ಶಿರಸಿ: ನನ್ನ ಕೊನೇ ತನಕ ಸಂಗೀತ ಪಾಠ ಮಾಡುವೆ ಎಂದು ಕರ್ನಾಟಕ ಕಲಾಶ್ರೀ ಪಂಡಿತ್ ಎಂ.ಪಿ.ಹೆಗಡೆ ಪಡಿಗೇರಿ ಹೇಳಿದರು. ಅವರು ನಗರದ ತೋಟಗಾರ ಕಲ್ಯಾಣ ಮಂಟಪದಲ್ಲಿ ಗುರು ಗೌರವಾರ್ಪಣೆ ಸ್ವೀಕರಿಸಿ ಮಾತನಾಡಿದರು. ಕರ್ನಾಟಕ ಕಲಾಶ್ರೀ ಪಡೆದ ಬಳಿಕ ಕೊಂಬು ಬರೋದಿಲ್ಲ. ಇನ್ನೂ ಅನೇಕರು ಎಲೆ ಮರೆಯಲ್ಲೇ ಇದಾರೆ. ನಾನು ನನ್ನ ಉಸಿರು ಇರುವ ತನಕ, ಶಿಷ್ಯರು ಬರುವ ತನಕ ಪಾಠ ಮಾಡುತ್ತೇನೆ ಎಂದ ಅವರು, ನನಗೆ ಸಮಾಜ ತುಂಬ ಕೊಟ್ಟಿದೆ ಎಂದರು.
ಶಿರಸಿಗೆ ಒಂದು ಸುಸಜ್ಜಿತ ರಂಗಭೂಮಿ ಕೂಡ ಇಲ್ಲ ಎಂದೂ ವಿಷಾದಿಸಿದರು. ಅಭಿನಂದನಾ ನುಡಿಯನ್ನು ವಿಮರ್ಶಕ ಸುಬ್ರಾಯ ಮತ್ತೀಹಳ್ಳಿ ಆಡಿದರು. ಕೆಎಂಎಫ್ ನಿರ್ದೇಶಕ ಸುರೇಶ್ಚಂದ್ರ ಹೆಗಡೆ ಕೆಶಿನ್ಮನೆ, ಹಿರಿಯ ರುದ್ರವೀಣಾ ವಾದಕ ಆರ್.ವಿ.ಹೆಗಡೆ ಹಳ್ಳದಕೈ, ಪ್ರಸಿದ್ಧ ಗಾಯಕ ಶ್ರೀಪಾದ ಹೆಗಡೆ ಸೋಮನಮನೆ ಇತರರು ಇದ್ದರು.
ಸುಬ್ರಹ್ಮಣ್ಯ ಸುತ್ಮನೆ, ಸತೀಶ ಗೋಳಿಕೊಪ್ಪ ನಿರ್ವಹಿಸಿದರು. ಆರ್.ಎಂ.ಹೆಗಡೆ ಕಾನಗೋಡ ಸಮ್ಮಾನ ಪತ್ರ ವಾಚಿಸಿದರು.
ಕಾರ್ಯಕ್ರಮಕ್ಕೆ ನಿನಾದ ಸಂಗೀತ ಸಭಾ, ಸ್ಪಂದನಾ ಕಲಾ ಬಳಗ, ನಾವು ನೀವು ಬಳಗ ಕಾರ್ಯಕ್ರಮ ಜೋಡಿಸಿದ್ದವು.
ಆರಂಭದಲ್ಲಿ ಸಂಗೀತಾ ಹೆಗಡೆ ಗಾಯನ ಗಮನ ಸೆಳೆಯಿತು. ಸಂದೇಶ ಹೆಗಡೆ, ಗುರುಪ್ರಸಾದ ಗಿಳಿಗುಂಡಿ ಸಹಕಾರ ನೀಡಿದರು. ಸಮ್ಮಾನದ ಬಳಿಕ ಎಂ.ಪಿ.ಹೆಗಡೆ ಅವರ ಗಾಯನಕ್ಕೆ ಪಂ.ಗೋಪಾಲಕೃಷ್ಣ ಕಲಭಾಗ, ಗುರುಪ್ರಸಾದ ಗಿಳಿಗುಂಡಿ ಸಹಕಾರ ನೀಡಿದರು.