ಕುಮಟಾ: ಹವ್ಯಕ ಸಮಾಜವು ಕ್ರಮಿಸುವ ದಾರಿ ಬಹಳಷ್ಟಿದೆ. ಹಾಗೆಯೇ ಸಂಘದ ಮೇಲೆ ಜವಬ್ದಾರಿಯೂ ಇದೆ. ಅದನ್ನು ಸಾಧಿಸುವುದರ ಮೂಲಕ ಕ್ರಮಿಸಬೇಕು. ಮಾನವೀಯ ಮೌಲ್ಯಗಳನ್ನು ಸಂಘಟನೆಗಳ ಮೂಲಕ ಪ್ರಚುರಪಡಿಸಬೇಕು ಎಂದು ರಾಮಚಂದ್ರಾಪುರ ಮಠದ ವಿದ್ಯಾ ವಿಭಾಗದ ಕಾರ್ಯದರ್ಶಿ ಪ್ರಮೋದ ಪಂಡಿತ ಹೇಳಿದರು.
ಅವರು ಪಟ್ಟಣದ ನಾದಶ್ರೀ ಕಲಾ ಕೇಂದ್ರದಲ್ಲಿ ಕುಮಟಾ ಹವ್ಯಕ ಸೇವಾ ಪ್ರತಿಷ್ಠಾನ ಹಮ್ಮಿಕೊಂಡ ಸಾಧಕರಿಗೆ ಸನ್ಮಾನ ಹಾಗೂ ಎಚ್.ಎಫ್.ಎಂ. ಖ್ಯಾತಿಯ ಬಾಳೇಸರ ವಿನಾಯಕ ಬೆಂಗಳೂರು ಇವರಿಂದ ಹಾಸ್ಯ ಸಂಜೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಪ್ರತಿಯೊಬ್ಬರು ಒಂದೊಂದು ದಾರಿಯಲ್ಲಿ ಹೆಜ್ಜೆ ಇಡುತ್ತ ಹೋಗುತ್ತಾರೆ. ನಮ್ಮ ದಾರಿ ಸಮಾಜಕ್ಕೆ ಎಷ್ಟು ಅನುಕೂಲವಾಗುತ್ತದೆ ಎಂಬುದನ್ನು ಮೊದಲು ತಿಳಿದುಕೊಳ್ಳಬೇಕು. ಅಪ್ಪ ಕಂಡ ಕನಸನ್ನು ಮಗನು ಸಾಧಿಸಲು ಸಾಧ್ಯವಿಲ್ಲ. ಮಗನ ಕನಸನ್ನು ಸಾಧಿಸಲು ಅವನಿಗೆ ಪಾಲಕರು ಅನುಕೂಲ ಮಾಡಿಕೊಡಬೇಕು.ಅವನು ಕಂಡ ಕನಸಿನ ದಾರಿಯಲ್ಲಿ ಸಾಗಿದರೆ ಅವನು ಖಂಡಿತವಾಗಿಯೂ ಸಾಧನೆ ಮಾಡುತ್ತಾರೆ. ಸಾಧನೆ ಶಿಖರವನ್ನು ಹತ್ತಿ ನಿಂತಾಗ ವಿನಯವನ್ನು ಬಿಡಬಾರದು. ಸಾಧನೆ ಆಕಸ್ಮಿಕವಲ್ಲ. ಅದು ಪರಿಶ್ರಮದ ಫಲ ಎಂದರು.
ಸನ್ಮಾನ ಸ್ವೀಕರಿಸಿದ ಕರ್ನಾಟಕ ರಾಜ್ಯ ಸರಕಾರಿ ನೌಕರರ ಸಂಘದ ತಾಲೂಕಾಧ್ಯಕ್ಷ ರವೀಂದ್ರ ಭಟ್ಟ ಸೂರಿ ಮಾತನಾಡಿ, ಜೀವನದಲ್ಲಿ ಸಂತೋಷದ ಕ್ಷಣದ ತುಂಬಾ ಸಿಗುತ್ತದೆ. ಆದರೆ ಎಲ್ಲ ಕ್ಷಣಗಳು ಸಂತೋಷ ನೀಡುವುದಿಲ್ಲ. ಸಾಧನೆ ಇಷ್ಟ ಪಟ್ಟರೆ ಸಿಗುವಂತದ್ದಲ್ಲ. ಕಷ್ಟ ಪಟ್ಟರೆ ಮಾತ್ರ ಸಿಗುವಂತದ್ದಾಗಿದೆ. ಇಷ್ಟ ಪಟ್ಟ ಮಾಡುವ ಕೆಲಸ ಸಾಧನೆ ಹಾದಿಯಲ್ಲಿ ಕಳುಹಿಸುತ್ತದೆ ಎಂಬುದರಲ್ಲಿ ಯಾವುದೇ ಸಂಶಯವಿಲ್ಲ ಎಂದ ಅವರು, ಗುರುವಿನ ಅನುಗ್ರಹವಿದ್ದರೆ ಮನಸ್ಸಿನಲ್ಲಿರುವ ಪ್ರತಿಭೆಗಳು ತಾನಾಗಿಯೇ ಹೊರಹೊಮ್ಮುತ್ತದೆ. ಹವ್ಯಕ ಸಮಾಜದಲ್ಲಿರುವ ಪ್ರತಿಭೆಗೆ ಸೂಕ್ತ ವೇದಿಕೆ ಸಿಗುವುದರ ಮೂಲಕ ತಮ್ಮಲ್ಲಿರುವ ಪ್ರತಿಭೆಯನ್ನು ಸಮಾಜಕ್ಕೆ ತಿಳಿಸಬೇಕಿದೆ. ಮನಸ್ಸಿನ ಭಾವನೆಯನ್ನು ಅಕ್ಷರ ರೂಪದಲ್ಲಿ ನೀಡಿದ್ದು ಅದು ಕಾವ್ಯವಾಗಿ ಹೊರಹೊಮ್ಮಿದೆ. ಒಬ್ಬ ವ್ಯಕ್ತಿಗೆ ತಮ್ಮವರು ಸನ್ಮಾನಿಸಿದರೆ ಅದಕ್ಕಿಂತ ಸಂತೋಷ ಮತ್ತೊಂದಿಲ್ಲ ಎಂದರು.
ಸಮಾಜದಲ್ಲಿರುವ ಕಷ್ಟಗಳಿಗೆ ಸದಾ ಸಂಘವು ಬೆನ್ನುಲುಬಾಗಿ ನಿಲ್ಲುತ್ತದೆ. ಸಂಘಟನೆ ಹೇಗಿರಬೇಕು ಎಂಬುದನ್ನು ಹೆಗಡೆಯ ಗೋಪಾಲಕೃಷ್ಣ ಹೆಗಡೆ ಹವ್ಯಕ ಸಮಾಜಕ್ಕೆ ಮಾದರಿಯಾಗಿದ್ದಾರೆ. ಹವ್ಯಕ ಸಮಾಜದಲ್ಲಿರುವ ಜ್ವಲಂತ ಸಮಸ್ಯೆನ್ನು ನಿವಾರಣೆ ಮಾಡಲು ಈ ಸಂಘಟನೆ ಹುಟ್ಟಿಕೊಂಡಿದ್ದು ಅದೇ ರೀತಿಯಲ್ಲಿ ಕೆಲಸ ನಿರ್ವಹಿಸುತ್ತದೆ. ಹವ್ಯಕ ಸಮಾಜ ಬಿಂದುವಾಗದೇ ಸಿಂಧುವಾಗುವುದರ ಮೂಲಕ ಸಮಾಜದ ಬೆಳವಣಿಗೆಗೆ ಪ್ರತಿಯೊಬ್ಬರರು ಕೈಜೋಡಿಸಬೇಕು ಎಂದರು.
ಹೆಗಡೆಯ ಸಂಸ್ಕ್ರತ ಅಕಾಡೆಮಿಯ ನಿರ್ದೇಶಕ ಗೋಪಾಲಕೃಷ್ಣ ಹೆಗಡೆ ಸನ್ಮಾನ ಸ್ವೀಕರಿಸಿ ಮಾತನಾಡಿ, ಹವ್ಯಕ ಸಮಾಜದ ಆಚಾರ ವಿಚಾಗಳು ನಶಿಸುತ್ತಿವೆ.ಅದಾಗದಂತೆ ತಡೆಯುವಶಕ್ತಿ ಇಂತಹ ಸಂಘಟನೆಗಳಿಗಿದೆ ಎಂದರು.ಹವ್ಯಕರ ಇತಿಹಾಸವನ್ನು ಮತ್ತು ವಿಶೇಷಗಳನ್ನು ಸಭೆಗೆ ತಿಳಿಯಪಡಿಸಿದರು.
ಇನ್ನೊಬ್ಬ ಅತಿಥಿ ಕೆಕ್ಕಾರು ರಘೋತ್ತಮ ಮಠದ ನಿರ್ವಹಣಾ ಸಮಿತಿ ಅಧ್ಯಕ್ಷ ಎಂ ಕೆ ಹೆಗಡೆ ಮಾತನಾಡಿದರು. ಮಂಜುನಾಥ ಭಟ್ಟ ಸ್ವರ್ಣಗದ್ದೆ ಮಾತನಾಡಿ, ಸಾಧಕರು ಸಾಧನೆಗೆ ತೊಡಗಲು ಇರುವ ಗುಣ ತನ್ನ ಸಾಧನೆಯ ಉದ್ದೇಶದಲ್ಲಿ ತೊಡಗುವದು ಮುಖ್ಯವಾಗುತ್ತದೆ ಎಂದರು.
ಅಧ್ಯಕ್ಷತೆವಹಿಸಿದ್ದ ಹವ್ಯಕ ಸೇವಾ ಪ್ರತಿಷ್ಠಾನದ ಅಧ್ಯಕ್ಷ ಎಂ.ಜಿ.ಭಟ್ಟ ಮಾತನಾಡಿ,ಹವ್ಯಕ ಅಭಿವದೃದ್ಧಿ ಸಂಘ ತನ್ನ ಉನ್ನತ ಧ್ಯೇಯೋದ್ದೇಶಗಳೊಂದಿಗೆ ಮುಂದೆ ಇನ್ನಷ್ಟು ಸಾಮಾಜಿಕ ಚಟುವಟಿಕೆಗಳಲ್ಲಿ ತೊಡಗುತ್ತದೆ.ಇದಕ್ಕೆ ಎಲ್ಲರ ಸಹಕಾರ ಬೇಕು. ಸಂಘಟನೆಯೆಂದರೆ ಅದು ಸಹಕಾರದಿಂದ ನಡೆಯುವಂಥದ್ದು ಎಂದರು.
ಹವ್ಯಕ ಮಹಾಸಭೆಯ ನಿರ್ದೇಶಕ ಸುಬ್ರಾಯ ಭಟ್ಟ ಮಾತನಾಡಿ, ಸಮಾಜಕ್ಕೆ ಒಳ್ಳೆಯದನ್ನು ನೀಡಬೇಕು ಎಂಬ ಉದ್ದೇಶಕ್ಕೆ ಹುಟ್ಟಿಕೊಂಡ ಸಂಸ್ಥೆ ಇದಾಗಿದೆ. ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚಿನ ಕಾರ್ಯ ಮಾಡಲಿ ಎಂದು ಶುಭ ಹಾರೈಸಿದರು.
ಪತ್ರಕರ್ತ ಪ್ರವೀಣ ಹೆಗಡೆ ಸ್ವಾಗತಿಸಿ ಸಂಘದ ಧ್ಯೇಯೋದ್ದೇಶಗಳನ್ನು ವಿವರಿಸಿದರು. ಜಯದೇವ ಬಳಗಂಡಿ ಪ್ರಾರ್ಥಿಸಿದರು. ಶಿಕ್ಷಕ ಗಣೇಶ ಜೋಶಿ ನಿರೂಪಿಸಿದರು. ಹವ್ಯಕ ಸೇವಾ ಪ್ರತಿಷ್ಠಾನದ ಪ್ರಮುಖ ಎಂ.ಎನ್.ಭಟ್ಟ ವಂದಿಸಿದರು.