ಶಿರಸಿ: ದೀಪಾವಳಿ ಹಬ್ಬವು ಅಕ್ಟೋಬರ್ 24, 25, 26ರಂದು ನಡೆಯಲಿದ್ದು, ಇದರ‌ ನಡುವೆ ಗ್ರಹಣ ಕೂಡ ಬಂದಿದೆ. ಅಮಾವಾಸ್ಯೆಯಂದು ಸೂರ್ಯಗ್ರಹಣ ಬಂದಿರುವುದರಿಂದ ಹಬ್ಬದ ಆಚರಣೆಯಲ್ಲಿ ಬಂದ ತೊಡಕನ್ನು ನಿವಾರಿಸುವ ದೃಷ್ಟಿಯಿಂದ ಬಹುಜನರ ಅಪೇಕ್ಷೆಯಂತೆ ಸೋಂದಾ ಸ್ವರ್ಣವಲ್ಲೀ ‌ಮಹಾ ಸಂಸ್ಥಾನವು ಗ್ರಹಣ ಕಾಲದ‌ ಆಚರಣೆ‌ ಕುರಿತು ಪ್ರಕಟಣೆ ನೀಡಿದೆ. ಅ.24 ರಂದು ಬೂರೇಹಬ್ಬ, ನರಕಚತುರ್ದಶಿ. ಅಂದೇ ಬಲೀಂದ್ರನ ಸ್ಥಾಪನೆ ಮಾಡಿ ಪೂಜಾರಂಭ ಮಾಡಬೇಕು. ಮರುದಿನ 25ರಂದು ಅಮಾವಾಸ್ಯೆ. ಅಂದು ಸೂರ್ಯಗ್ರಹಣ ಪ್ರಾಪ್ತವಾಗಿದ್ದು ಆ ನಿಮಿತ್ತ ಉಪವಾಸಾದಿ ಆಚರಣೆಗಳಿರುವುದರಿಂದ ಈ ದಿನ ಮಾಡಬೇಕಾದ ಶ್ರೀಲಕ್ಷ್ಮೀ ಪೂಜೆಯನ್ನು ಹಿಂದಿನ ದಿನವೇ (ಅ.24) ಮಾಡಬೇಕು ಎಂದು ತಿಳಿಸಲಾಗಿದೆ.

RELATED ARTICLES  ಏ.೨ ರಂದು ಮಹಾರಾಜ್ಞೀ ಶ್ರೀ ದುರ್ಗಾಪರಮೇಶ್ವರೀ ದೇವಾಲಯದಲ್ಲಿ ಯಕ್ಷಗಾನ.

ಇದನ್ನೂ ಓದಿ – ಹೊನ್ನಾವರ ತಾಲೂಕಿನಲ್ಲಿ ಚಿರತೆ ಕಾಟ : ಜನರು ಕಂಗಾಲು


ಗ್ರಹಣದ ಸಮಯದಲ್ಲಿ ಸಂಪ್ರದಾಯದಂತೆ ಬಲೀಂದ್ರನಿಗೆ ತುಳಸಿಯನ್ನು ಇಟ್ಟು ಗ್ರಹಣ ಮೋಕ್ಷದ ನಂತರ ಅದನ್ನು ತೆಗೆದು ಮರುದಿನ ಪುನಃ ಪೂಜೆ ಮಾಡಿ ವಿಸರ್ಜನೆ ಮಾಡಬೇಕು.ಅ.26 ಬುಧವಾರ ದೀಪಾವಳಿ ಹಬ್ಬವನ್ನು ಪ್ರತಿವರ್ಷದಂತೆ ಆಚರಣೆ ಮಾಡಬೇಕು ಎಂದು ತಿಳಿಸಿದೆ.
ಶುಭಕೃತ್ ಸಂವತ್ಸರದ ಅಶ್ವಿನ ಬಹುಳ ಅಮಾವಾಸ್ಯೆ ಅಕ್ಟೋಬರ್ 25ರಂದು ಖಂಡಗ್ರಾಸ ಸೂರ್ಯಗ್ರಹಣ ಸಂಭವಿಸಲಿದೆ. ಗ್ರಹಣದ ಸ್ಪರ್ಶಕಾಲ ಸಂಜೆ ಘಂ.5.04ನಿ. ಮಧ್ಯಕಾಲ ಸಂಜೆ 5.48 ನಿ. ಮೋಕ್ಷಕಾಲ ಸಂಜೆ 6.03 ನಿ. ಆದ್ಯಂತ ಪುಣ್ಯಕಾಲ ಸಂಜೆ 59 ನಿಮಿಷವಾಗಿದೆ.
ಸ್ವಾತಿ ನಕ್ಷತ್ರದ ತುಲಾ ರಾಶಿಯಲ್ಲಿ ಸೂರ್ಯನಿಗೆ ಕೇತು ಗ್ರಹಣ ಉಂಟಾಗುತ್ತದೆ. ಹಿಂದಿನ ದಿನ ರಾತ್ರಿ ಬೆಳಗಿನ ಜಾವ ಘಂ. 3.21ರ ನಂತರ ಗ್ರಹಣ ಮೋಕ್ಷ ಪರ್ಯಂತ ಭೋಜನವನ್ನು ಮಾಡತಕ್ಕದ್ದಲ್ಲ. ಬಾಲರು ವೃದ್ಧರು ಆತುರರು, ಅಶಕ್ತರು, ರೋಗಿಗಳು 25ರಂದು ಬೆಳಗ್ಗೆ 10.49 ನಿಮಿಷದ ನಂತರ ಭೋಜನ ಮಾಡತಕ್ಕದ್ದಲ್ಲ ಎಂದು ಶ್ರೀ ಸೋಂದಾ ಸ್ವರ್ಣವಲ್ಲೀ ಮಹಾ ಸಂಸ್ಥಾನದ ಪ್ರಕಟಣೆಯಲ್ಲಿ ತಿಳಿಸಲಾಗಿದೆ.

RELATED ARTICLES  ಕರ್ನಾಟಕ ಲೋಕಾಯುಕ್ತ ಸಂಸ್ಥೆಯಲ್ಲಿ ಸಿ ವೃಂದದ ಹುದ್ದೆಗಳಿಗೆ ನೇಮಕಾತಿ.

ಉತ್ತರಕನ್ನಡದ ಇನ್ನಷ್ಟು ವಿಶೇಷ ವರದಿಗಳನ್ನು ಓದಲು ಈ ಲಿಂಕ್ ಒತ್ತಿ.


ಗ್ರಹಣ ಕಾಲದಲ್ಲಿ ಎಲ್ಲರೂ ಸ್ನಾನ ಮಾಡಿ ಯಥಾಶಕ್ತಿ ಜಪ, ತಪ, ದಾನಾದಿಗಳನ್ನು ಆಚರಿಸಿ ತತ್ಫಲಭಾಗಿಗಳಾಗಬೇಕು.
-ಶ್ರೀಗಂಗಾಧರೇಂದ್ರ‌ ಸರಸ್ವತೀ ಮಹಾಸ್ವಾಮೀಜಿ, ಮಠಾಧೀಶರು, ಸೋಂದಾ ಸ್ವರ್ಣವಲ್ಲೀ‌ ಸಂಸ್ಥಾನ