ಕಾರವಾರ : ಕಳೆದ ಮೂರು ವರ್ಷದಿಂದ ಸಾಕಿ ಸಲುಹಿದ್ದ ಕೋತಿ ಮರಿಯೊಂದು ಅನಾರೋಗ್ಯದಿಂದಾಗಿ ಮೃತಪಟ್ಟಿದ್ದಕ್ಕೆ ಮಕ್ಕಳು, ಮನೆ ಮಂದಿ ಹಾಗೂ ಗ್ರಾಮಸ್ತರು ಕಣ್ಣೀರ ವಿದಾಯ ಹೇಳಿದ ಹಾಗೂ ಮನೆಯ ಸದಸ್ಯನನ್ನೆ ಕಳೆದುಕೊಂಡಂತೆ ಊಟ ತಿಂಡಿ ಬಿಟ್ಟು ದುಖಿಃಸಿದ ಮರಳಿ ಬಾ ಎಂದು ಭಾವುಕರಾಗಿ ಕರೆದ ಮನಕಲಕುವ ಘಟನೆ ವರದಿಯಾಗಿದೆ.
ದಾಂಡೇಲಿ ಪಟ್ಟಣದ ಕಂಜರಪೇಟೆ ಗಲ್ಲಿಯ ರೆಹೋನೆತ್ ಎನ್ನುವವರ ಮನೆಯಲ್ಲಿ ಕೋತಿ ಮರಿಯೂ ವಾಸವಿರುತ್ತಿತ್ತು. ಕೋತಿಗೆ ರಾಮು ಎಂದು ಹೆಸರನ್ನೂ ಕೂಡ ಇಡಲಾಗಿತ್ತು. ಕಂಜರಪೇಟೆ ಗಲ್ಲಿಯಲ್ಲಿ ಓಡಾಡಿಕೊಂಡು, ಗ್ರಾಮಸ್ಥರೊಂದಿಗೆ ಅನ್ಯೋನ್ಯತೆಯಿಂದಿದ್ದ ರಾಮು, ಎಲ್ಲರ ಪ್ರೀತಿಗೆ ಪಾತ್ರನಾಗಿದ್ದ. ಅಲ್ಲದೆ ರಾಮುವುನನ್ನು ಕಂಡರೇ ಊರಿನ ಮಕ್ಕಳಿಗೂ ಗ್ರಾಮಸ್ಥರಿಗೂ ಅಷ್ಟೇ ಪ್ರೀತಿ ಕೂಡ ಇತ್ತು. ರಾಮುವಿನನ್ನು ನೋಡುವುದಕ್ಕಾಗಿಯೇ ಊರಿನಜನರು ಆಗಾಗ ಬಂದು ಹೋಗುವಷ್ಟು ಅನ್ಯೋನ್ಯತೆ ಸೃಷ್ಟಿಸಿಕೊಂಡಿದ್ದ.
ಆದರೆ ಕಳೆದೆರಡು ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದ ರಾಮುಗೆ ಸ್ಥಳೀಯ ಪಶು ಆಸ್ಪತ್ರೆಗೆ ಕರೆದೊಯ್ದು ಚಿಕಿತ್ಸೆ ನೀಡಲಾಗಿತ್ತು. ವೈದ್ಯರು ಹೆಚ್ಚಿನ ಚಿಕಿತ್ಸೆಗೆ ಹುಬ್ಬಳ್ಳಿಗೆ ಕರೆದೊಯ್ಯಲು ಶಿಫಾರಸು ಮಾಡಿದ್ದರು. ಅದರಂತೆ ಹುಬ್ಬಳ್ಳಿಗೆ ತೆರಳುವ ಮಾರ್ಗಮಧ್ಯದಲ್ಲಿ ಕೋತಿ ಮರಿ ಕೊನೆಯುಸಿರೆಳೆದಿದ್ದು, ಕೋತಿ ರಾಮುವಿನ ಮೃತದೇಹವನ್ನು ಪುನಃ ಮನೆಗೆ ತಂದಾಗ ಎಲ್ಲರೂ ಕಣ್ಣೀರು ಸುರಿಸಿದ್ದಾರೆ. ಬಳಿಕ ಕೋತಿಯ ಶವಕ್ಕೆ ಹೂ, ಊದಿನಕಡ್ಡಿ ಪೂಜೆ ಮಾಡಿ ಮನೆ ಮಂದಿ, ಗ್ರಾಮಸ್ಥರು ಸೇರಿ ಭಾವುಕ ವಿದಾಯ ಹೇಳಿದ್ದಾರೆ. ಧಾರ್ಮಿಕ ವಿಧಿವಿಧಾನಗಳಂತೆ ಕೋತಿಯ ಅಂತ್ಯಸಂಸ್ಕಾರ ನಡೆಸಲಾಗಿದ್ದು, ಈ ವೇಳೆ ಮಕ್ಕಳು, ಮಹಿಳೆಯರು, ಹಿರಿಯರೆನ್ನದೆ ಎಲ್ಲರೂ ಕಣ್ಣೀರು ಹಾಕಿರುವುದು ಕಂಡುಬಂತ್ತು.