ಕಾರವಾರ: ನಗರದ ಕೋಡಿಬಾಗ ರಸ್ತೆಯ ಹೋಟೆಲ್ ಪೂರ್ಣಿಮಾ ಎದುರಿನ ಎರಡು ಮೊಬೈಲ್ ಅಂಗಡಿಗಳಲ್ಲಿ ಶುಕ್ರವಾರ ತಡ ರಾತ್ರಿ ನಗದು ಹಾಗೂ ಮೊಬೈಲ್ ಕಳ್ಳತನವಾಗಿದೆ.
ಕಳ್ಳತವಾದ ಒಟ್ಟೂ ಮೌಲ್ಯ 1.25 ಲಕ್ಷ ರೂ. ಎಂದು ಅಂದಾಜಿಸಲಾಗಿದೆ. ರಫೀಕ್ ಮೊಹಮ್ಮದ್ ತಹಶೀಲ್ದಾರ್ ಎಂಬುವವರಿಗೆ ಸೇರಿದ ಮೈ ಡ್ರೀಮ್ ಮೊಬೈಲ್ ಅಂಗಡಿಯಲ್ಲಿದ್ದ 10 ಸಾವಿರ ರೂ. ಮೌಲ್ಯದ ಮೊಬೈಲ್‍ಗಳು ಹಾಗೂ 30 ಸಾವಿರ ನಗದು ಕಳ್ಳತನವಾಗಿದೆ ಎಂದು ತಿಳಿದು ಬಂದಿದೆ. ಹತ್ತಿರವೇ ಇದ್ದ ದಿನೇಶ ಶೆಟ್ಟಿ ಎಂಬುವವರಿಗೆ ಸೇರಿದ ಪಾರಿಜಾತ ಪಾನ್ ಅಂಗಡಿಯಲ್ಲಿಯೂ ಕೂಡ ನಗದು ಪೆಟ್ಟಿಗೆಯಲ್ಲಿದ್ದ 15 ಸಾವಿರ ನಗದನ್ನು ದೋಚಿದ್ದಾರೆ.
ಸ್ಥಳಕ್ಕೆ ನಗರ ಠಾಣೆಯ ಪಿಎಸ್‍ಐ ಉಮೇಶ ಪಾವಸ್ಕರ್, ಸಿಪಿಐ ಶಿವಕುಮಾರ್ ಭೇಟಿ ನೀಡಿದರು. ಶ್ವಾನದಳ ಕೂಡ ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದೆ.