ಕುಮಟಾ:ಇಲ್ಲಿನ ಹೊಳೆಗದ್ದೆಯ ಶ್ರೀ ಶಾಂತಿಕಾ ಪರಮೇಶ್ವರಿ ದೇವಾಲಯ ಹಾಗೂ ಸ್ವರಾಂಗಣ ಟ್ರಸ್ಟ್ ಇದರ ಸಂಯುಕ್ತ ಆಶ್ರಯದಲ್ಲಿ ಶರನ್ನವರಾತ್ರಿಯ ನಿಮಿತ್ತ ಗಾನ-ನಾಟ್ಯ ವೈಭವ ಎಂಬ ಸಾಂಸ್ಕೃತಿಕ ಕಾರ್ಯಕ್ರಮವನ್ನು ಏರ್ಪಡಿಸಲಾಗಿತ್ತು. ಇದೇ ಸಂದರ್ಭದಲ್ಲಿ ‘ಸ್ವರಾಂಗಣ’ ಎಂಬ ಸಾಂಸ್ಕೃತಿಕ ಸಂಸ್ಥೆಯನ್ನು ಉದ್ಘಾಟಿಸಲಾಯಿತು.
ಇದರ ಉದ್ಘಾಟನೆಯನ್ನು ಖ್ಯಾತ ಹಿಂದುಸ್ತಾನಿ ಗಾಯಕರು ರಾಗಶ್ರೀ ಅಧ್ಯಕ್ಷರೂ ಆದ ವಿದ್ವಾನ್ ಶಿವಾನಂದ ಭಟ್ಟ ಹಡಿನಬಾಳ ಉದ್ಘಾಟಿಸಿದರು. ನಂತರ ಮಾತಾನಾಡಿದ ಅವರು ಕಲೆ ನಮ್ಮ ದೇಶದ ಸಂಸ್ಕೃತಿಯನ್ನ ಜೀವಂತವಾಗಿಸಲು ಅಗತ್ಯ ಎಂದು ಮುಂದಿನ ತಲೆಮಾರಿಗೆ ಕಲೆಯ ಹಸ್ತಾಂತರಕ್ಕೆ ಸ್ವರಾಂಗಣದಂತ ಸಂಸ್ಥೆಗಳು ಇದ್ದಾಗ ಮಾತ್ರ ಅದು ಹೆಚ್ಚು ಪ್ರಭಾವಿ ಎಂದು ಮಾರ್ಮಿಕವಾಗಿ ನುಡಿದರು.
ಕಾರ್ಯಕ್ರಮದ ಮುಖ್ಯ ಅತಿಥಿಗಳಾದ ನಿವೃತ್ತ ಪ್ರೌಢಶಾಲಾ ಮುಖ್ಯಾಧ್ಯಾಪಕರಾದ ಶ್ರೀ ಎ.ಆರ್.ಭಟ್ಟ ಬೆತ್ತಗೇರಿ ಮಾತನಾಡಿ ಕಲೆ ನಮ್ಮ ಬದುಕಿಗೆ ಆನಂದ-ನೆಮ್ಮದಿಯನ್ನು ನೀಡುತ್ತದೆ. ಅಂತಹ ಒಂದು ಸಂಸ್ಥೆ ದೇವಾಲಯದಲ್ಲಿ ಉದ್ಘಾಟನೆ ಆಗಿರುವುದು ನಮ್ಮೂರಿನ ಭಾಗ್ಯ ಎಂದು ನುಡಿದರು. ಇದೇ ಸಂದರ್ಭದಲ್ಲಿ ದೇವಾಲಯದ ಅಧ್ಯಕ್ಷರು ಮತ್ಸದಿಗಳೂ ಆದ ಶ್ರೀ ಜಿ.ವಿ.ಹೆಗಡೆ ಮೂಡ್ಕೊಳಿ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು. ಮಾತನಾಡಿದ ಅವರು ಸಂಸ್ಥೆ ಬೆಳೆದು ಹೆಮ್ಮರವಾಗಿ ನಾಡಿನೆಲ್ಲೆಡೆ ತನ್ನ ಕಂಪು ಹರಡಲಿ ಎಂದು ಶುಭ ಹಾರೈಸಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕುಮಟಾದ ಕಮಲಾ ಬಾಳಿಗ ಪ್ರಶಿಕ್ಷಣ ಮಹಾವಿದ್ಯಾಲಯದ ಡಾ.ಡಿ.ಡಿ.ಭಟ್ಟ ಅವರು ಮಾತನಾಡಿ ಕಾರ್ಯಕ್ರಮವು ಅಚ್ಚುಕಟ್ಟಾಗಿ ಮೂಡಿಬಂದಿದ್ದು ಈ ಸಂಸ್ಥೆಯು ನಾಡಿನುದ್ದಕ್ಕು ಎಲ್ಲರನ್ನು ತಲುಪಲಿ ಹಾಗೂ ಸಂಸ್ಥೆಯ ಬೆನ್ನಿಗೆ ಸಹಾಯ ಸಹಕಾರಕ್ಕಾಗಿ ದೇವಸ್ಥಾನದ ಪರವಾಗಿ ನಾವೆಂದಿಗೂ ಸಿದ್ಧವೆಂದು ನುಡಿದರು.
ಕಾರ್ಯಕ್ರಮದಲ್ಲಿ ದೇವಾಲಯದ ಉಪಾಧ್ಯಕ್ಷರಾದ ಶ್ರೀ ಜಯರಾಮ ಭಟ್ಟ, ಸ್ವರಾಂಗಣದ ಅಧ್ಯಕ್ಷರಾದ ಮಂಜುನಾಥ ರಾಮಚಂದ್ರ ಹೆಗಡೆ, ಕಾರ್ಯದರ್ಶಿ ಪ್ರವೀಣ ಗಣಪತಿ ಹೆಗಡೆ ಕಣ್ಣಿಮನೆ , ಶ್ರೀ ಶೇಷಾದ್ರಿ ಅಯ್ಯಂಗಾರ್ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಸಂಗೀತ ಕಾರ್ಯಕ್ರಮದಲ್ಲಿ ಕುಮಾರ ಪ್ರಥಮ ಭಟ್ಟ, ನೇಹಾ ಭಟ್ಟ,ಶಿಲ್ಪಾ ಭಟ್ಟ, ಪ್ರತಿಭಾ ಹೆಗಡೆ, ರಂಜಿತಾ ನಾಯ್ಕ, ಭಾಗ್ಯಲಕ್ಷ್ಮಿ ಭಟ್ಟ ಗಾಯನ ಪ್ರಸ್ತುತ ಪಡಿಸಿದರು. ಭರತನಾಟ್ಯದ ಯುವ ಪ್ರತಿಭೆ ಕೆ.ರಾಜೇಶ್ವರಿ ಭಟ್ಟ ಕುಮಟಾ ಸುಂದರವಾಗಿ ಭರತನಾಟ್ಯವನ್ನು ಪ್ರಸ್ತುತ ಪಡಿಸಿದರು. ನಂತರದಲ್ಲಿ ಖ್ಯಾತ ಗಾಯಕ ವಿದ್ವಾನ ಶಿವಾನಂದ ಭಟ್ಟ ಹಡಿನಬಾಳ ಅವರು ರಾಗ ದುರ್ಗಾವನ್ನು ಸುಂದರವಾಗಿ ಪ್ರಸ್ತುತ ಪಡಿಸಿ ದೇವಿಯ ಭಜನೆಗಳನ್ನು ಶ್ರಾವ್ಯವಾಗಿ ಹಾಡಿದ್ದು ಎಲ್ಲರನ್ನು ಮಂತ್ರ ಮುಗ್ಧ ಗೊಳಿಸಿತು. ಇವರಿಗೆ ಅಷ್ಟೇ ಉತ್ತಮವಾಗಿ ಖ್ಯಾತ ತಬಲಾ ವಾದಕರಾದ ವಿದ್ವಾನ ಶೇಷಾದ್ರಿ ಅಯ್ಯಂಗಾರ್ ಹಾಗೂ ಶ್ರೀ ವಿನಾಯಕ ಭಟ್ಟ ಹರ್ಡಸೆ ತಬಲಾ ಸಾಥನ್ನು ಶ್ರೀ ಹರಿಶ್ಚಂದ್ರ ನಾಯ್ಕ ಸಂವಾದಿನಿ ಸಾಥನ್ನು, ಭಾಗ್ಯಲಕ್ಷ್ಮಿ ಭಟ್ಟ ತಂಬೂರ ಸಾಥನ್ನು ಹಾಗು ಪ್ರಥಮ ಭಟ್ಟ ತಾಳದಲ್ಲಿ ಸಹಕರಿಸಿದರು. ಸ್ವರಾಂಗಣ ಸಂಸ್ಥೆಯ ಅಧ್ಯಕ್ಷರಾದ ಶ್ರೀ ಮಂಜುನಾಥ ರಾಮಚಂದ್ರ ಹೆಗಡೆ ಸ್ವಾಗತಿಸಿದರೆ ಕಾರ್ಯದರ್ಶಿ ಪ್ರವೀಣ ಗಣಪತಿ ಹೆಗಡೆ ವಂದನಾರ್ಪಣೆ ಸಲ್ಲಿಸಿದರು. ಶ್ರೀ ವಿ.ಜಿ.ಹೆಗಡೆ ಕಾರ್ಯಕ್ರಮವನ್ನು ನಿರೂಪಿಸಿದರು ಹಾಗು ಸೀತಾರಾಮ ಭಟ್ಟ ಕಲಾವಿದರನ್ನು ಗೌರವಿಸಿದರು.