ಹೊನ್ನಾವರ : ತಾಲ್ಲೂಕಿನ ಸಾಲ್ಕೋಡ ಪಂಚಾಯತ್ ವ್ಯಾಪ್ತಿಯ ಕೆರೆಕೋಣದಲ್ಲಿ ಬಾವಿಗೆ ಬಿದ್ದಿದ್ದ ಚಿರತೆಯೊಂದನ್ನು ಅರಣ್ಯ ಇಲಾಖೆ ಅಧಿಕಾರಿಗಳು ರಕ್ಷಣೆ ಮಾಡಿದ ಘಟನೆ ನಡೆದಿದೆ. ಗ್ರಾಮದ ಮನೆಯೊಂದರ ಬಾವಿಯಲ್ಲಿ ಚಿರತೆ ಆಕಸ್ಮಿಕವಾಗಿ ಬಿದ್ದಿತ್ತು. ಸುಮಾರು ಒಂದೂವರೆ ವರ್ಷದ ಚಿರತೆ ಇದಾಗಿದ್ದು, ಆಹಾರ ಅರಸಿ ಬಂದಿದ್ದ ವೇಳೆ ಆಕಸ್ಮಿಕವಾಗಿ ಬಾವಿಗೆ ಬಿದ್ದಿರುವ ಸಾಧ್ಯತೆಗಳಿವೆ ಎಂದು ಅರಣ್ಯ ಇಲಾಖೆ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಬಾವಿಯಲ್ಲಿ ಚಿರತೆ ಬಿದ್ದಿದ್ದನ್ನು ಗಮನಿಸಿದ ಇಲ್ಲಿನ ಸ್ಥಳೀಯರು ಕೂಡಲೇ ಅರಣ್ಯ ಇಲಾಖೆ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದರು. ಈ ವೇಳೆ ಸ್ಥಳಕ್ಕೆ ಆಗಮಿಸಿದ ಅರಣ್ಯ ಇಲಾಖೆ ಅಧಿಕಾರಿ ಸಿಬ್ಬಂದಿ ತಂಡ ಚಿರತೆ ರಕ್ಷಣಾ ಕಾರ್ಯಾಚರಣೆ ಕೈಗೊಂಡಿದೆ. ಬಾವಿಗೆ ಬಿದ್ದಿದ್ದ ಚಿರತೆಯನ್ನು ಆರ್‌ಎಫ್ಒ ವಿಕ್ರಂ ರೆಡ್ಡಿ ನೇತೃತ್ವದಲ್ಲಿ ರಕ್ಷಣೆ ಮಾಡಲಾಯಿತು.
ಬಾವಿಗೆ ಏಣಿ ಇಳಿಸಿ, ಬಲೆ ಹಾಕುವ ಮೂಲಕ ಚಿರತೆಯನ್ನು ಮುನ್ನೆಚ್ಚರಿಕೆ ವಹಿಸಿ ಮೇಲಕ್ಕೆತ್ತಲಾಗಿದ್ದು ಬಳಿಕ ಅದನ್ನು ಸುರಕ್ಷಿತವಾಗಿ ಕಾಡಿಗೆ ಬಿಡಲಾಯಿತು.