ಹೊನ್ನಾವರ : ಯಕ್ಷಗಾನದ ಬಡಗುತಿಟ್ಟಿನ ಹಿರಿಯ ಭಾಗವತ ಮತ್ತು ಕಲಾಗುರು ಶ್ರೀ ಉಮೇಶ ಭಟ್ಟ ಬಾಡ ಇವರಿಗೆ ಅ.15 ರಂದು ಹೊನ್ನಾವರ ತಾಲೂಕಿನ ಹಳದೀಪುರದಲ್ಲಿ ಅವರ ಶಿಷ್ಯವೃಂದದಿಂದ ಗುರುವಂದನೆ ನಡೆಯಲಿದೆ.
ಇತ್ತೀಚೆಗೆ ಉಮೇಶ ಭಟ್ಟರು ಕರ್ನಾಟಕದ ಯಕ್ಷಗಾನ ಅಕಾಡೆಮಿಯು ಕೊಡಮಾಡುವ ಪ್ರತಿಷ್ಠಿತ ಗೌರವ ಪ್ರಶಸ್ತಿಗೆ ಭಾಜನರಾದ ನೆಲೆಯಲ್ಲಿ ಅವರ ಅಪಾರ ಶಿಷ್ಯ ಗಡಣವು ಈ ಅದ್ಧೂರಿಯ ಮತ್ತು ವಿನೂತನ ಗುರುವಂದನೆ-ಅಭಿನಂದನಾ ಕಾರ್ಯಕ್ರಮವನ್ನು ಹಮ್ಮಿಕೊಂಡಿದೆ.
ಈ ಗುರುವಂದನಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕರ್ನಾಟಕ ಯಕ್ಷಗಾನ ಅಕಾಡೆಮಿಯ ಅಧ್ಯಕ್ಷರಾದ ಡಾ.ಜಿ.ಎಲ್.ಹೆಗಡೆ ನಿರ್ವಹಿಸಲಿದ್ದಾರೆ, ಮುಖ್ಯ ಅತಿಥಿಗಳಾಗಿ ಹಿರಿಯ ಪತ್ರಕರ್ತ ಜಿ.ಯು.ಭಟ್ ಹೊನ್ನಾವರ ಕೆ.ಡಿ.ಸಿ.ಸಿ. ಬ್ಯಾಂಕ್ ನಿರ್ದೇಶಕ ಕಡತೋಕಾ ಶಿವಾನಂದ ಹೆಗಡೆ, ಹೊನ್ನಾವರದ ಸೇಫ್ ಸ್ಟಾರ್ ಸೌಹಾರ್ದ ಸಹಕಾರೀ ಸಂಸ್ಥೆಯ ವರಿಷ್ಠ ಜಿ.ಜಿ.ಶಂಕರ್, ಕುಮಟಾದ ಯಕ್ಷಗಾನ ಸಂಶೋಧನಾ ಕೇಂದ್ರದ ಅಧ್ಯಕ್ಷ ಮಂಜುನಾಥ ಜಿ.ಭಟ್, ಹಳದೀಪುರ ಪಂಚಾಯತದ ಅಧ್ಯಕ್ಷ ಅಜಿತ್ ನಾಯ್ಕ್, ಹಂಗಾರಕಟ್ಟೆ ಕಲಾಕೇಂದ್ರದ ಕಾರ್ಯದರ್ಶಿ ರಾಜಶೇಖರ ಹೆಬ್ಬಾರ್, ಬಡಗುತಿಟ್ಟಿನ ಜನಪ್ರಿಯ ಭಾಗವತ ರಾಘವೇಂದ್ರ ಮಯ್ಯ, ಪ್ರಾಚಾರ್ಯ ನಾರಣಪ್ಪ ಉಪ್ಪೂರರ ಪುತ್ರ ದಿನೇಶ ಉಪ್ಪೂರ್, ಸಂಶೋಧಕ ಡಾ.ಎಸ್.ಡಿ ಹೆಗಡೆ ಹೊನ್ನಾವರ, ನ್ಯಾಯವಾದಿಗಳಾದ ವಿ.ಎಂ.ಭಂಡಾರಿ, ಜನಪ್ರಿಯ ವೈದ್ಯ ಡಾ.ಪ್ರಕಾಶ ನಾಯ್ಕ್, ಮೊದಲಾದ ಗಣ್ಯರು ಈ ಗುರುವಂದನೆಯ ಅವಿಸ್ಮರಣೀಯ ಕ್ಷಣಕ್ಕೆ ಸಾಕ್ಷಿಯಾಗಲಿದ್ದಾರೆ. ಶಿಷ್ಯರ ಜೊತೆಗೆ ಯಕ್ಷರಂಗ ಪತ್ರಿಕೆಯ ಸಂಪಾದಕ ಕಡತೋಕಾ ಗೋಪಾಲಕೃಷ್ಣ ಭಾಗವತರು ಉಮೇಶ ಭಟ್ಟರ ಕುರಿತು ಅಭಿನಂದನಾ ನುಡಿಗಳನ್ನು ಆಡಲಿದ್ದಾರೆ. ಶಿಷ್ಯವೃಂದವು ಹೆಚ್ಚಿನ ಸಂಖ್ಯೆಯಲ್ಲಿ ಉಮೇಶ ಭಟ್ಟರ ಅಭಿಮಾನಿಗಳು ಮತ್ತು ಕಲಾಭಿಮಾನಿಗಳ ಆಗಮನವನ್ನು ನಿರೀಕ್ಷಿಸುತ್ತಿದ್ದಾರೆ.