ಕುಮಟಾ : ಹೊಲನಗದ್ದೆ ಶಾಲೆಯಲ್ಲಿ ಪೋಷಣಾ ಅಭಿಯಾನದ ನಿಮಿತ್ತ ಸಂಘಟಿಸಿದ್ದ ಆಹಾರ ಮೇಳ ಹಾಗೂ ಹೊಲನಗದ್ದೆ ಕ್ಲಸ್ಟರ್ ಮಟ್ಟದ ಕಲಿಕಾ ಚೇತರಿಕೆ ಉಪಕ್ರಮ-ಜಾಗೃತಿ ಮೇಳ ಇಂದು ಸುಸಂಪನ್ನ ಗೊಂಡಿತು. ಕಾರ್ಯಕ್ರಮವನ್ನು ಶ್ರೀ ಎನ್.ಜಿ.ನಾಯ್ಕ. ಡಯಟ್ ಪ್ರಾಂಶುಪಾಲರು ಹಾಗೂ ಉಪನಿರ್ದೇಶಕರು (ಅಭಿವೃದ್ದಿ) ಇವರು ಉದ್ಘಾಟಿಸಿ ಮಾತನಾಡಿ ” ಆಹಾರಕ್ಕೂ ಆರೋಗ್ಯಕ್ಕೂ ನೇರ ಸಂಬಂಧವಿದೆ. ನಮ್ಮ ಆಹಾರ ಹೇಗೋ ಹಾಗೆ ನಮ್ಮ ಆರೋಗ್ಯ ಇರುತ್ತದೆ. ಹಾಗಾಗಿ ತಿನ್ನುವ ಆಹಾರದ ಬಗ್ಗೆ ಎಚ್ಚರವಿರಲಿ. ನಮ್ಮ ಸಾಂಪ್ರದಾಯಿಕ ತಿಂಡಿ ತಿನಿಸುಗಳ ಬಗ್ಗೆ ಒಲವಿರಲಿ. ಮಕ್ಕಳಿಗೆ ಪೋಷಕಾಂಶ ಯುಕ್ತ ಆಹಾರದ ಬಗ್ಗೆ ತಿಳುವಳಿಕೆ ನೀಡಿ. ಇದೊಂದು ಉತ್ತಮ ಕಾರ್ಯಕ್ರಮ. ಹೊಲನಗದ್ದೆ ಶಾಲೆಯಲ್ಲಿ ಇದನ್ನು ಉತ್ತಮವಾಗಿ ಸಂಘಟಿಸಿದ್ದಾರೆ” ಎಂದರು. ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಶ್ರೀ ರಾಜೇಂದ್ರ ಭಟ್ಟರವರು “ವ್ಯವಸ್ಥಿತ ಸಂಘಟನೆಯ ಕುರಿತು ಮೆಚ್ಚುಗೆ ವ್ಯಕ್ತಪಡಿಸಿ ತಾಲೂಕಿನಾದ್ಯಂತ ಇಂತಹ ಕಾರ್ಯಕ್ರಮಗಳು ನಡೆಯಬೇಕು ” ಎಂದರು.

RELATED ARTICLES  ಉತ್ತರಕನ್ನಡದ ಹೆಮ್ಮೆ ವಿಮಲಾನಂದ ನಾಯಕ

ಕ್ಷೇತ್ರ ಸಂಪನ್ಮೂಲ ಕೇಂದ್ರದ ಸಮನ್ವಯಾಧಿಕಾರಿಗಳಾದ ಶ್ರೀಮತಿ ರೇಖಾ ನಾಯ್ಕರವರು ಆಹಾರದ ಕುರಿತು ಜಾಗೃತಿ ಮೂಡಿಸುವಲ್ಲಿ ಇಂತಹ ಕಾರ್ಯಕ್ರಮಗಳು ಉಪಯುಕ್ತವಾಗಿದ್ದು ಇಂದಿನ ಕಾಲಘಟ್ಟದಲ್ಲಿ ಮಕ್ಕಳಲ್ಲಿ ಜಾಗೃತಿ ಮೂಡಿಸುವಲ್ಲಿ ಶಿಕ್ಷಕರು ಪಾಲಕರು ಹೆಚ್ಚು ಹೆಚ್ಚು ಪ್ರಯತ್ನಿಸಬೇಕು ಎಂದರು. ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಜಿಲ್ಲಾಧ್ಯಕ್ಷರಾದ ಶ್ರೀ ಆನಂದ ಗಾಂವಕರ ಆಹಾರವನ್ನು ಅನಗತ್ಯವಾಗಿ ಹಾಳುಮಾಡದೇ ಉಳಿಸಬೇಕು, ಇಲ್ಲದಿದ್ದರೆ ಮುಂದಿನ ಪೀಳಿಗೆ ನಮ್ಮನ್ನು ಕ್ಷಮಿಸಲಾರದು ಎಂದರು.

ಅಕ್ಷರ ದಾಸೋಹ ಸಹಾಯಕ ನಿರ್ದೇಶಕರಾದ ಶ್ರೀ ವಿನಾಯಕ ವೈದ್ಯ ನಮಗೆ ಏನು ತಿನ್ನಬೇಕು, ಯಾಕೆ ತಿನ್ನಬೇಕು, ಹೇಗೆ ತಿನ್ನಬೇಕು ಎಂಬ ಪ್ರಜ್ಞೆ ಇರಬೇಕು ಎಂದರು. ವೇದಿಕೆಯಲ್ಲಿ ಬಿ.ಆರ್.ಪಿ. ವಿನೋದ ನಾಯ್ಕ, ಐ.ಆರ್.ಟಿ. ಶ್ರೀ ವಿನಾಯಕ ನಾಯ್ಕ, ಸಿ.ಆರ್.ಪಿ. ಉಮೇಶ ನಾಯ್ಕ , ಸಿ.ಆರ್.ಪಿ.ಪ್ರದೀಪ ನಾಯಕ, ಮುಖ್ಯಾಧ್ಯಾಪಕಿ ಶ್ರೀಮತಿ ಜಯಶ್ರೀ ಪಟಗಾರ ಉಪಸ್ಥಿತರಿದ್ದರು. ಎಸ್.ಡಿ.ಎಮ್.ಸಿ.ಅಧ್ಯಕ್ಷರಾದ ಶ್ರೀ ಚಂದ್ರಹಾಸ ನಾಯ್ಕ ಅಧ್ಯಕ್ಷತೆ ವಹಿಸಿದ್ದರು. ರವೀಂದ್ರ ಭಟ್ಟ ಸೂರಿ ಪ್ರಾಸ್ತಾವಿಕ ಮಾತಿನೊಂದಿಗೆ ಸ್ವಾಗತಿಸಿ ,ನಿರೂಪಿಸಿ ವಂದಿಸಿದರು.

RELATED ARTICLES  ಶಿರಸಿ ತಾ ಪಂ ಗೆ ಯಾವಾಗ ಹೊಸ ಕಟ್ಟಡ ಭಾಗ್ಯ ಸಿಗುವುದೋ?

ಶಿಕ್ಷಕರಾದ ಶೋಭಾ ಭಟ್ಟ, ವೀಣಾ ನಾಯ್ಕ , ಮಂಗಲಾ ನಾಯ್ಕ, ಶ್ಯಾಮಲಾ ಎಮ್ ಪಟಗಾರ, ಶ್ಯಾಮಲಾ ಬಿ ಪಟಗಾರ, ದೀಪಾ ನಾಯ್ಕ, ವಿದ್ಯಾ ನಾಯ್ಕ ಸಹಕರಿಸಿದರು. ಹೊಲನಗದ್ದೆ ಕ್ಲಸ್ಟರ್ ನ ವಿವಿಧ ಶಾಲೆಗಳ ಶಿಕ್ಷಕರು ಕಲಿಕಾ ಚೇತರಿಕೆ ಚಟುವಟಿಕೆಯ ಕಲಿಕೋಪಕರಣಗಳ ಪ್ರದರ್ಶನದಲ್ಲಿ ಪಾಲ್ಗೊಂಡರು.