ಕುಮಟಾ: ಇತ್ತೀಚಿನ ದಿನಗಳಲ್ಲಿ ಪ್ರಜ್ಞಾವಂತರಾದವರು ಹಾಗೂ ಸತ್ವಶೀಲರಾದವರು ನಾಯಕರಾಗದೇ, ಅಗತ್ಯ ವಿದ್ಯಾರ್ಹತೆಯನ್ನು ಹೊಂದಿರದ, ಪ್ರಜ್ಞಾವಂತರಲ್ಲದ ಹಾಗೂ ಪ್ರಾಮಾಣಿಕ ಕಳಕಳಿಯಿಲ್ಲದವರು ನೇತಾರರಾಗುತ್ತಿರುವುದು ಪ್ರಜಾಪ್ರಭುತ್ವದ ವ್ಯವಸ್ಥೆಯಲ್ಲಿ ತೀವ್ರವಾದ ಆತಂಕವನ್ನು ಸೃಷ್ಟಿಸುತ್ತಿದೆ ಎಂದು ಜಿಲ್ಲಾ ಪಂಚಾಯತ್ ಮಾಜಿ ಸದಸ್ಯೆ ಗಾಯತ್ರಿ ಗೌಡ ನುಡಿದರು. ಅವರು ನಗರದ ಹೆರವಟ್ಟಾದಲ್ಲಿನ ಮಡಿವಾಳ ಕೇರಿಯಲ್ಲಿರುವ ಎಸ್.ಎಸ್.ಪೈ ರವರ ನಿವಾಸವಾದ “ಶ್ರೀ ಮೂಕಾಂಬಿಕಾ” ದಲ್ಲಿ ಕರ್ನಾಟಕ ರಾಜ್ಯ ಬೋಧಕರ ಸಂಘವು ಶ್ರೀ ಸರಸ್ವತಿ ಪೂಜೆಯೊಂದಿಗೆ ಹಮ್ಮಿಕೊಂಡ “ಬಾಪು-ಶಾಸ್ತ್ರಿ ಸಂಸ್ಮರಣಾ ಜಯಂತಿ” ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನ್ನಾಡಿದರು.
ಗಾಂಧಿ ಮತ್ತು ಶಾಸ್ತ್ರಿಯವರಂತವರ ನಡೆ-ನುಡಿಯನ್ನು ಬದುಕಿನಲ್ಲಿ ಸಂಪೂರ್ಣವಾಗಿ ಅಳವಡಿಸಿಕೊಳ್ಳಲು ಯಾರಿಂದಲೂ ಸಾಧ್ಯವಿಲ್ಲವೆಂಬುದು ಸತ್ಯವಾದರೂ, ಅವರ ಆದರ್ಶವನ್ನು ಮರೆತು ವ್ಯವಹರಿಸುತ್ತಿರುವುದು ವರ್ತಮಾನ ವ್ಯವಸ್ಥೆಯ ದೌರ್ಭಾಗ್ಯವಾಗಿದೆ. ವಿದ್ಯಾವಂತ-ಪ್ರಜ್ಞಾವಂತ-ಸಮರ್ಪಣಾ ಮನೋಭಾವವುಳ್ಳ ಪ್ರಾಮಾಣಿಕ ಸತ್ವಶೀಲ ವ್ಯಕ್ತಿಯು ನಾಯಕರಾದಲ್ಲಿ ಸೌಖ್ಯ ಸಾಧ್ಯ ಎಂದ ಅವರು, ಕರ್ನಾಟಕ ರಾಜ್ಯ ಬೋಧಕರ ಸಂಘವು ಅತ್ಯಂತ ವಿದ್ಯಾವಂತರಾದ ಹಾಗೂ ಎಲ್ಲ ವಿಷಯಗಳಲ್ಲಿಯೂ ಸಾಕಷ್ಟು ಅರಿವಿರುವ ಮತ್ತು ಮುಖ್ಯವಾಗಿ ಸಾಮೂಹಿಕ ಹಿತಾಸಕ್ತಿಯಲ್ಲಿ ತೀವ್ರವಾದ ಕಳಕಳಿಯುಳ್ಳ ರಾಜ್ಯಾಧ್ಯಕ್ಷರಾದ ಮಂಜುನಾಥ ಗಾಂವಕರ್ ಬರ್ಗಿಯವರ ನಾಯಕತ್ವದಲ್ಲಿ ಮುನ್ನಡೆಯುತ್ತಿರುವುದು ತೀರಾ ಆಶಾದಾಯಕವಾದ ಬೆಳವಣಿಗೆಯೆಂದು ನುಡಿದರು.
ಅಭ್ಯಾಗತರಾಗಿದ್ದ ಹೆಗಡೆಯ ಶ್ರೀ ಶಾಂತಿಕಾಂಬ ಪ್ರೌಢಶಾಲೆಯ ವಿಶ್ರಾಂತ ಮುಖ್ಯಾಧ್ಯಾಪಕ ಎಸ್.ಬಿ.ನಾಯ್ಕ ಮಾತನ್ನಾಡಿ – ವಿಶ್ವಮಾನ್ಯರಾದ ಗಾಂಧಿ ಹುಟ್ಟಿದ ದೇಶದಲ್ಲಿ ನಾವೂ ಜನ್ಮವೆತ್ತದ್ದೇವೆ ಎಂಬುದೇ ಬದುಕಿನ ಬಹುದೊಡ್ಡ ಭಾಗ್ಯವೆಂದುಕೊಳ್ಳುವುದರೊಟ್ಟಿಗೆ, ದೇಶಕ್ಕೆ ಸ್ವಾತಂತ್ರ್ಯವನ್ನು ಪಡೆಯುವಲ್ಲಿ ಅವರ ಹಿರಿದಾದ ಆಶಯ ಮತ್ತು ರಾಮರಾಜ್ಯದ ಕನಸನ್ನು ಸಾಕಾರಗೊಳಿಸುವಲ್ಲಿ ನಾವೆಷ್ಟು ಸಫಲರಾಗಿದ್ದೇವೆ ಎಂಬುದರ ಕುರಿತು ಆತ್ಮಾವಲೋಕವನ್ನು ಮಾಡಿಕೊಳ್ಳಬೇಕಾದ ಹೊತ್ತಿದು ಎಂದರು.
ಕರ್ನಾಟಕ ರಾಜ್ಯ ಬೋಧಕರ ಸಂಘದ ರಾಜ್ಯಾಧ್ಯಕ್ಷರಾದ ಮಂಜುನಾಥ ಗಾಂವಕರ್ ಬರ್ಗಿ ಸಭಾಧ್ಯಕ್ಷತೆಯನ್ನು ವಹಿಸಿದ್ದರು. ಗೋಪಾಲಕೃಷ್ಣ ಪುರಾಣಿಕ್ ಪ್ರಾರ್ಥಿಸಿದರು. ಸಂಘಟನಾ ಕಾರ್ಯದರ್ಶಿ ಪ್ರಾಚಾರ್ಯ ಎಸ್.ಜಿ.ಭಟ್ ಸ್ವಾಗತಿಸಿದರು. ಉಪಾಧ್ಯಕ್ಷ ಎಚ್.ಬಿ.ರಾಹುತ್ ವಂದಿಸಿದರು. ಸಂಚಾಲಕ ವಿಜಯಕುಮಾರ ನಾಯ್ಕ ನಿರೂಪಿಸಿದರು. ಜಿ.ಎನ್.ಗಾವಡಿ ವಂದಿಸಿದರು.