ಕುಮಟಾ : ವಿವೇಕನಗರ ವಿಕಾಸ ಸಂಘ(ರಿ)ದಿಂದ ಸೇವಾ ಚಟುವಟಿಕೆಗಳ ಸಹಾಯಾರ್ಥವಾಗಿ ಹವ್ಯಕ ಸಭಾಭವನದಲ್ಲಿ ತರಣಿಸೇನ ಕಾಳಗ ಮತ್ತು ರಾವಣ ವಧೆ ಎಂಬ ಯಕ್ಷಗಾನ ಪ್ರದರ್ಶನವು ಶ್ರೇಷ್ಟ ಹಿಮ್ಮೇಳ ಮತ್ತು ಮುಮ್ಮೇಳ ಕಲಾವಿದರ ಕೂಡುವಿಕೆಯಿಂದ ಅತ್ಯಂತ ಸಮರ್ಥವಾಗಿ ಮೂಡಿಬಂದಿತು.ಪ್ರಾಸ್ಥಾವಿಕವಾಗಿ ಮಾತನಾಡಿದ ಸಂಘದ ಅಧ್ಯಕ್ಷರಾದ ಡಾ.ಎಮ್ ಆರ್ ನಾಯಕ ಕಳೆದ ನಾಲ್ಕು ವರ್ಷಗಳಿಂದ ವಿವೇಕನಗರ ವಿಕಾಸ ಸಂಘದಿಂದ ಕೈಗೊಳ್ಳಲಾದ ಸೇವಾ ಚಟುವಟಿಕೆಗಳ ಸಂಕ್ಷಿಪ್ತ ಮಾಹಿತಿಯನ್ನು ಸೇರಿದ ಕಲಾಭಿಮಾನಿಗಳಿಗೆ ವಿವರಿಸಿ,ಸಂಘದ ಚಟುವಟಿಕೆಗಳಿಗೆ ಉತ್ತಮ ಸಹಾಯ ಸಹಕಾರವನ್ನು ನೀಡುತ್ತಿರುವ ವಿವೇಕನಗರದ ನಿವಾಸಿಗಳಿಗೆ ಹಾಗೂ ಕುಮಟಾದ ಜನತೆಗೆ ಧನ್ಯವಾದಗಳನ್ನು ಸಲ್ಲಿಸುತ್ತಾ ಸಂಘದ ಪರವಾಗಿ ಸರ್ವರನ್ನು ಗೌರವಯುತವಾಗಿ ಸ್ವಾಗತಿಸಿದರು.ಹಿಮ್ಮೇಳದಲ್ಲಿ ಭಾಗವತರಾಗಿ ಶ್ರೀ ರಾಮಕೃಷ್ಣ ಹಿಲ್ಲೂರ,ಮ್ರದಂಗವಾದಕರಾಗಿ ಶ್ರೀ ಗಜಾನನ ಬೋಳ್ಗೆರೆ ಮತ್ತು ಚೆಂಡೆ ವಾದಕರಾಗಿ ಶ್ರೀ ಗಜಾನನ ಸಾಂತುರ ಭಾಗವಹಿಸಿದ್ದರು.

ಮುಮ್ಮೇಳದಲ್ಲಿ ಶ್ರೀಯುತರುಗಳಾದ ರಾಮಚಂದ್ರ ಹೆಗಡೆ ಕೊಂಡದಕುಳಿ ರಾವಣ ವಾಸುದೇವ ರಂಗಭಟ್ ರಾಮಾ, ಶಂಕರಹೆಗಡೆ ಮಂಡೋದರಿ,ಆನಂದ ಭಟ್ ಕೆಕ್ಕಾರ ವಿಭೀಷಣ ಮತ್ತು ಮಾತಲಿ, ಚಂದ್ರಹಾಸ ಹೊಸಪಟ್ಟಣ ತರಣಿಸೇನ,ಶ್ರೀಧರ ಕಾಸರಗೋಡು ದೂತ, ನಾಗರಾಜ ಕುಂಕಿಪಾಲ ಸರಮೆಯ ಪಾತ್ರಗಳನ್ನು ತುಂಬಾ ಸೊಗಸಾಗಿ ನಿರ್ವಹಿಸಿದರು.ವಿಭೀಷಣನ ಮಗನಾದ ತರಣಿಸೇನ ತನ್ನ ದೊಡ್ಡಪ್ಪ ರಾವಣನಿಂದ ಅಪ್ಪಣೆ ಪಡೆದು ತಾಯಿಯಾದ ಸರಮೆಯಲ್ಲಿ ತಾನು ರಾಮನೊಡನೆ ಯುದ್ಧಮಾಡುವುದಕ್ಕಾಗಿ ಹೋಗುತ್ತೇನೆ ,ಸಂತೋಷದಿಂದ ಹರಿಸಿ ಕಳುಹಿಸು ಎಂದು ವಿನೀತನಾಗಿ ಹೇಳುವ ಸನ್ನಿವೇಶ ,ಯುದ್ಧದ ಪರಿಣಾಮವನ್ನು ಮೊದಲೇ ಉಹಿಸಿದ ತಾಯಿಯ ತೊಳಲಾಟದ ಸನ್ನಿವೇಶಗಳು ಸೇರಿದ ಜನರು ಮನಸ್ಸನ್ನು ತಟ್ಟಿ ಕಣ್ಣೀರು ತರಿಸುವಂತೆ ಮಾಡುವ ಮೂಲಕ ಶ್ರೇಷ್ಟ ಅಭಿನಯವನ್ನು ನೀಡಿದರು.

RELATED ARTICLES  ಹುಷಾರ್! ಉತ್ತರ ಕನ್ನಡದ ಹಲವು ಚೆಕ್ ಪೋಸ್ಟಗಳಲ್ಲಿ ಸಿ.ಸಿ ಕ್ಯಾಮರಾ ಅಳವಡಿಸಲಾಗಿದೆ.

ಇದನ್ನೂ ಓದಿ – ಉತ್ತರಕನ್ನಡಕ್ಕೆ ಬರಲಿದ್ದಾರೆ ಆರೋಗ್ಯ ಸಚಿವರು : ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಗೆ ಜಾಗ ನಿಗದಿ..?

ಯುದ್ಧರಂಗದಲ್ಲಿ ಪ್ರವೇಶಿಸಿದಈ ಹುಡುಗ ಯಾರು ಎಂಬ ಶ್ರೀರಾಮನ ಪ್ರಶ್ನೆಗೆ ವಿಭೀಷಣ ತನ್ನ ಮಗನೆಂದು ಹೇಳದೇ ರಾವಣನ ಸಾಕುಮಗ ಎಂದು ಸುಳ್ಳನ್ನು ಹೇಳಬೇಕಾದ ಅನಿವಾರ್ಯತೆ,ಯುದ್ದದಲ್ಲಿ ಮಗ ಸತ್ತು ಹೆಣವಾಗಿ ಬಿದ್ದಿರುವಾಗ ದುಖ್ಖಿಸುವ ಸಮಯದಲ್ಲಿ ಇವ ನನ್ನ ಮಗ ಎಂದು ಹೇಳುವ ಸಂದರ್ಭದಲ್ಲಿ ಶ್ರೀರಾಮ ವಿಭೀಷಣರ ಸಂಭಾಷಣೆ ಎಂತಹ ಕಟುಕನ ಮನಸ್ಸು ಸಹ ಕರಗುವಂತೆ ಅಮೋಘ ಅಭಿನಯಕ್ಕೆ ಸಾಕ್ಷಿಯಾಯಿತು.ಆನಂತರ ದೂತ ಓಡಿಬಂದು ರಾವಣನಲ್ಲಿ ಯುದ್ಧದ ವರ್ತಮಾನವನ್ನು ಹೇಳುತ್ತಾ, ಶ್ರೀರಾಮ ಕೇವಲ ಮಾನವನಲ್ಲ,ಅವನು ಗೂಢಬ್ರಹ್ಮನಾದ ನಾರಾಯಣನು ಎಂದು ಹೇಳುವ ಸನ್ನಿವೇಶ ಅದಕ್ಕೆ ರಾವಣನ ಸ್ಪಂದನೆಯು ಉತ್ಕೃಷ್ಟ ಅಭಿನಯಕ್ಕೆ ಸಾಕ್ಷಿಯಾಯಿತು.ರಾವಣ ಮಂಡೋದರಿಯರ ನಡುವಿನ ‌ಸಂಭಾಷಣೆ,ರಾವಣ ಶ್ರೀರಾಮನ ನಡುವಿನ ‌ಸಂಭಾಷಣೆಗಳು ಕಲಾರಸಿಕರ ಮನಸೂರೆಗೊಂಡಿತು.ಕೊನೆಯಲ್ಲಿ ಶ್ರೀರಾಮ ಕೋದಂಡಪಾಣಿಯಾಗಿ ರಾವಣನಿಗೆ ವಿಶ್ವರೂಪ ದರ್ಶನ ಮಾಡಿದಾಗ ಕಂಡನು ದಶವದನ ಎಂಬ ಪಂದ್ಯಕ್ಕೆ ಕೊಂಡದಕುಳಿಯವರು ಮತ್ಸ್ಯ, ಕೂರ್ಮ, ವರಾಹ, ನರಸಿಂಹ,ವಾಮನ, ಪರಶುರಾಮ ಅವತಾರಗಳನ್ನು ರಂಗದಲ್ಲಿ ತುಂಬಾ ಮನೋಜ್ಞವಾಗಿ ಅಭಿನಯಿಸಿ ತಾವು ಯಕ್ಷರಂಗದ ಸರ್ವಶ್ರೇಷ್ಟ ಕಲಾವಿದರು ಎನ್ನುವುದನ್ನು ಪ್ರಕಟಪಡಿಸಿದರು.ಸಂಜೆ ಐದು ಗಂಟೆಯಿಂದ ರಾತ್ರಿ ಒಂಬತ್ತು ಗಂಟೆಯವರೆಗೆ ನಡೆದ ಯಕ್ಷಗಾನ ಕಥಾನಕಗಳು ಅತ್ಯಂತ ಯಶಸ್ವಿಯಾಗಿ ಸಂಪನ್ನಗೊಂಡಿತು.

RELATED ARTICLES  ಎಮ್ಮೆಯ ಮಣಕದ ಹೊಟ್ಟೆಯಲ್ಲಿತ್ತು 80 ಕೆಜಿ ಪ್ಲಾಸ್ಟಿಕ್.! ಶಸ್ತ್ರ ಚಿಕಿತ್ಸೆಯ ಮೂಲಕ ಹೊರತೆಗೆದ ವೈದ್ಯರು.

ಶ್ರೀಯುತ ಬಾಲು ಅವರು ಉತ್ತಮ ಧ್ವನಿವರ್ಧಕ ವ್ಯವಸ್ಥೆಯನ್ನು ಮಾಡಿದ್ದು , ಶ್ರೇಷ್ಟ ವೇಷಭೂಷಣ ಪೆಟ್ಟಿಗೆಯನ್ನು ಶ್ರೀ ಲಕ್ಷ್ಮಣ ನಾಯ್ಕ ಚಿತ್ತಾರ ಒದಗಿಸಿದ್ದು,ಸಮರ್ಥ ಹಿಮ್ಮೇಳ ಮತ್ತು ಮುಮ್ಮೇಳ ಕಲಾವಿದರ ಕೂಡುವಿಕೆಯಲ್ಲಿ ವಿವೇಕನಗರ ವಿಕಾಸ ಸಂಘದಿಂದ ಸಂಘಟಿಸಲಾದ ಯಕ್ಷಗಾನ ಕಾರ್ಯಕ್ರಮವನ್ನು ಸೇರಿದ ಜನ ಪ್ರಶಂಸಿಸಿದರು.