ಭಟ್ಕಳ: ಕೆ.ಎಸ್.ಆರ್.ಟಿ.ಸಿ ವೋಲ್ವೋ ಬಸ್ ಹಾಗೂ ಮಹೀಂದ್ರಾ ಪಾಸೆಂಜರ್ ಟೆಂಪೋ ನಡುವೆ ಅಪಘಾತ ಸಂಭವಿಸಿ 20ಕ್ಕೂ ಹೆಚ್ಚು ಪ್ರಯಾಣಿಕರು ಗಾಯಗೊಂಡಿರುವ ಘಟನೆ ತೆರ್ನಮಕ್ಕಿ ಚರ್ಚ್ ಸಮೀಪ ನಡೆದಿದೆ. ಬೆಳ್ಳಂಬೆಳಗ್ಗೆ ನಡೆದ ಭೀಕರ ಅಪಘಾತ ಕಂಡ ಸಾರ್ವಜನಿಕರು ಕಂಗಾಲಾಗಿದ್ದಾರೆ.
ಕಾರವಾರದಿಂದ ಮಂಗಳೂರು ಕಡೆಗೆ ಹೊರಟಿದ್ದ ಐರಾವತ ಬಸ್, ಹೊನ್ನಾವರದಿಂದ ಭಟ್ಕಳ ಕಡೆಗೆ ಬರುತ್ತಿದ್ದ ಟೆಂಪೋಗೆ ಹಿಂದಿನಿಂದ ಡಿಕ್ಕಿ ಹೊಡೆದಿದೆ ಎಂದು ವರದಿಯಾಗಿದೆ. ಬಸ್‌ನ ಮುಂಬದಿ ಸೀಟ್‌ನಲ್ಲಿ ಕುಳಿತ ಮೂವರಿಗೆ ಗಂಭೀರ ಗಾಯಗಳಾಗಿದ್ದು, ಭಟ್ಕಳದ ಸರ್ಕಾರಿ ಆಸ್ಪತ್ರೆಗೆ ಗಾಯಾಳುಗಳನ್ನು ದಾಖಲು ಮಾಡಲಾಗಿದೆ. ಸ್ಥಳಕ್ಕೆ ಮುರುಡೇಶ್ವರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಅಪಘಾತದ ವಿಷಯ ತಿಳಿದು ಭಟ್ಕಳ ಸಹಾಯಕ ಆಯುಕ್ತೆ ಮಮತಾ ದೇವಿ ಜಿ.ಎಸ್ ಭಟ್ಕಳ ಸರ್ಕಾರಿ ಆಸ್ಪತ್ರೆಗೆ ಬಂದು ಗಾಯಾಳುಗಳ ಯೋಗಕ್ಷೇಮ ವಿಚಾರಿಸಿದ್ದಾರೆ. ಇನ್ನು ಭಟ್ಕಳ ಸರ್ಕಾರಿ ಆಸ್ಪತ್ರೆಗೆ ಪಶ್ಚಿಮ ಘಟ್ಟಗಳ ಸಂರಕ್ಷಣಾ ಕಾರ್ಯಪಡೆಯ ಅಧ್ಯಕ್ಷ ಗೋವಿಂದ ನಾಯ್ಕ ಕೂಡ ಭೇಟಿ ನೀಡಿದ್ದಾರೆ.
ಇದನ್ನೂ ಓದಿ – ಮನೆಯಲ್ಲಿ ಯಾರು ಇಲ್ಲದ ವೇಳೆ ಕಳ್ಳರ ಕೈಚಳಕ : ಚಿನ್ನಾಭರಣ ದರೋಡೆ
ಬಸ್ ನಲ್ಲಿ 50 ಕ್ಕೂ ಹೆಚ್ಚು ಪ್ರಯಾಣಿಕರಿದ್ದು, ಅದೃಷ್ಟವಶಾತ್ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ. ಡಿಕ್ಕಿಯ ರಭಸಕ್ಕೆ ಬಸ್ ಮುಂಭಾಗ ಎಡಬಾಗಕ್ಕೆ ಹಾಗೂ ಟೆಂಪೋ ಹಿಂಭಾಗದಲ್ಲಿ ಭಾರೀ ಹಾನಿಯಾಗಿದೆ.