ಕುಮಟಾ: ಪಟ್ಟಣದ ಇಂಡಿಯನ್ ಓವರ್‌ಸೀಸ್ ಬ್ಯಾಂಕ್‌ನ ಶಾಖಾ ವ್ಯವಸ್ಥಾಪಕರು ಕನ್ನಡ ಭಾಷೆ ಬದಲಿಗೆ ಹಿಂದಿ ಭಾಷೆಯಲ್ಲಿ ಗ್ರಾಹಕರ ಜತೆ ವ್ಯವಹರಿಸುತ್ತಿರುವುದನ್ನು ಖಂಡಿಸಿ ಕರವೇ ಜಿಲ್ಲಾಧ್ಯಕ್ಷ ಭಾಸ್ಕರ ಪಟಗಾರ ನೇತೃತ್ವದಲ್ಲಿ ಕಾರ್ಯಕರ್ತರು ಬ್ಯಾಂಕ್‌ಗೆ ತೆರಳಿ, ವ್ಯವಸ್ಥಾಪಕರು ಕನ್ನಡ ಕಲಿತು ಗ್ರಾಹಕರೊಂದಿಗೆ ವ್ಯವಹರಿಸಿ ಎಂದು ಆಗ್ರಹಿಸಿದರು.

ರಾಷ್ಟ್ರೀಕೃತ ಬ್ಯಾಂಕ್‌ಗಳಲ್ಲಿ ಹೆಚ್ಚಿನವರು ಉತ್ತರ ಭಾರತದವರಾಗಿದ್ದು, ಕೆಲವಷ್ಟು ಅಧಿಕಾರಿಗಳು ಮತ್ತು ಸಿಬ್ಬಂದಿಗಳು ಕನ್ನಡದ ಬದಲು ಹಿಂದಿಯಲ್ಲಿ ಮಾತನಾಡುತ್ತಾರೆ. ಇದರಿಂದ ಬ್ಯಾಂಕ್‌ಗೆ ಆಗಮಿಸುವ ಗ್ರಾಹಕರಿಗೆ ವ್ಯವಾಹಾರಕ್ಕೆ ತೀವ್ರ ಸಮಸ್ಯೆಯಾಗಿದೆ. ಅಲ್ಲದೇ ಕನ್ನಡ ಕಲಿತು ಮಾತನಾಡಿ ಎಂದರೆ ಆ ಅಧಿಕಾರಿ ಉದ್ಧಟತನದ ಮಾತನಾಡಿದ್ದಾರೆ ಎಂದು ಗ್ರಾಹಕರೊಬ್ಬರು ಕರವೇ ಜಿಲ್ಲಾಧ್ಯಕ್ಷ ಭಾಸ್ಕರ ಪಟಗಾರ ಅವರ ಗಮನಕ್ಕೆ ತಂದಿದ್ದರು. ಹಾಗಾಗಿ ಬ್ಯಾಂಕ್‌ಗೆ ತೆರಳಿದ ಭಾಸ್ಕರ ಪಟಗಾರ ಅವರು ಶಾಖಾ ವ್ಯವಸ್ಥಾಪಕರಿಗೆ ಬುದ್ಧಿಮಾತು ಹೇಳಿದ್ದಾರೆ.

RELATED ARTICLES  ಅರಣ್ಯದಲ್ಲಿ ಕೈಕಾಲು ಕಟ್ಟಿದ ಸ್ಥಿತಿಯಲ್ಲಿ ಪತ್ತೆಯಾದ ವಿದ್ಯಾರ್ಥಿನಿ : ಪೊಲೀಸರಿಂದ ತನಿಖೆ ಚುರುಕು

ಇದನ್ನೂ ಓದಿ – ಪ್ಯಾಸೆಂಜರ್ ಟ್ಯಾಂಪೋ ಪಲ್ಟಿ : ಓರ್ವ ಸಾವು – 12 ಕ್ಕೂ ಹೆಚ್ಚು ಜನರಿಗೆ ಪೆಟ್ಟು.

ಈ ಬಗ್ಗೆ ಪ್ರತಿಕ್ರಿಯಿಸಿದ ಭಾಸ್ಕರ ಪಟಗಾರ, ಕುಮಟಾದ ಇಂಡಿಯನ್ ಓವರಸೀಸ್ ಬ್ಯಾಂಕ್‌ನ ಶಾಖಾ ವ್ಯವಸ್ಥಾಪಕ ರಾಕೇಶ ರಂಜನ ಕನ್ನಡ ಮಾತನಾಡುವುದಿಲ್ಲ ಎಂದು ಬೇಜಾವಾಬ್ದಾರಿ ಉತ್ತರ ನೀಡಿರುವುದರಿಂದ ಕರ್ನಾಟಕ ರಕ್ಷಣಾ ವೇದಿಕೆಯಿಂದ ಖಂಡಿಸಲಾಗಿದೆ. ಕನ್ನಡ ಕಲಿತು ಬ್ಯಾಂಕ್‌ಗೆ ಆಗಮಿಸುವ ಗ್ರಾಹಕರ ಜತೆ ಕನ್ನಡದಲ್ಲಿಯೇ ಮಾತನಾಡಬೇಕು ಎಂದು ಎಚ್ಚರಿಕೆ ನೀಡಲಾಗಿದೆ. ಕರ್ನಾಟಕದಲ್ಲಿ 3 ವರ್ಷದಿಂದ ಬ್ಯಾಂಕ್‌ನಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಆದರೆ ಒಂದೇ ಒಂದು ಶಬ್ದ ಕನ್ನಡ ಮಾತನಾಡುವುದಿಲ್ಲ. ಕನ್ನಡ ಕಲಿತು ಇಲ್ಲಿ ಸೇವೆ ಮಾಡಿ, ಇಲ್ಲವಾದಲ್ಲಿ ನಿಮ್ಮ ರಾಜ್ಯಕ್ಕೆ ವರ್ಗಾವಣೆ ಮಾಡಿಸಿಕೊಳ್ಳಿ ಎಂದು ಎಚ್ಚರಿಕೆ ನೀಡಿದ್ದೇವೆ ಎಂದರು.

RELATED ARTICLES  ಮನುಷ್ಯನ ವ್ಯಕ್ತಿತ್ವಕ್ಕೆ ಸಂಸ್ಕಾರ, ಸಂಸ್ಕೃತಿ ಅಗತ್ಯ: ಕೃಷ್ಣ ಭಟ್ಟ ನಾಯಕನಕೆರೆ

ಶಾಖಾ ವ್ಯವಸ್ಥಾಪಕ ರಾಕೇಶ ರಂಜನ ಪ್ರತಿಕ್ರಿಯಿಸಿ, ಕನ್ನಡ ಕಲಿತು ಕನ್ನಡದಲ್ಲಿಯೇ ಮಾತನಾಡಲು ಪ್ರಯತ್ನಿಸುತ್ತೇನೆ ಎಂದರು. ಈ ಸಂದರ್ಭದಲ್ಲಿ ಕರವೇ ಕಾರ್ಯಕರ್ತರಾದ ವಿನಾಯಕ ನಾಯ್ಕ, ಕೃಷ್ಣ ಪಟಗಾರ, ಬಲೀಂದ್ರ ಗೌಡ, ಶ್ರೀಕಾಂತ ಪಟಗಾರ ಸೇರಿದಂತೆ ಮತ್ತಿತರರು ಇದ್ದರು.