ಕುಮಟಾ : ನಗರದ ಶ್ರೀ ಮಹಾಸತಿ ಸಭಾಭವನದಲ್ಲಿ ಅಕ್ಟೊಬರ್ ೬ ರಿಂದ ೧೨ರ ವರೆಗೆ ತಾಳಮದ್ದಳೆ ಸಪ್ತಾಹ ನಡೆಯಲಿದೆ. ಈ ಕಾರ್ಯಕ್ರಮದಲ್ಲಿ ಪ್ರಖ್ಯಾತ ಯಕ್ಷ ಕಲಾವಿದರು ಭಾಗವಹಿಸಲಿದ್ದಾರೆ ಎಂದು ಮೈಸೂರು ಶ್ರೀರಂಗಪಟ್ಟಣದ ಯಕ್ಷ ಕೌಮುದಿ ಟ್ರಸ್ಟ್ ಅಧ್ಯಕ್ಷರಾದ ಗ. ನಾ. ಭಟ್ಟ ತಿಳಿಸಿದರು. ಯಕ್ಷ ಕೌಮುದಿ ಟ್ರಸ್ಟ್ ಮತ್ತು ಕುಮಟಾದ ಯುಗಾದಿ ಉತ್ಸವ ಸಮಿತಿ ಕುಮಟಾ ಸಂಯುಕ್ತ ಆಶ್ರಯದಲ್ಲಿ ಈ ತಾಳಮದ್ದಳೆ ಸಪ್ತಾಹ ನಡೆಯಲಿದೆ ಎಂದು ಅವರು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
ಕರ್ಣ ಪರ್ವ, ಭಕ್ತ ಮಯೂರ ಧ್ವಜ. ಗುರುದಕ್ಷಿಣೆ, ವಾಮನ ಚರಿತ್ರೆ. ತ್ರಿಶಂಕು ಚರಿತ್ರೆ, ಕರ್ಣ ಭೇದನ, ಭೀಷ್ಮಾರ್ಜುನ ಯಕ್ಷಗಾನ ಪ್ರಸಂಗಳ ತಾಳ ಮದ್ದಳೆ ನಡೆಯಲಿದೆ ಎಂದು ಅವರು ಮಾಹಿತಿ ನೀಡಿದರು.
ರಾಜ್ಯ ಯಕ್ಷಗಾನ ಅಕಾಡೆಮಿ ಅಧ್ಯಕ್ಷ ಡಾ. ಜಿ. ಎಲ್. ಹೆಗಡೆ, ಉಮೇಶ ಶೆಟ್ಟಿ ಸುಳ್ಯ. ಡಾ. ಎಚ್. ಎಸ್. ಮೋಹನ, ಗೋಪಾಲ ಕೃಷ್ಣ ಭಟ್ಟ ಮೊದಲಾದವರು ಕಾರ್ಯಕ್ರಮದಲ್ಲಿ ಉಪಸ್ಥಿತರಿರುವರು. ಇದಲ್ಲದೆ ಸಪ್ತಾಹದ ಬೇರೆ ಬೇರೆ ದಿನದಲ್ಲಿ ನಡೆಯುವ ತಾಳಮದ್ದಳೆ ಪ್ರಸಂಗಕ್ಕೆ ರಾಜ್ಯಾದ್ಯಂತ ಇರುವ ೨೫ಕ್ಕೂ ಹೆಚ್ಚು ಪ್ರಖ್ಯಾತ ಅರ್ಥಧಾರಿಗಳು ಆಗಮಿಸಲಿದ್ದಾರೆ ಎಂದರು.
ಕುಮಟಾ ಉತ್ಸವ ಸಮಿತಿಯ ಸಂಚಾಲಕರಾದ ಮುರಳೀಧರ ಪ್ರಭು ಮಾತನಾಡಿ ನಮ್ಮ ಭಾರತೀಯ ಸಂಸ್ಕೃತಿ ಉಳಿಸಿ ಬೆಳೆಸಬೇಕಾಗಿದೆ ಈ ಉದ್ದೇಶದಿಂದಲೇ ಉತ್ಸವ ಸಮಿತಿಯೂ ತಾಳಮದ್ದಳೆಯಂತಹ ಸಂಸ್ಕೃತಿ ಬಿಂಬಿಸುವ ಕಾರ್ಯಕ್ರಮವನ್ನು ಕುಮಟಾದಲ್ಲಿ ಆಯೋಜಿಸಲು ನಿರ್ಧರಿಸಲಾಗಿದೆ ಎಂದು ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಡಾ. ಸುರೇಶ ಹೆಗಡೆ. ಯುಗಾದಿ ಉತ್ಸವ ಸಮಿತಿಯ ಗೌರವ ಅಧ್ಯಕ್ಷ ಎಸ್. ಜಿ. ನಾಯಕ. ಬಿ. ಎನ್. ನಾಗರಾಜ, ರಾಜು ಶೆಟ್ಟಿ ಮೊದಲಾದವರಿದ್ದರು.