ಸಿದ್ದಾಪುರ: ರಸ್ತೆ ಸ್ಥಿತಿ ಸಂಪೂರ್ಣ ಹದಗೆಟ್ಟು ವಾಹನ ಸವಾರರು ಪಡುತ್ತಿರುವ ಪರಿಪಾಟಲು ನೋಡಲಾಗದೇ ಗ್ರಾಮಸ್ಥರೇ ಹೊಂಡ ತುಂಬಿದ ಘಟನೆ ತಾಲೂಕಿನ ಶಿರಸಿ ಗೋಳಿಮಕ್ಕಿ ರಸ್ತೆಯ ನೇರ್ಲವಳ್ಳಿ ಬಳಿ ನಡೆಯಿತು.
ಇಲ್ಲಿಯ ಹೆಬ್ಬಲಸು ಕ್ರಾಸ್ ನಿಂದ ನೇರ್ಲವಳ್ಳಿವರೆಗೆ ಬೃಹದಾಕಾರದ ಹೊಂಡಗಳು ಬಿದ್ದಿದ್ದವು. ಈ ಮಾರ್ಗದಲ್ಲಿ ವಾಹನ ದಟ್ಟಣೆಯೂ ಜಾಸ್ತಿ ಇದೆ. ಲೋಕೋಪಯೋಗಿ ಇಲಾಖೆಯ ದಿವ್ಯ ನಿರ್ಲಕ್ಷ್ಯದಲ್ಲಿರುವ ಈ ಮಾರ್ಗ ಇನ್ನೂ ಒಂದು ವಾಹನ ಮಾತ್ರ ಸಾಗುವ ಸ್ಥಿತಿಯಲ್ಲಿದೆ. ಹೆಬ್ಬಲಸು ಕ್ರಾಸ್ ನಿಂದ ನೇರ್ಲವಳ್ಳಿವರೆಗಿನ ರಸ್ತೆ ಹೊಂಡಕ್ಕೆ ಸಿಕ್ಕು ಈಗಾಗಲೇ ಹಲವು ಬೈಕ್ ಸವಾರರು ಬಿದ್ದು ಗಾಯವನ್ನೂ ಮಾಡಿಕೊಂಡಿದ್ದಾರೆ.
ಗ್ರಾಮದ ವ್ಯಾಪ್ತಿಯಲ್ಲಿ ಆಗುತ್ತಿರುವ ಅವಘಡಗಳಿಂದ ಬೇಸತ್ತ ಸ್ಥಳೀಯ ಹತ್ತಕ್ಕೂ ಅಧಿಕ ಗ್ರಾಮಸ್ಥರು ಮಂಗಳವಾರ ತಮ್ಮ ತಮ್ಮ ಮನೆಗಳಿಂದಲೇ ಗುದ್ದಲಿ, ಬುಟ್ಟಿಗಳನ್ನು ತಂದು ಹೊಂಡಗಳನ್ನು ಮುಚ್ಚಿದ್ದಾರೆ. ಗ್ರಾಮಸ್ಥರ ಈ ಯತ್ನಕ್ಕೆ ಪ್ರಯಾಣಿಕರು ಶ್ಲಾಘನೆ ವ್ಯಕ್ತಪಡಿಸಿದ್ದಾರಲ್ಲದೇ, ಲೋಕೋಪಯೋಗಿ ಇಲಾಖೆ ಇನ್ನಾದರೂ ಎಚ್ಚೆತ್ತುಕೊಂಡು ವಾಹನ ಜಾಸ್ತಿ ಓಡಾಡುವ ಈ ರಸ್ತೆಯನ್ನು ಸರಿಪಡಿಸಬೇಕು ಎಂದು ಆಗ್ರಹಿಸಿದ್ದಾರೆ.