ಕುಮಟಾ: ಗೋಕರ್ಣ ಪರ್ತಗಾಳಿ ಜೀವೋತ್ತಮ ಮಠಾಧೀಶ ಶ್ರೀ ವಿದ್ಯಾಧೀಶ ತೀರ್ಥ ಶ್ರೀಪಾದ ವಡೇರ್ ಸ್ವಾಮೀಗಳ ಚಾತುರ್ಮಾಸ್ಯ ಕುಮಟಾದಲ್ಲಿ ಯಶಸ್ವಿಯಾದ ಹಿನ್ನಲೆಯಲ್ಲಿ ಅ.16ರ ಸಂಜೆ 4.30ಕ್ಕೆ ಶ್ರೀಗಳ ದಿಗ್ವಿಜಯೋತ್ಸವ ಮೆರವಣಿಗೆ ನಡೆಯಲಿದೆ ಎಂದು ಚಾತುರ್ಮಾಸ್ಯ ವೃತ ಸಮಿತಿ ಅಧ್ಯಕ್ಷ ಗೋಪಾಲ ಕಿಣಿ ತಿಳಿಸಿದರು. ಪಟ್ಟಣದ ಶ್ರೀ ಶಾಂತೇರಿ ಕಾಮಾಕ್ಷಿ ಲಕ್ಷ್ಮಿನಾರಾಯಣ ದೇವಸ್ಥಾನದಲ್ಲಿ ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಮ್ಮ ದೇವಸ್ಥಾನದಲ್ಲಿ ಶ್ರೀ ವಿದ್ಯಾಧೀಶ ತೀರ್ಥ ಶ್ರೀಪಾದ ವಡೇರ್ ಸ್ವಾಮೀಗಳ ನೂರು ದಿನಗಳ ಚಾತುರ್ಮಾಸ್ಯ ವೃತ ಯಶಸ್ವಿಗೊಂಡಿದೆ. ಹಾಗೂ ಅ.16 ರಂದು ಶ್ರೀಗಳ ಜನ್ಮ ದಿನ ಕೂಡ ಇರುವುದರಿಂದ ಅದೇ ದಿನ ಕುಮಟಾ ಪಟ್ಟಣದಲ್ಲಿ ಶ್ರೀಗಳ ದಿವ್ಯ ಉಪಸ್ಥಿತಿಯಲ್ಲಿ ದಿಗ್ವಿಜಯೋತ್ಸವ ಮೆರವಣಿಗೆ ನಡೆಯಲಿದೆ. ಅಂದು ಸಾಯಂಕಾಲ 4.30 ಗಂಟೆಗೆ ಶ್ರೀಗಳು ದೇವಸ್ಥಾನದ ಮಹಾದ್ವಾರಕ್ಕೆ ಆಗಮಿಸುತ್ತಿದ್ದಂತೆ ಗಜರಾಜನಿಂದ ಗಂಟೆ ಮತ್ತು ಚಾಮರದ ಸೇವೆಯೊಂದಿಗೆ ಸ್ವಾಗತ ನಡೆಯಲಿದೆ ಎಂದು ತಿಳಿಸಿದರು.
ವೃಂದಾವನಸ್ಥ ಶ್ರೀ ವಿದ್ಯಾಧಿರಾಜ ತೀರ್ಥ ಸ್ವಾಮೀಗಳ ಪ್ರತಿಮೆಗೆ ಮಾಲಾರ್ಪಣೆಯ ಬಳಿಕ ಗಜರಾಜನಿಂದ ಶ್ರೀಗಳಿಗೆ ಮಾಲಾರ್ಪಣೆ ನಡೆಯಲಿದೆ. ಪುಷ್ಪಾಲಂಕೃತ ರಥದಲ್ಲಿ ಶ್ರೀಗಳನ್ನು ವಿರಾಜಮಾನರಾಗಿಸಿ, ವಿಜಯೋತ್ಸವ ಮೆರವಣಿಗೆಯನ್ನು ಆರಂಭಿಸಲಾಗುವುದು. ಮೆರವಣಿಗೆಯು ದೇವಸ್ಥಾನದಿಂದ ಮೂರುಕಟ್ಟೆ ಕ್ರಾಸ್, ಬಸ್ತಿಪೇಟೆ ಕ್ರಾಸ್, ಮಾಸ್ತಿಕಟ್ಟೆ ಸರ್ಕಲ್, ಮಣಕಿ ಮೈದಾನ, ಗಿಬ್ ಸರ್ಕಲ್ ಮಾರ್ಗವಾಗಿ ಸುಭಾಸ್ ರೋಡ್ ಮೂಲಕ ಶ್ರೀ ಶಾಂತೇರಿ ಕಾಮಾಕ್ಷಿ ದೇವಸ್ಥಾನದಲ್ಲಿ ಸಮಾವೇಶಗೊಳ್ಳಲಿದೆ. ಮೆರವಣಿಗೆಯಲ್ಲಿ ಪಾಲ್ಗೊಳ್ಳುವ ಭಕ್ತರ ಧಣಿವಾರಿಸಲು ಬಸ್ತಿಪೇಟೆ ಕ್ರಾಸ್, ಮಾಸ್ತಿಕಟ್ಟೆ, ಮಹಾಲಕ್ಷ್ಮಿ ಕಂಫರ್ಟ್ ಮತ್ತು ಬೆಣ್ಣೆ ಕಾಂಪ್ಲೆಕ್ಸ್ನಲ್ಲಿ ತಂಪು ಪಾನೀಯ ಸೇರಿದಂತೆ ಚಹಾ-ತಿಂಡಿ ವ್ಯವಸ್ಥೆ ಮಾಡಲಾಗಿದೆ. ಮಣಕಿ ಮೈದಾನದಲ್ಲಿ ಅರ್ಧ ಗಂಟೆಗಳ ಸಿಡಿಮದ್ದು ಪ್ರದರ್ಶನ ಮತ್ತು ಲೇಸರ್ ಶೋ ನಡೆಯಲಿದೆ. ಮೆರವಣಿಗೆಯಲ್ಲಿ ವಿವಿಧ ಕಲಾ ತಂಡಗಳು, 54 ಸ್ತಬ್ಧ ಚಿತ್ರಗಳ ಪ್ರದರ್ಶನ ಗಮನ ಸೆಳೆಯಲಿದೆ. ಎಲ್ಲ ಸಮಾಜದವರು ಈ ಮೆರವಣಿಗೆಯಲ್ಲಿ ಪಾಲ್ಗೊಂಡು ಶ್ರೀಗಳ ದಿಗ್ವಿಜಯೋತ್ಸವವನ್ನು ಯಶಸ್ವಿಗೊಳಿಸುವಂತೆ ವಿನಂತಿಸಿದರು.
ಸುದ್ದಿಗೋಷ್ಠಿಯಲ್ಲಿ ಶ್ರೀ ಶಾಂತೇರಿ ಕಾಮಾಕ್ಷಿ ದೇವಸ್ಥಾನ ಅಧ್ಯಕ್ಷ ಶೇಷಗಿರಿ ಶಾನಭಾಗ, ಚಾತುರ್ಮಾಸ್ಯ ವೃತ ಸಮಿತಿಯ ಪ್ರಮುಖರಾದ ಅನಂತ ಶಾನಭಾಗ, ಅರವಿಂದ ಗೋಳಿ, ಅಜೀತ್ ಭಟ್, ಭಗೀರಥ ಪೈ, ರಾಮಕೃಷ್ಣ ಗೋಳಿ, ತ್ರಿವಿಕ್ರಮ ಶಾನಭಾಗ, ಗಜಾನನ ಕಿಣಿ, ರಾಧಾಕೃಷ್ಣ ಪೈ ಇತರರು ಇದ್ದರು.