ಕಾರವಾರ: ಅಂಕೋಲಾ ಕಡೆಗೆ ಸ್ಟೀಲ್ ಕೊಂಡೊಯ್ಯುತ್ತಿದ್ದ ಸರಕು ಸಾಗಣೆ ಲಾರಿಯೊಂದು ಚಾಲಕನ ನಿಯಂತ್ರಣ ತಪ್ಪಿ ನಗರದ ಹೊರವಲಯದ ಬಿಣಗಾ ಬಳಿ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಮಂಗಳವಾರ ರಾತ್ರಿ ಪಲ್ಟಿಯಾಗಿದೆ. ಘಟ್ಟದ ತಿರುವಿನಲ್ಲಿ ಚಾಲಕನ ನಿಯಂತ್ರಣ ತಪ್ಪಿ ಪಕ್ಕದ ತಗ್ಗು ಪ್ರದೇಶಕ್ಕೆ ಲಾರಿ ಪಲ್ಟಿಯಾಗಿದೆ. ಘಟನೆ ತಿಳಿದ ಸ್ಥಳೀಯರು ಸಂಚಾರ ಪೊಲೀಸ್ ಠಾಣೆಗೆ ಮಾಹಿತಿ ನೀಡಿದ್ದು, ದೂರು ದಾಖಲಾಗಿದೆ.
ವನ್ಯಪ್ರಾಣಿಯ ಉಗುರುಗಳು ಪತ್ತೆ : ಓರ್ವ ಅರೆಸ್ಟ್.
ದಾಂಡೇಲಿ: ಅಕ್ರಮವಾಗಿ ಸಂಗ್ರಹಿಸಿಟ್ಟಿದ್ದ ವನ್ಯಪ್ರಾಣಿಯ ಉಗುರುಗಳು ಪತ್ತೆಯಾದ ಘಟನೆ ಹಳಿಯಾಳ ತಾಲೂಕಿನ ಕಾಳಗಿನಕೊಪ್ಪ ರಸ್ತೆಯಲ್ಲಿ ಬರುವ ದೇಶಪಾಂಡೆ ನಗರದ ಹತ್ತಿರ ನಡೆದಿದೆ. ಖಚಿತ ಮಾಹಿತಿಯನ್ನಾಧರಿಸಿ ದಾಂಡೇಲಿ ಪೊಲೀಸ್ ಅರಣ್ಯ ಸಂಚಾರಿ ದಳದ ಅಧಿಕಾರಿಗಳು ಮತ್ತು ಸಿಬ್ಬಂದಿ ದಾಳಿ ನಡೆಸಿದ ಸಂದರ್ಭದಲ್ಲಿ ಚಿರತೆಯ ಉಗುರುಗಳನ್ನೆ ಹೋಲುವಂತಹ ಉಗುರುಗಳು ಪತ್ತೆಯಾಗಿದೆ. ಈ ಪ್ರಕರಣಕ್ಕೆ ಸಂಬಂಧಪಟ್ಟಂತೆ ಗಣಪತಿ ಎಂಬಾತನನ್ನು ಬಂಧಿಸಲಾಗಿದೆ. ಇನ್ನೋರ್ವ ಆರೋಪಿ ಚಿಬ್ಬಲಗೇರಿಯ ಅಶೋಕ ಮಿರಾಶಿ ಎಂಬಾತನು ತಲೆ ಮರೆಸಿಕೊಂಡಿದ್ದಾನೆ ಎಂದು ತಿಳಿದುಬಂದಿದೆ.
ಸೈಕಲ್ ಗೆ ಡಿಕ್ಕಿ ಹೊಡೆದ ಕಾರು
ದಾಂಡೇಲಿ: ವಾಯುವಿಹಾರಕ್ಕೆಂದು ಸೈಕಲ್ ಮೇಲೆ ಹೋಗುತ್ತಿದ್ದ ವ್ಯಕ್ತಿಯೋರ್ವ ಅಪರಿಚಿತ ಕಾರೊಂದು ಡಿಕ್ಕಿಯಾಗಿ ಗಾಯಗೊಂಡ ಘಟನೆ ತಾಲೂಕಿನ ಅಂಬಿಕಾನಗರ- ದಾಂಡೇಲಿ ರಸ್ತೆಯಲ್ಲಿ ಬರುವ ಬಡಕಾನಶಿರಡಾದಲ್ಲಿ ನಡೆದಿದೆ.
ನಗರದ ಓಲ್ಡ್ ಡಿ.ಆರ್.ಟಿ ನಿವಾಸಿಯಾಗಿರುವ ನಾಗರಾಜ ಲೋಗಾವಿ ಗಾಯಗೊಂಡ ವ್ಯಕ್ತಿ. ಇವರು ವಾಯುವಿಹಾರಕ್ಕೆಂದು ಸೈಕಲ್ ಮೇಲೆ ದಾಂಡೇಲಿಯಿಂದ ಬಡಕಾನಶಿರಡಾ ಕ್ರಾಸ್ ಕಡೆಗೆ ಹೋಗುತ್ತಿರುವಾಗ ಎದುರುಗಡೆಯಿಂದ ಅತೀ ವೇಗವಾಗಿ ಬಂದ ಅಪರಿಚಿತ ಕಾರೊಂದು ಡಿಕ್ಕಿಯಾಗಿದೆ. ಡಿಕ್ಕಿಯ ರಭಸಕ್ಕೆ ಸವಾರ ನಾಗರಾಜ ಕೆಳಕ್ಕೆ ಬಿದ್ದು ಗಾಯಗೊಂಡಿದ್ದು, ಸೈಕಲ್ ಸಂಪೂರ್ಣ ನಜ್ಜುಗುಜ್ಜಾಗಿದೆ.
ನಾಗರಾಜ ಅವರಿಗೆ ನಗರದ ಸಾರ್ವಜನಿಕ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗಿದೆ. ಈ ಬಗ್ಗೆ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ.