ಹೊನ್ನಾವರ : ಕರ್ನಾಟಕದ ಯಕ್ಷಗಾನ ಅಕಾಡೆಮಿಯು ಕೊಡಮಾಡುವ ಪ್ರತಿಷ್ಠಿತ ಗೌರವ ಪ್ರಶಸ್ತಿಗೆ ಭಾಜನರಾದ ಯಕ್ಷಗಾನದ ಬಡಗುತಿಟ್ಟಿನ ಹಿರಿಯ ಭಾಗವತ ಮತ್ತು ಕಲಾಗುರು ಶ್ರೀ ಉಮೇಶ ಭಟ್ಟ ಬಾಡ ಇವರಿಗೆ ಹಳದೀಪುರದ ಗೋಪೀನಾಥ ಸಭಾಭವನದಲ್ಲಿ ಅವರ ಶಿಷ್ಯರು ಗುರುವಂದನೆ ಹಾಗೂ ಅಭಿನಂದನಾ ಕಾರ್ಯಕ್ರಮವನ್ನು ಹಮ್ಮಿಕೊಂಡಿತ್ತು.
ಶಿಷ್ಯರಿಂದ ಗುರುವಂದನೆ ಸ್ವೀಕರಿಸಿ ಮಾತನಾಡಿದ ಉಮೇಶ ಭಟ್ಟ ಬಾಡ ಅವರು ತಮ್ಮ ಹಳೆಯ ನೆನಪುಗಳನ್ನು ಮೆಲುಕು ಹಾಕುತ್ತಾ, ಪ್ರಸಿದ್ಧ ಭಾಗವತರಾದ ರಾಘವೇಂದ್ರ ಮಯ್ಯಾ ಅವರ ಜೊತೆಗೆ ದ್ವಂದ್ವದಲ್ಲಿ ಹಾಡುತ್ತಿದ್ದ ಹಳೆಯ ಹಾಡನ್ನು ಹಾಡಿ ಕೇಳುಗರ ಮನ ತಂಪಾಗಿಸಿದರು. ಹಿಂದಿನ ಕಾಲದಲ್ಲಿ ಯಕ್ಷಗಾನದ ಕಲಿಕೆ ಹಾಗೂ ಯಕ್ಷಗಾನವನ್ನು ಉಳಿಸಿ ಬೆಳೆಸುವ ಪ್ರಯತ್ನವಾಗಿ ತಾನು ತರಗತಿಗಳನ್ನು ಪ್ರಾರಂಭಿಸಿದ ಬಗ್ಗೆ ಮಾತನಾಡಿದ ಅವರು, ಶಿಷ್ಯರಿಂದ ಪಡೆದ ಈ ಪ್ರೀತಿಯ ಗೌರವವನ್ನು ಮನದುಂಬಿ ಸ್ವೀಕರಿಸುವುದಾಗಿ ತಿಳಿಸಿದರು. ಹೆಣ್ಣು ಮಕ್ಕಳಿಗೆ ಯಕ್ಷಗಾನವನ್ನು ಕಲಿಸುವ ಸಂದರ್ಭದಲ್ಲಿ ಅನೇಕ ಸಮಸ್ಯೆಗಳು ಎದುರಾಗಿತ್ತು. ಅಂತಹ ಪ್ರತಿರೋಧವನ್ನು ಸಮರ್ಥವಾಗಿ ಎದುರಿಸಿ, ಯಕ್ಷಗಾನ ಕಲೆಯನ್ನು ಉಳಿಸಲು ಪ್ರಾಮಾಣಿಕ ಪ್ರಯತ್ನ ಮಾಡಿದ್ದಾಗಿ ಅವರು ತಿಳಿಸಿದರು.
ಈ ಗುರುವಂದನಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಹಂಗಾರಕಟ್ಟೆ ಕಲಾಕೇಂದ್ರದ ಕಾರ್ಯದರ್ಶಿ ರಾಜಶೇಖರ ಹೆಬ್ಬಾರ್ ವಹಿಸಿದ್ದರು. ಕಲಾಕೇಂದ್ರದ ಪರವಾಗಿ ಯಕ್ಷಗಾನ ಗುರುಗಳಿಗೆ ಗೌರವ ಸಲ್ಲಿಸಿದ ಅವರು ನಮ್ಮ ಕಲಾಕೇಂದ್ರದ ಹಿರಿಯ ಶಿಷ್ಯ ಉಮೇಶ ಭಟ್ಟ ಬಾಡ ಅತ್ಯುತ್ತಮ ಭಾಗವತರು ಹಾಗೂ ಯಕ್ಷಗಾನ ಕಲಾವಿದರಾಗಿ ಹೊರಹೊಮ್ಮಿದ ಬಗ್ಗೆ ಸಂತಸ ವ್ಯಕ್ತಪಡಿಸಿದವರು. ಇಂತಹ ಶಿಷ್ಯರನ್ನು ಪಡೆದ ಕಲಕೇಂದ್ರ ಹೆಮ್ಮೆ ಪಡುವಂತಾಗಿದೆ. ಸಾಧನೆ ಹೀಗೆ ಮುಂದುವರೆಯಲಿ ಎಂದು ಸಂತಸ ಹಂಚಿಕೊಂಡರು.
ಬಡಗುತಿಟ್ಟಿನ ಜನಪ್ರಿಯ ಭಾಗವತ ರಾಘವೇಂದ್ರ ಮಯ್ಯ ಉಮೇಶ ಭಟ್ಟ ಬಾಡ ಹಾಗೂ ತಾವು ಜೊತೆಯಾಗಿ ಹಾಡುತ್ತಿದ್ದ ಆ ದಿನಗಳ ಹಾಡುಗಳನ್ನು ಮೆಲುಕುಹಾಕಿದ ಅವರು ಎಲ್ಲ ಸನ್ಮಾನಗಳಿಗಿಂತ ಶಿಷ್ಯರು ಕೊಡುವ ಆ ಪ್ರೀತಿಯ ಸನ್ಮಾನ ಎಲ್ಲ ಗುರುಗಳಿಗೂ ಹೆಚ್ಚು ಎಂದು ಅಭಿಪ್ರಾಯಪಟ್ಟರು.
ಮುಖ್ಯ ಅತಿಥಿಗಳಾಗಿ ಹಿರಿಯ ಪತ್ರಕರ್ತ ಜಿ.ಯು.ಭಟ್ ಹೊನ್ನಾವರ ಮಾತನಾಡಿ ಯಕ್ಷಗುರು ಉಮೇಶ ಭಟ್ಟ ಬಾಡರ ಅವರು ಜನರನ್ನು ಹಾಗೂ ಶಿಷ್ಯರನ್ನು ಪ್ರೀತಿಯಿಂದ ಕಂಡವರು. ಯಕ್ಷಗಾನವನ್ನು ಕಲಿಯಬೇಕೆಂಬ ಮನಸ್ಸು ನನ್ನಲ್ಲಿ ಇದ್ದರೂ ಆ ಸಮಯದಲ್ಲಿ ಕಲಿಯಲು ಸಾಧ್ಯವಾಗಲಿಲ್ಲ ಉಮೇಶ ಭಟ್ಟರಂತಹ ಗುರುಗಳು ಇದ್ದರೆ ನಾನು ಯಕ್ಷಗಾನ ಕರೆಯುತ್ತಿದ್ದೆ ಎಂದು ಅಭಿಪ್ರಾಯಪಟ್ಟರು.
ಸಂಶೋಧಕ ಡಾ.ಎಸ್.ಡಿ ಹೆಗಡೆ ಹೊನ್ನಾವರ ಮಾತನ್ನಾಡಿ ಯಕ್ಷಗಾನ ವ್ಯಾಪಾರಿಕರಣವಾಗುತ್ತಿದೆ ಎಂಬ ಮಾತುಗಳು ಕೇಳಿ ಬರುತ್ತಿದೆ. ಆದರೆ ನಿಜವಾಗಿ ಯಕ್ಷಗಾನ ಆರಾಧನಾ ಕಲೆ. ಯಕ್ಷಗಾನವನ್ನು ವಿರೂಪ ಗೊಳಿಸಿದಾಗ ಪ್ರೇಕ್ಷಕರು ಅದನ್ನು ವಿರೋಧಿಸಬೇಕು ಹಾಗಾದಾಗ ಮಾತ್ರ ಯಕ್ಷಗಾನದಲ್ಲಿ ಆ ನೈಜತೆ ಉಳಿಯಲು ಸಾಧ್ಯ ಎಂದು ಅಭಿಪ್ರಾಯಪಟ್ಟರು. ವಕೀಲ ಎಂ.ಐ ಹೆಗಡೆ, ಪ್ರಾಚಾರ್ಯ ನಾರಣಪ್ಪ ಉಪ್ಪೂರರ ಪುತ್ರ ದಿನೇಶ ಉಪ್ಪೂರ್ ಗುರುವಂದನೆ ಸಲ್ಲಿಸಿದರು.
ಹೊನ್ನಾವರದ ಸೇಫ್ ಸ್ಟಾರ್ ಸೌಹಾರ್ದ ಸಹಕಾರೀ ಸಂಸ್ಥೆಯ ವರಿಷ್ಠ ಜಿ.ಜಿ.ಶಂಕರ್, ಹಳದೀಪುರ ಪಂಚಾಯತದ ಅಧ್ಯಕ್ಷ ಅಜಿತ್ ನಾಯ್ಕ್, ನ್ಯಾಯವಾದಿಗಳಾದ ವಿ.ಎಂ.ಭಂಡಾರಿ, ಯಕ್ಷರಕ್ಷೆಯ ಡಾ. ಐ ಆರ್ ಭಟ್ಟ ಮೊದಲಾದ ಗಣ್ಯರು ಶುಭಾಶಯ ಕೋರಿದರು.
ಕಡತೋಕಾ ಗೋಪಾಲಕೃಷ್ಣ ಭಾಗವತರು ಉಮೇಶ ಭಟ್ಟರ ಕುರಿತು ಅಭಿನಂದನಾ ನುಡಿಗಳನ್ನು ಆಡಲಿದ್ದಾರೆ. ನಿವೃತ್ತ ಉಪನ್ಯಾಸಕರು ಹಾಗೂ ಯಕ್ಷಗಾನ ಕಲಾವಿದರಾದ ಎಂ ಆರ್ ನಾಯಕ ಸರ್ವರನ್ನೂ ಸ್ವಾಗತಿಸಿ, ಪ್ರಸ್ತಾವಿಕ ನುಡಿಗಳನ್ನು ಆಡಿದರು. ಉಮೇಶ ಭಟ್ಟ ಬಾಡ ಅವರ ಶಿಷ್ಯ ರಾಜು ಮಾಸ್ತರ್, ಕೃಷ್ಣಾನಂದ ಭಟ್ಟ ಇಂತಹ ಗುರುಗಳನ್ನು ಪಡೆದ ನಾವು ಧನ್ಯರು ಎಂದು ಅಭಿಪ್ರಾಯಪಟ್ಟರು, ಕು. ಹರ್ಷಿತಾ ಸನ್ಮಾನ ಪತ್ರ ವಾಚಿಸಿದರು. ಆರ್.ಎನ್. ಹೆಗಡೆ ಸರ್ವರನ್ನೂ ವಂದಿಸಿದರು. ಸೀಮಾ ಹೆಗಡೆ ಹಾಗೂ ಗಣೇಶ ಜೋಶಿ ನಿರೂಪಿಸಿದರು. ಅಕ್ಷಯ ಭಟ್, ಈಶ್ವರ ಭಟ್, ಸುಬ್ರಹ್ಮಣ್ಯ ಭಟ್ಟ ಹಾಗೂ ಇತರರು ಸಹಕರಿಸಿದರು. ಉಮೇಶ ಭಟ್ಟ ಬಾಡ ಅವರಿಂದ ಯಕ್ಷಗಾನದ ಹೆಜ್ಜೆ ಕಲಿತ ಹಿರಿಕಿರಿಯ ಕಲಾವಿದರು ಮೂರು ಆಖ್ಯಾನಗಳಮೂಲಕ ಯಕ್ಷಗುರುವಿಗೆ ವಂದನೆ ಸಲ್ಲಿಸಿದರು.