ಬನವಾಸಿ: ಇತಿಹಾಸ ಪ್ರಸಿದ್ಧ ಬನವಾಸಿಯಲ್ಲಿ ಶರನ್ನವರಾತ್ರಿಯ ಅಂಗವಾಗಿ 8 ನೇ ದಿನ ಆಹ್ವಾನಿತ ಕಲಾವಿದರಿಂದ ಭಕ್ತಿ ಸಂಗೀತ ಮತ್ತು ಸ್ಥಳೀಯ ಕಲಾವಿದರಿಂದ ವೈವಿಧ್ಯಮಯ ಸಾಂಸ್ಕೃತಿಕ ಸೌರಭ ಸಂಭ್ರಮದಿಂದ ಜರುಗಿತು. ಮಧುಕೇಶ್ವರ ದೇವಾಲಯ ಕಮಿಟಿಯ ಪ್ರಧಾನ ಕಾರ್ಯದರ್ಶಿ ಪ್ರೊ| ಡಾ|| ಜಿ.ಎ ಹೆಗಡೆ, ಸೋಂದಾ ಎಲ್ಲರನ್ನೂ ಸ್ವಾಗತಿಸಿ ಮುಖ್ಯ ಅತಿಥಿಗಳನ್ನು ಮತ್ತು ಕಲಾವಿದರನ್ನು ಪರಿಚಯಿಸಿ ಕಾರ್ಯಕ್ರಮಕ್ಕೆ ಮುನ್ನುಡಿ ನೀಡಿದರು.
ಕಾರ್ಯಕ್ರಮಕ್ಕೆ ಸಹಕರಿಸುತ್ತಿರುವ ಸ್ಥಳೀಯರನ್ನು ಅಭಿನಂದಿಸಿದರು. ವೇದಮೂರ್ತಿ ಶ್ರೀನಿಧಿ ಭಟ್ಟ ಬನವಾಸಿ ಕಾರ್ಯಕ್ರಮ ಉದ್ಘಾಟಿಸಿ ಶುಭ ಕೋರಿದರು. ಉಸ್ತುವಾರಿ ಸಮಿತಿ ಹಮ್ಮಿಕೊಂಡ ಕಾರ್ಯಕ್ರಮವನ್ನು ಮನಸಾ ಶ್ಲಾಘಿಸಿದರು.
ನಂತರ ನಡೆದ ಭಕ್ತಿ ಸಂಗೀತ ಕಾರ್ಯಕ್ರಮದಲ್ಲಿ ವಿನಾಯಕ ಮುತ್ತಮುರ್ಡು ಡಾ|| ಭೀಮ್‍ಸೇನ್ ಜೋಶಿಯವರ ಜನಪ್ರಿಯ ಭಕ್ತಿ ಗೀತೆಗಳನ್ನು ಹಾಡಿ ರಂಜಿಸಿದರು. ಅಂತೆಯೇ ಸುಮಾ ರವೀಂದ್ರ ಅವರು ಭಕ್ತಿ ಸಂಗೀತ ಹಾಡಿ ಗಾನಸುಧೆಯನ್ನು ಉಣಬಡಿಸಿದರು. ಮಂಜುನಾಥ ಹೆಗಡೆ ಮೋಟಿನಸರ, ಸೀತಾ ಬಿಳಿಯೂರು ಮತ್ತು ರವೀಂದ್ರ ಸಾಥ್ ನೀಡಿದರು.
ಸ್ಥಳೀಯರಿಂದ ವೈವಿಧ್ಯಮಯ ಸಾಂಸ್ಕೃತಿಕ ಚಟುವಟಿಕೆ ನಡೆದು ಜನಮನವನ್ನು ಆಕರ್ಷಿಸುವ ಕಾರ್ಯಕ್ರಮವಾಯಿತು. ಮಹಿಳೆಯರಿಂದ ಫ್ಯಾನ್ಸಿ ಡ್ರೆಸ್ ಸ್ಪರ್ಧೆ, ಮಕ್ಕಳಿಂದ ನೃತ್ಯ ಸ್ಪರ್ಧೆ ನಡೆಯಿತು ಕೊನೆಯಲ್ಲಿ ಅಪರೂಪದ ಕಾರ್ಯಕ್ರಮವಾಗಿ ಅಂತ್ಯಾಕ್ಷರಿ ಸ್ಪರ್ಧೆ ನಡೆಯಿತು. ಗಂಗಾ, ಕಾವೇರಿ ವರದಾ ಮತ್ತು ತುಂಗಾ ಟೀಮ್‍ಗಳು ಭಾಗವಹಿಸಿ ಕಾರ್ಯಕ್ರಮಕ್ಕೆ ಮೆರಗಿನ ಬೆರಗು ತಂದರು. ಹಳೆಯ ಭಕ್ತಿಗೀತೆ, ಭಾವಗೀತೆ, ಜಾನಪದ ಗೀತೆ ಚಲನಚಿತ್ರ ಗೀತೆಗಳೆಲ್ಲಾ ಹಾಡಲ್ಪಟ್ಟು ಜನರ ನೆನಪನ್ನು ಕೆದಕಿದರು. ಶಿಕ್ಷಕ ಗೌರೀಶ ಅಡಿಗುಂಡಿ ಕಾರ್ಯಕ್ರಮ ನಿರ್ವಹಿಸಿದರು. ವೇದಿಕೆಯಲ್ಲಿ ಧರ್ಮದರ್ಶಿಗಳಾದ ಶಿವಾನಂದ ದೀಕ್ಷಿತ, ಪ್ರೊ| ಜಿ.ಎ ಹೆಗಡೆ ಸೋಂದಾ, ಹನುಮಂತ ಮಡ್ಲೂರು, ಮಂಗಳ ದಾವಣಗೇರಿ ಉಪಸ್ಥಿತರಿದ್ದರು.