು ನಮ್ಮ ಸಂಸ್ಥೆಗೆ ಸರ್ವ ರೀತಿಯಿಂದಲೂ ಬಲವನ್ನು ತಂದು ಕೊಟ್ಟಿದೆ. ಅವರ ದಿವ್ಯ ಕರಕಮಲಗಳಿಂದ ಇವತ್ತು ಕ್ರೀಡೋ ಲ್ಯಾಬ್ ಉದ್ಘಾಟನೆಗೊಂಡಿದ್ದು, ಚಿಣ್ಣರ ವ್ಯಕ್ತಿತ್ವ ವಿಕಸನದಲ್ಲಿ ಈ ಲ್ಯಾಬ್ ಅತ್ಯಂತ ಮಹತ್ವದ ಪಾತ್ರ ವಹಿಸಲಿದೆ, ಮತ್ತು ಗುರುಗಳ ಆಶೀರ್ವಾದದಿಂದ ನಮ್ಮ ಸಂಸ್ಥೆಯ ಶಿಕ್ಷಕರು ಈ ಲ್ಯಾಬ್‌ನ್ನು ಯಶಸ್ವಿಯಾಗಿ ಮುನ್ನಡೆಸಿಕೊಂಡು ಹೋಗಿ ಇದರ ಸಂಪೂರ್ಣ ಪ್ರಯೋಜನವನ್ನು ವಿದ್ಯಾರ್ಥಿಗಳು ಪಡೆಯುವಂತೆ ಮಾಡುತ್ತಾರೆಂಬ ವಿಶ್ವಾಸ ನನಗಿದೆ ಎಂದರು. ಪ್ರಾಸ್ತಾವಿಕ ಮಾತನಾಡಿದ ಸಂಸ್ಥೆಯ ಕಾರ್ಯದರ್ಶಿ ಮುರಳಿಧರ ಪ್ರಭು, ಋಷಿವಾಕ್ಯದೊಡನೆ ವಿಜ್ಞಾನ ಕಲೆ ಮೇಳೈಸಬೇಕೆನ್ನುವ ಉದ್ದೇಶವನ್ನು ಹೊಂದಿರುವ ನಾವು, ಆಧುನಿಕ ತಂತ್ರಜ್ಞಾನಗಳನ್ನು ಶಿಕ್ಷಣದಲ್ಲಿ ಬಳಸಿಕೊಳ್ಳುವುದಲ್ಲದೇ, ಋಷಿ ವಾಕ್ಯವನ್ನು ಮೀರಬಾರದೆಂಬ ಕಾರಣಕ್ಕೋಸ್ಕರ ನಮ್ಮ ಸಂಸ್ಥೆಯಲ್ಲಿ ಮೂಲ ಪರಂಪರೆಯಾದಂತಹ ಗುರುಪೂಜೆ, ಗೋಪೂಜೆ, ಮಾತೃ-ಪಿತೃಪೂಜನೆ, ದೀಪಾವಳಿ ಮೇಳದಂತಹ ಧಾರ್ಮಿಕ ಕಾರ್ಯಕ್ರಮಗಳನ್ನು ಕೂಡ ಯಶಸ್ವಿಯಾಗಿ ನೆರವೇರಿಸಿಕೊಂಡು ಬರುವುದರ ಮೂಲಕ ನಮ್ಮ ಭವಿಷ್ಯದ ಕುಡಿಗಳಾದ ವಿದ್ಯಾರ್ಥಿಗಳಿಗೆ ನಮ್ಮ ಭಾರತೀಯ ಸಂಸ್ಕೃತಿಯ ಅರಿವು ಕೂಡ ಮೂಡಬೇಕೆಂಬ ಸದುದ್ದೇಶ ನಮ್ಮದಾಗಿದೆ. ಪ್ರತಿ ವರ್ಷವೂ ನಮ್ಮ ಶಾಲೆಯ ೩೦೦ ಕ್ಕೂ ಅಧಿಕ ವಿದ್ಯಾರ್ಥಿಗಳು ರಾಮಾಯಣ, ಮಹಾಭಾರತದ ಪರೀಕ್ಷೆಗಳನ್ನು ಬರೆಯುವುದರ ಮೂಲಕ ನಮ್ಮ ಭವ್ಯ ಸಂಸ್ಕೃತಿಯನ್ನು ಅರಿಯುವಂತಹ ಪ್ರಾಮಾಣಿಕ ಪ್ರಯತ್ನಗಳನ್ನು ನಾವು ಮಾಡಿಕೊಂಡು ಬಂದಿದ್ದೇವೆ ಎಂದರು. ಮಾತೃಮಂಡಳಿಯೇ ಸಂಸ್ಥೆಯ ಯಶಸ್ಸಿನ ಗುಟ್ಟು ಎಂದು ಹೇಳಿಕೊಳ್ಳಲು ಸಂತಸವೆನಿಸುತ್ತಿದೆ ಎಂದರು.
ಕ್ರೀಡೋ ಪ್ರೀಸ್ಕೂಲ್ ಸೊಲ್ಯೂಶನ್‌ನ ಝೋನಲ್ ಹೆಡ್ ಆಗಿರುವ ನರಸಿಂಹಮೂರ್ತಿ ಕೆ. ಲ್ಯಾಬ್‌ನ ಪ್ರಯೋಜನಗಳ ಕುರಿತು ಮಾತನಾಡಿ ಸಂಸ್ಥೆಯ ಧ್ಯೇಯೋದ್ದೇಶಗಳನ್ನು ವಿವರಿಸಿದರು. ಚಿಕ್ಕ ಮಕ್ಕಳ ಸರ್ವತೋಮುಖ ಬೆಳವಣಿಗೆಗೆ ಕ್ರೀಡೋ ಲ್ಯಾಬ್ ಹೇಗೆ ಸಹಾಯಕಾರಿಯಾಗಲಿದೆ ಎಂಬುದನ್ನು ವಿಶ್ಲೇಷಿಸಿದರು.
ಇದನ್ನೂ ಓದಿ – ಅಪರಿಚಿತ ವ್ಯಕ್ತಿ ಸಾವು : ಗುರುತು ಸಿಕ್ಕರೆ ಮಾಹಿತಿ ನೀಡಿ.
ಸಂಸ್ಥೆಯ ಜಂಟಿ ಕಾರ್ಯದರ್ಶಿಗಳಾದ ಶೇಷಗಿರಿ ಶಾನಭಾಗ ಸ್ವಾಗತಿಸಿದರು, ವಿಶ್ವಸ್ಥರಾದ ರಮೇಶ ಪ್ರಭು, ದಾಸ ಶಾನಭಾಗ, ಡಿ.ಡಿ.ಕಾಮತ, ಅಶೋಕ ಪ್ರಭು, ರಾಮಕೃಷ್ಣ ಗೋಳಿ, ಅನಂತ ಶಾನಭಾಗ, ನೂತನ ಮಾತೃ ಮಂಡಳಿಯ ಅಧ್ಯಕ್ಷರುಗಳಾದ ಗಾಯತ್ರಿ ಪ್ರಭು, ಜಯಲಕ್ಷ್ಮೀ ಭಟ್ಟ, ಶೋಭಾ ಭಂಡಾರಿ ಹಾಗೂ ಸದಸ್ಯರುಗಳಾದ ಅಕ್ಷತಾ ಪೈ, ಮೂಕಾಂಬಿಕಾ ಭಟ್ಟ, ಶೋಭಾ ಗೌಡ, ದೀಪಾ ಶಾನಭಾಗ, ಅಕ್ಷತಾ ಶೆಟ್ಟಿ, ವೀಣಾ ನಾಯ್ಕ, ಚೈತ್ರಾ ನಾಯ್ಕ, ವೀಣಾ ಪಂಡಿತ, ಕಾಂಚನಾ ಪ್ರಭು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
ಶಿಕ್ಷಕ ಗಣೇಶ ಜೋಶಿ ನಿರೂಪಿಸಿದರು, ಅನಂತ ಶಾನಭಾಗ ಧನ್ಯವಾದ ಸಮರ್ಪಿಸಿದರು, ವಿದ್ಯಾರ್ಥಿಗಳಾದ ಭೂಮಿಕಾ ಸಂಗಡಿಗರು ಪ್ರಾರ್ಥಿಸಿದರು, ಪುರುಷೋತ್ತಮ ಭಟ್ಟ ಸಂಗಡಿಗರು ವೇದಘೋಷಗೈದರು.
ಇದನ್ನೂ ಓದಿ – ಡಿವೈಡರ್ ಗೆ ಗುದ್ದಿದ ಕಾರು : ವಿದ್ಯಾರ್ಥಿಗಳು ಇದ್ದ ಕಾರು : ಓರ್ವ ಸಾವು.
ತದನಂತರ ಕೊಂಕಣದ ಸಿವಿಎಸ್‌ಕೆ ಪ್ರೌಢಶಾಲೆಯಲ್ಲಿ ಸ್ಥಾಪಿತ ಅಟಲ್ ಟಿಂಕರಿಂಗ್ ಲ್ಯಾಬ್‌ನಲ್ಲಿ ವಿದ್ಯಾರ್ಥಿಗಳು ತಯಾರಿಸಿದ ೧೫ಕ್ಕೂ ಹೆಚ್ಚು ವಿಜ್ಞಾನ ಮಾದರಿಗಳನ್ನು ವೀಕ್ಷಿಸಿದ ಶ್ರೀಗಳು ಮಕ್ಕಳೊಂದಿಗೆ ಅದರ ಕುರಿತಾಗಿ ಸಂವಾದ ನಡೆಸಿದರು. ಪೈಥಾನ್ ಕಂಪ್ಯೂಟರ್ ಪ್ರೋಗ್ರಾಮ್‌ನಲ್ಲಿ ವಿದ್ಯಾರ್ಥಿಗಳೇ ರಚಿಸಿದ ಆಟ ಶ್ರೀಗಳನ್ನು ರಂಜಿಸಿದ್ದು ವಿಶೇಷವಾಗಿತ್ತು. ಸ್ವತಃ ತಂತ್ರಜ್ಞಾನವನ್ನು ಅಭ್ಯಸಿಸಿರುವ ಗುರುಗಳಿಗೆ, ಈ ಪ್ರದರ್ಶನ ಮನಸ್ಸಿಗೆ ಮುದವನ್ನುಂಟುಮಾಡಿತ್ತು. ನಂತರದಲ್ಲಿ ಕೊಂಕಣದ ಸರಸ್ವತಿ ಪಿಯು ಕಾಲೇಜಿಗೆ ಭೇಟಿ ನೀಡಿ ಕಾಲೇಜು ಆವರಣ ವೀಕ್ಷಿಸಿದರು.