ಕುಮಟಾ : ಉತ್ತರ ಕನ್ನಡ ಜಿಲ್ಲೆಯ ಅತಿದೊಡ್ಡ ಯಕ್ಷೋತ್ಸವಗಳಲ್ಲಿ ಒಂದಾದ ಕತಗಾಲ ಯಕ್ಷೋತ್ಸವ ಇದೇ ಬರುವ ದಿನಾಂಕ 23/10/2022, ಭಾನುವಾರದಂದು ಸಂಜೆ 4 ಗಂಟೆಯಿಂದ ಕುಮಟಾ ತಾಲೂಕಿನ ಕತಗಾಲದ ಎಸ್.ಕೆ.ಪಿ ಪ್ರೌಢಶಾಲೆಯ ಒಳಾಂಗಣ ರಂಗಮಂದಿರದಲ್ಲಿ ನೆರವೇರಲಿದೆ. ದಕ್ಷಿಣೋತ್ತರಕನ್ನಡ ಜಿಲ್ಲೆಯ ಸುಪ್ರಸಿದ್ಧ 40 ಕಲಾವಿದರ ಕೂಡುವಿಕೆಯಲ್ಲಿ ಶ್ರೀ ರಂಗ ತುಲಾಭಾರ, ವೀರ ಮೌರ್ವಿಜ, ಶಿವ ಪಂಚಾಕ್ಷರಿ ಮಹಿಮೆ ಎಂಬ ಮೂರು ಪೌರಾಣಿಕ ಪ್ರಸಂಗಗಳನ್ನು ಪ್ರದರ್ಶಿಸಲಾಗುತ್ತಿದೆ.
ಇದೇ ಸಂದರ್ಭದಲ್ಲಿ ಕತಗಾಲ ಯಕ್ಷೋತ್ಸವ ಪ್ರಶಸ್ತಿ ಪ್ರದಾನ ಸಮಾರಂಭ ಕೂಡಾ ನಡೆಯಲಿದ್ದು ಶ್ರೇಷ್ಠ ಯಕ್ಷಗಾನ ಕಲಾವಿದರಾದ ಶ್ರೀ ಈಶ್ವರ ನಾಯ್ಕ ಮಂಕಿ ಇವರನ್ನು ಪುರಸ್ಕರಿಸಲಾಗುತ್ತಿದೆ. ಈ ಕಾರ್ಯಕ್ರಮದಲ್ಲಿ ಶ್ರೀ ಶ್ರೀನಿವಾಸ ಪೂಜಾರಿ ಕೋಟ, ಮಾನ್ಯ ಉಸ್ತುವಾರಿ ಸಚಿವರು ಉತ್ತರ ಕನ್ನಡ, ಕಾರ್ಮಿಕ ಇಲಾಖೆ ಸಚಿವರಾದ ಶ್ರೀ ಶಿವರಾಮ ಹೆಬ್ಬಾರ, ಕುಮಟಾ, ಹೊನ್ನಾವರ ವಿಧಾನ ಸಭಾ ಕ್ಷೇತ್ರದ ಶಾಸಕರಾದ ಶ್ರೀ ದಿನಕರ ಶೆಟ್ಟಿ, ಯಕ್ಷಗಾನ ಅಕಾಡೆಮಿ ಅಧ್ಯಕ್ಷರಾದ ಡಾll ಜಿ. ಎಲ್ ಹೆಗಡೆ, ಮಾಜಿ ಜಿಲ್ಲಾ ಪಂಚಾಯತ್ ಸದಸ್ಯರು, ಕೆ.ಡಿ.ಸಿ.ಸಿ ಬ್ಯಾಂಕ್ ನಿರ್ದೇಶಕರೂ ಆದ ಶ್ರೀ ಶಿವಾನಂದ ಹೆಗಡೆ ಹಾಗೂ ಶ್ರೀ ಗಜಾನನ ಪೈ, ಮುಖಂಡರಾದ ಶ್ರೀ ವಿವೇಕ ಜಾಲಿಸತ್ಗಿ, ಶ್ರೀ ಸೂರಜ್ ನಾಯ್ಕ ಸೋನಿ ಮೊದಲಾದ ಗಣ್ಯರು ಉಪಸ್ಥಿತರಿರಲಿದ್ದಾರೆ.
ಯಕ್ಷಗಾನ ಪ್ರದರ್ಶನಕ್ಕೆ ಮೇಲ್ಛಾವಣಿ ವ್ಯವಸ್ಥೆಯ ಜೊತೆ ಉಚಿತ ಪ್ರವೇಶವಿದ್ದು ಹೆಚ್ಚಿನ ಸಂಖ್ಯೆಯಲ್ಲಿ ಕಲಾಭಿಮಾನಿಗಳು ಆಗಮಿಸಬೇಕೆಂದು ಸಂಘಟಕ ಸಹೋದರರಾದ ಶ್ರೀ ಮಂಜುನಾಥ ಭಟ್ಟ ಭಂಡಿವಾಳ, ಚೀಫ್ ಮ್ಯಾನೇಜರ್ ಬ್ಯಾಂಕ್ ಆಫ್ ಬರೋಡಾ ಹಾಗೂ ಶ್ರೀ ವಿನಾಯಕ ಭಟ್ಟ ಭಂಡಿವಾಳ, ಶಿಕ್ಷಕರು ಇವರು ವಿನಂತಿಸಿದ್ದಾರೆ.