ಕುಮಟಾ: ತಾಲೂಕಿನ ಗಂಗಾವಳಿ ಸೇತುವೆ ಕಾಮಗಾರಿ ಅಪೂರ್ಣಗೊಂಡಿದ್ದು, ಸಂಪರ್ಕ ರಸ್ತೆ ನಿರ್ಮಾಣವಾಗದೇ ಸ್ಥಳೀಯರ ಸಂಚಾರಕ್ಕೆ ತೊಂದರೆಯಾಗಿದೆ ಎಂದು ಆ ಭಾಗದ ಗ್ರಾಮಸ್ಥರು ಆಕ್ಷೇಪಿಸಿದ್ದಾರೆ. ತಾಲೂಕಿನ ನಾಡುಮಾಸ್ಕೇರಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಗಂಗಾವಳಿ ಸೇತುವೆ ಕಾಮಗಾರಿ ಆರಂಭವಾಗಿ ಐದು ವರ್ಷಗಳು ಕಳೆದರೂ ಕಾಮಗಾರಿ ಮಾತ್ರ ಪೂರ್ಣಗೊಂಡಿಲ್ಲ.

ಸೇತುವೆಯ ಎರಡು ಬದಿಗೆ ಸಂಪರ್ಕ ರಸ್ತೆಯನ್ನು ನಿರ್ಮಿಸಿಲ್ಲ. ಇದರಿಂದ ಆ ಭಾಗದ ಗ್ರಾಮಸ್ಥರು ಇಂದಿಗೂ ಬಾರ್ಜ್ ಮೂಲಕವೇ ಸಂಚರಿಸುವ ದುಸ್ಥಿತಿ ಇದೆ. ಮಳೆಗಾಲದಲ್ಲಿ ಬಾರ್ಜ್ ಮೇಲೆ ಸಂಚರಿಸುವುದು ಅಪಾಯಕಾರಿಯಾಗಿದ್ದರೂ ಅನಿವಾರ್ಯತೆಯಿಂದ ಸಂಚರಿಸುವಂತಾಗಿದೆ. ಈ ಸೇತುವೆ ಕಾಮಗಾರಿ ಪೂರ್ಣಗೊಳಿಸಿ, ಸಾರ್ವಜನಿಕರ ಸಂಚಾರಕ್ಕೆ ಅನುಕೂಲ ಮಾಡಿಕೊಡುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ, ಶಾಸಕ ದಿನಕರ ಶೆಟ್ಟಿ ಅವರಿಗೆ ಹಲ ಬಾರಿ ಮನವಿ ಮಾಡಿದರೂ ಯಾವುದೇ ಪ್ರಯೋಜನವಾಗಿಲ್ಲ ಎಂಬುದು ಆ ಭಾಗದ ಗ್ರಾಮಸ್ಥರ ಆರೋಪವಾಗಿದೆ. ಇನ್ಮುಂದಾದರೂ ಈ ಸೇತುವೆ ಕಾಮಗಾರಿ ಪೂರ್ಣಗೊಳಿಸಲು ಸಂಬಂಧಪಟ್ಟ ಅಧಿಕಾರಿಗಳು ಗಮನ ಹರಿಸಬೇಕು. ಇಲ್ಲವಾದರೆ ಮುಂದಿನ ದಿನಗಳಲ್ಲಿ ಉಗ್ರ ಪ್ರತಿಭಟನೆ ಮಾಡಬೇಕಾಗುತ್ತದೆ ಎಂದು ಆ ಭಾಗದ ಗ್ರಾಮಸ್ಥರಾದ ಭಾಸ್ಕರ ಮೊಗೇರ್, ರವಿ ಅಂಬಿಗ, ರಾಮ ಖಾರ್ವಿ, ಸುಭಾಷ್ ಅಂಬಿಗ, ಅಬ್ದುಲ್ ಖಾದರ್, ಇಮ್ತಿಯಾಜ್ , ಹುಸೇನ್ ಸಾಬ್ ಇತರರು ಎಚ್ಚರಿಸಿದ್ದಾರೆ.

ಗಂಗಾವಳಿ ಸೇತುವೆ ಕಾಮಗಾರಿ ಆರಂಭವಾಗಿ ಐದು ವರ್ಷಗಳು ಗತಿಸಿದರೂ ಕಾಮಗಾರಿ ಪೂರ್ಣಗೊಂಡಿಲ್ಲ. ಇದು ಈ ಸರ್ಕಾರದ ದುರಂತ. ಶಾಸಕರ ನಿರ್ಲಕ್ಷ್ಯ ಧೋರಣೆಯನ್ನು ಖಂಡಿಸುತ್ತೇನೆ. ಅತೀ ಶೀಘ್ರದಲ್ಲಿ ಈ ಸೇತುವೆಗೆ ಸಂಪರ್ಕ ರಸ್ತೆ ನಿರ್ಮಿಸಿ, ಸೇತುವೆಯನ್ನು ಸಾರ್ವಜನಿಕರ ಸಂಚಾರಕ್ಕೆ ಮುಕ್ತಗೊಳಿಸಬೇಕು. ಇಲ್ಲವಾದರೆ ಈ ಗ್ರಾಮಸ್ಥರ ಹೋರಾಟದಲ್ಲಿ ನಾನು ಪಾಲ್ಗೊಳ್ಳುವ ಮೂಲಕ ಬೆಂಬಲಿಸುವೆ ಎಂದು ಜೆ.ಡಿ.ಎಸ್ ಮುಖಂಡ ಸೂರಜ ನಾಯ್ಕ ಸೋನಿ ತಿಳಿಸಿದ್ದಾರೆ.

RELATED ARTICLES  ಹೊನ್ನಾವರದಲ್ಲಿ ಕವಿ ವಿಡಂಬಾರಿ ಗೌರವಾರ್ಥ ನುಡಿನಮನ