ಹೊನ್ನಾವರ: ತಾಲೂಕಿನ ತಲಗೋಡು ಮೂಲದ, ಪ್ರಸ್ತುತ ಕುಂದಾಪುರದಲ್ಲಿ ವಾಸವಿರುವ ಪುಷ್ಪಾ ಮತ್ತು ಶಿವರಾಮ ಹೆಗಡೆ ದಂಪತಿಯ ಮೂರನೆ ಪುತ್ರಿ ಸಾಕ್ಷಿ ಹೆಗಡೆ, ಕ್ಲೀನ್ ಕರ್ನಾಟಕ ಮತ್ತು ಗ್ರೀನ್ ಕರ್ನಾಟಕ ಧ್ಯೇಯದೊಂದಿಗೆ ಪ್ರಕೃತಿ ಉಳಿವಿಗಾಗಿ ಬೈಕ್ ಮೇಲೆ ಜಾಗೃತಿ ಮೂಡಿಸಲು ತೆರಳುತ್ತಿದ್ದಾರೆ.

ಕುಂದಾಪುರದಿಂದ ಸರಿಸುಮಾರು 6 ಸಾವಿರ ಕಿ.ಮೀ. ದೂರದ ಕಾಶ್ಮೀರಕ್ಕೆ ತೆರಳಿ ವಾಪಸ್ಸಾಗಿದ್ದು, ಇದೀಗ ಕರ್ನಾಟಕದೆಲ್ಲಡೆ ಜಾಗೃತಿ ಮೂಡಿಸಲು ಅಣಿಯಾಗಿದ್ದಾರೆ. ಕುಂದಾಪುರದ ಭಂಡಾರಕರ ಕಾಲೇಜಿನ ಅಂತಿಮ ಪದವಿ ವಿದ್ಯಾರ್ಥಿನಿ ಸಾಕ್ಷಿ, ಕುಂದಾಪುರದ ಮನೆಯಿಂದ ಹೊರಟು, ರಾಜ್ಯದ 31 ಜಿಲ್ಲೆಗಳನ್ನು ಸುತ್ತುವ ಪ್ರಯಾಣಕ್ಕೆ ಇಡಗುಂಜಿ ಮಹಾಗಣಪತಿ ದೇವಸ್ಥಾನಕ್ಕೆ ಪೂಜೆ ಸಲ್ಲಿಸುವ ಮೂಲಕ ಚಾಲನೆ ನೀಡಿದ್ದಾರೆ. ಅ.16ರಂದು ಆರಂಭಿಸಿ ದಕ್ಷಿಣ ಕನ್ನಡಕ್ಕೆ ನ.16ರಂದು ತಲುಪಿ ನ.17ರಂದು ಉಡುಪಿಗೆ ಆಗಮಿಸಲಿದ್ದಾರೆ. ಒಂದು ತಿಂಗಳ ಕಾಲ 4 ಸಾವಿರ ಕಿ.ಮೀ.ಗಳ ಪಯಣದ ಉದ್ದೇಶ ಹೊಂದಿದ್ದಾರೆ.

RELATED ARTICLES  ಶಿಕ್ಷಕರಿಗೆ ಅಭಿವಂದನೆ ಕಾರ್ಯಕ್ರಮ

ರಾಜ್ಯದ 31 ಜಿಲ್ಲೆಗಳಿಗೂ ಒಂಟಿಯಾಗಿ ಬೈಕ್‌ನಲ್ಲಿ ಸಂಚರಿಸಲಿದ್ದಾರೆ. ಕಲಿಕೆಯ ಜತೆ ಸಂಪಾದನೆಗಾಗಿ ಮನೆ ಸಮೀಪದ ವೈದ್ಯಕೀಯ ಕ್ಲಿನಿಕ್‌ನಲ್ಲಿ ಅರೆಕಾಲಿಕ ಕೆಲಸ ನಿರ್ವಹಿಸುತ್ತಿದ್ದಾರೆ. ಕ್ಲಿನಿಕ್‌ನಲ್ಲಿ ದೊರೆತ ಸಂಬಳದಲ್ಲಿ ಬೈಕ್ ಕೊಳ್ಳುವ ಕನಸು ಕಂಡು ಸ್ವಲ್ಪ ಹಣ ಸಂಗ್ರಹಿಸಿ ಸಾಲ ಮಾಡಿ ಬೈಕ್ ತಂದರು. 125 ಸಿಸಿ ಪಲ್ಸರ್ ಬೈಕ್‌ನಲ್ಲಿ ಕುಂದಾಪುರ ಪೇಟೆಗೆ ಆರಂಭದಲ್ಲಿ ಹೋಗುವಾಗ, ಏಕಕಾಲದಲ್ಲಿ ಎರಡೂ ಕಾಲು ನೆಲಕ್ಕೆ ತಾಗುತ್ತಿರಲಿಲ್ಲ. ಇತರ ವಾಹನ ಸವಾರರು ತಮಾಷೆ ಮಾಡಿದರೂ, ಅವಮಾನದಿಂದ ತಲೆಕೆಡಿಸಿಕೊಳ್ಳದೆ ಹಠ ಹಿಡಿದು, ಬೈಕ್‌ನಲ್ಲೇ ಸಾವಿರಾರು ಕಿ.ಮೀ. ಹೋಗಲು ಸಜ್ಜಾದರು. ಕಾಶ್ಮೀರ್ ಫೈಲ್ಸ್ ಸಿನೇಮಾ ವೀಕ್ಷಣೆ ಬಳಿಕ ಬೈಕ್ ತೆಗೆದುಕೊಂಡು 12 ದಿನಗಳಲ್ಲಿ 6 ಸಾವಿರ ಕಿ.ಮೀ. ದೂರ ಒಂಟಿಯಾಗಿ ಬೈಕ್ ಓಡಿಸಿದ ಸಾಕ್ಷಿ ಈಗ ಮತ್ತೆ ಕರ್ನಾಟಕ ಸಂಚರಿಸಲು ಸಜ್ಜಾಗಿದ್ದಾರೆ.

RELATED ARTICLES  ಸಮುದ್ರದ ಅಲೆಗೆ ಸಿಲುಕಿ ವೈದ್ಯಕೀಯ ವಿದ್ಯಾರ್ಥಿ ಸಾವು..!

ಇಡಗುಂಜಿಯ ನಿವೃತ್ತ ಶಿಕ್ಷಕ ಗಣಪತಿ ಭಟ್ಟ ಮತ್ತು ಎಮ್.ಆರ್.ಹೆಗಡೆ ಕೋಡಾಣಿ, ವಿದ್ಯಾರ್ಥಿ ತಂದೆ ಶಿವರಾಮ ಹೆಗಡೆ ಇಡಗುಂಜಿಯಲ್ಲಿ ಪ್ರೋತ್ಸಾಹಿಸಿ ಈಕೆಗೆ ಬೀಳ್ಕೊಟ್ಟರು.