ಹೊನ್ನಾವರ : ಮೊನ್ನೆ ಮೊನ್ನೆ ಬಸ್ ಬ್ರೇಕ್ ಆಗಿ ಸರಣಿ ಅಪಘಾತ ಸಂಭವಿಸಿದ ಘಟನೆ ಹಸಿಯಾಗಿ ಇರುವಾಗಲೇ ಇದೀಗ ಇನ್ನೊಂದು ಅಪಘಾತ ಸಂಭವಿಸಿದೆ. ಈ ಘಟನೆ ಹೊನ್ನಾವರದ ಜನತೆಗೆ ಇನ್ನೊಂದು ಆಘಾತದಂತೆ ಬಂದಿದೆ. ತಾಲೂಕಿನ ಹಡಿನಬಾಳ ಸಮೀಪ ಕೆ.ಎಸ್‌ಆರ್.ಟಿ.ಸಿ ಬಸ್ , ಚಾಲಕನ ನಿಯಂತ್ರಣ ತಪ್ಪಿ ಹಿಮ್ಮುಖವಾಗಿ ಚಲಿಸಿ ಮೂರು ರಿಕ್ಷಾ ಜಖಂ ಗೊಳಿಸಿದ ಘಟನೆ ವರದಿಯಾಗಿದೆ.
ಹೊನ್ನಾವರದಿಂದ ಆರ್ಮುಡಿ ಹೋಗುತ್ತಿರುವ ಬಸ್ ಹಡಿನಬಾಳ ಮೂಲಕ ಗುಂಡಬಾಳ ಪ್ರವೇಶಿಸುವ ಮಹದ್ವಾರವನ್ನು ಪ್ರವೇಶಿಸುವಾಗ ಬ್ರೇಕ್ ಪೇಲ್ ಆಗಿದೆ. ಹೀಗಾಗಿ ಬಸ್ ಇಳಿಜಾರಿನಲ್ಲಿ ಹಿಮ್ಮುಖವಾಗಿ ಚಲಿಸಿದೆ ಎನ್ನಲಾಗಿದೆ. ಹಿಮ್ಮುಖವಾಗಿ ಬಸ್ ಚಲಿಸಿದ ಪರಿಣಾಮವಾಗಿ ರಿಕ್ಷಾ ತಂಗುದಾಣದಲ್ಲಿ ನಿಂತಿದ್ದ ಮೂರು ರಿಕ್ಷಾಗೆ ಬಡಿದಿದೆ ಎನ್ನಲಾಗಿದೆ. ರಿಕ್ಷಾ ಚಾಲಕರು ರಿಕ್ಷಾದಲ್ಲಿಯೇ ವಿಶ್ರಾಂತಿ ಪಡೆಯುತ್ತಿದ್ದ ಸಂದರ್ಭದಲ್ಲಿ ಈ ಘಟನೆ ನಡೆದಿದೆ ಎನ್ನಲಾಗಿದೆ. ಬಸ್ ಹಿಮ್ಮುಖವಾಗಿ ಚಲಿಸುತ್ತಿದ್ದ ವೇಳೆ ಆಟೋ ಚಾಲಕರು ಆಟೋದಿಂದ ಹಾರಿ ತಪ್ಪಿಸಿಕೊಂಡಿದ್ದಾರೆ ಎಂದು ಮಾಹಿತಿ ಲಭ್ಯವಾಗಿದೆ.
ಹೆದ್ದಾರಿಯ ಒಂದು ಬದಿಯಿಂದ ಇನ್ನೊಂದು ಕಡೆ ಬಸ್ ಬಂದು ನಿಂತಿದ್ದ ರಿಕ್ಷಾಗೆ ಡಿಕ್ಕಿಯಾಗಿರುವುದರಿಂದ ಜಖಂ ಆಗಿದ್ದು, ರಿಕ್ಷಾ ಚಾಲಕರು ಮತ್ತು ಬಸ್ಸಿನಲ್ಲಿದ್ದ ಪ್ರಯಾಣಿಕರು ಅದೃಷ್ವಶಾತ್ ಪ್ರಾಣಾಪಯದಿಂದ ಪಾರಾಗಿದ್ದಾರೆ. ಸ್ಥಳಕ್ಕೆ ಹೊನ್ನಾವರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.