ಜಗದ್ಗುರುಶಂಕರಾಚಾರ್ಯಮಹಾಸಂಸ್ಥಾನಮ್ ಶ್ರೀಸಂಸ್ಥಾನಗೋಕರ್ಣ, ಶ್ರೀರಾಮಚಂದ್ರಾಪುರಮಠ ಇದರ ಧರ್ಮಕರ್ಮಖಂಡ ದಿಂದ ಲಭ್ಯವಾದ “ಗ್ರಹಣಕಾಲಾಚರಣೆ” (ಧಾರ್ಮಿಕಪಂಚಾಂಗವನ್ನಾಶ್ರಯಿಸಿ ಕಾಲನಿರ್ಣಯ ಹೇಳಲಾಗಿದೆ) ಇಂತಿದೆ.

➡️ಆಶ್ವಯುಜ ಅಮಾವಾಸ್ಯಾ = 25.10.22 ನೇ ಮಂಗಳವಾರ
ಸಂಜೆ 5.07 ರಿಂದ 6.29 ರ ತನಕ ಸ್ವಾತೀ ನಕ್ಷತ್ರ ತುಲಾ ರಾಶಿಯಲ್ಲಿ ಸೂರ್ಯನಿಗೆ ಕೇತು ಗ್ರಹಣವು ಸಂಭವಿಸಲಿದೆ.

➡️ಸ್ವಾತೀ, ಚಿತ್ರಾ, ವಿಶಾಖಾ, ಅರ್ದ್ರಾ, ಶತಭಿಷಾ ನಕ್ಷತ್ರದವರಿಗೆ ಹಾಗೂ ತುಲಾ, ವೃಶ್ಚಿಕ, ಮೀನ, ಕರ್ಕಾಟಕ ರಾಶಿಯವರಿಗೆ ಅಶುಭ ಫಲವಿರುತ್ತದೆ.

➡️ಗ್ರಹಣ ಅರಿಷ್ಟ ಪರಿಹಾರವಾಗಿ ಗ್ರಹಣ ಸ್ಪರ್ಶಕಾಲದಲ್ಲಿ ಸಚೈಲ ಸ್ನಾನ‌ಮಾಡಿ ರವಿ~ಕೇತುಗ್ರಹ ಜಪ, ಗ್ರಹಣ ಶಾಂತಿ ಹವನ, ದಾನಾದಿಗಳನ್ನು ಯಥಾ ಶಕ್ತಿ ಆಚರಿಸಬಹುದು.

➡️ಅನುಕೂಲ ಇರುವವರು ಸುವರ್ಣ ಸೂರ್ಯಬಿಂಬ ಮತ್ತು ನಾಗಬಿಂಬವನ್ನು ತುಪ್ಪತುಂಬಿದ ತಾಮ್ರದ ಪಾತ್ರೆಯಲ್ಲಿಟ್ಟು ಎಳ್ಳು, ವಸ್ತ್ರ, ದಕ್ಷಿಣೆ ಸಹಿತವಾಗಿ ಸೂರ್ಯಗ್ರಹಣ ಸೂಚಿತ ದೋಷಪರಿಹಾರಾರ್ಥವಾಗಿ ಸಂಕಲ್ಪ ಮಾಡಿಕೊಂಡು ಗ್ರಹಣ ಮೋಕ್ಷ ಕಾಲದಲ್ಲಿ ದಾನ ಮಾಡಬಹುದು.

➡️ಗ್ರಹಣಕಾಲದಲ್ಲಿ ಬ್ರಾಹ್ಮಣರು ಲಭ್ಯವಿಲ್ಲವಾದರೆ ಗ್ರಹಣಕಾಲದಲ್ಲಿ ದಾನಸಂಕಲ್ಪಿಸಿ ಗ್ರಹಣಾನಂತರ ದಾನ‌ಮಾಡಬಹುದಾಗಿದೆ. ಆದರೆ ಆ ಸಂದರ್ಭದಲ್ಲಿ ದ್ವಿಗುಣ ಮಾಡಬೇಕೆಂದು ನಿಯಮ.

➡️ ಗ್ರಹಣಸ್ಪರ್ಶವಾದ ಕೂಡಲೇ ಸ್ತ್ರೀ ಪುರುಷರಾದಿಯಾಗಿ ಎಲ್ಲರೂ ಸಚೈಲ ಸ್ನಾನ‌ಮಾಡಿ ದೇವೋಪಾಸನೆಯನ್ನು ಮಾಡಬೇಕು.

➡️ಪುರುಷರು ತಮಗೆ ಉಪದೇಶವಿರುವ ಮಂತ್ರಗಳನ್ನು , ಇಷ್ಟದೇವತಾ ಮಂತ್ರ ಜಪ, ಗಾಯತ್ರೀ ಮಂತ್ರವನ್ನೂ ಜಪಿಸಬೇಕು, ಸ್ತ್ರೀಯರು ದೇವತಾ ಸ್ತ್ರೋತ್ರಗಳನ್ನು ಪಠಿಸಬೇಕು.

➡️ಗ್ರಹಣ ಸ್ಪರ್ಶಕಾಲದಲ್ಲಿ ಸ್ನಾನ, ಮಧ್ಯಕಾಲದಲ್ಲಿ ಜಪ, ಹೋಮ, ಗ್ರಹಣ ಬಿಡುವ ಕಾಲದಲ್ಲಿ ದಾನ ಮಾಡಬೇಕು.

➡️ತಣ್ಣೀರಿನಲ್ಲಿ ಸ್ನಾನ ವಿಶೇಷ, ನದೀಸ್ನಾನ ಮತ್ತೂ ವಿಶೇಷ.

➡️ಜಾತಾಶೌಚ, ಮೃತಾಶೌಚವಿದ್ದರೂ ಗ್ರಹಣ ಕಾಲದಲ್ಲಿ ಸ್ನಾನ, ದಾನಗಳನ್ನು ಮಾಡಬೇಕು.

RELATED ARTICLES  ನಿರುದ್ಯೋಗಿಗಳಿಗೆ ಸುವರ್ಣ ಅವಕಾಶ: ಸರಕಾರದ ಮಾನ್ಯತೆ ಪಡೆದ ಕಂಪನಿಯಲ್ಲಿ ಕಾರ್ಯ ನಿರ್ವಹಿಸಲು ಅಭ್ಯರ್ಥಿಗಳು ಬೇಕಾಗಿದ್ದಾರೆ.

➡️ ರಜಸ್ವಲಾಸ್ತ್ರೀಯರೂ ಗ್ರಹಣಸ್ನಾನವನ್ನು ಮಾಡಬೇಕು.

➡️ಗ್ರಹಣಕಾಲದಲ್ಲಿ ಪ್ರತಿಯೊಬ್ಬರೂ ಉಟ್ಟಬಟ್ಟೆ ಹಾಗೂ ಮುಟ್ಟಿದ ಬಟ್ಟೆಯನ್ನು , ಮುಟ್ಟಿದ ಪಾತ್ರೆ ಮೊದಲಾದ ವಸ್ತುಗಳನ್ನು ತೊಳೆಯಬೇಕು.

➡️ಸೂರ್ಯಗ್ರಹಣಕಾಲವು ಮಂತ್ರೋಪದೇಶ ಪಡೆಯಲು ಅತ್ಯಂತ ಪ್ರಶಸ್ತ ಕಾಲವಾಗಿದೆ.

➡️ ಗ್ರಹಣಕಾಲದಲ್ಲಿ ಮಲಗಿದರೆ ರೋಗಪ್ರಾಪ್ತಿ, ಮೂತ್ರವಿಸರ್ಜನೆ ಮಾಡಿದರೆ ದಾರಿದ್ರ್ಯ, ಆಹಾರ ಸ್ವೀಕರಿಸಿದರೆ ನರಕ ಪ್ರಾಪ್ತಿ ಇತ್ಯಾದಿ ದೋಷಗಳನ್ನು ಹೇಳಿದ್ದಾರೆ.

ಇದನ್ನೂ ಓದಿ – ಸ್ವರ್ಣವಲ್ಲೀ ಮಠದಿಂದ ದೊರೆತ ಗ್ರಹಣ ಸಂಬಂಧಿಸಿದ ಮಾಹಿತಿ.

➡️ಸೂರ್ಯ ಗ್ರಹಣದ ನಂತರ ಶುದ್ಧ ಸೂರ್ಯ ಬಿಂಬದರ್ಶನದ ಬಳಿಕ ಸ್ನಾನವನ್ನು ಮಾಡಿದ ಮೇಲೆ ಶುದ್ಧಿಯಾಗುವುದು. ಆದ್ದರಿಂದ
ಪ್ರಸ್ತುತ ಈ ಗ್ರಹಣದಲ್ಲಿ ಸೂರ್ಯನು ಗ್ರಹಣ ಗ್ರಸ್ತನಾಗಿಯೇ ಅಸ್ತನಾಗುವುದರಿಂದ ಅದೇ ದಿವಸ ಅಂದರೆ ಮಂಗಳವಾರ ಸಂಜೆ ಶುದ್ಧ ಸೂರ್ಯ ಬಿಂಬ ದರ್ಶನವಾಗದಿರುವುದರಿಂದ ಮರು ದಿವಸ ಬುಧವಾರ ಬೆಳಗ್ಗೆ 6:25ರ ಸೂರ್ಯೋದಯದ ನಂತರ ಶುದ್ಧ ಸೂರ್ಯ ಬಿಂಬ ದರ್ಶನಾನಂತರ ಸ್ನಾನವನ್ನು ಮಾಡಿದ ನಂತರವಷ್ಟೇ ಶುದ್ಧಿ ಆಗುತ್ತದೆ.ಆ ಬಳಿಕವೇ ನಿತ್ಯಾನುಷ್ಠಾನಗಳನ್ನು, ಆಹಾರ ತಯಾರಿಕೆ ಮತ್ತು ಸೇವನೆಯನ್ನು ಮಾಡಬೇಕು.

➡️ಮಂಗಳವಾರ ಬೆಳಗಿನ ಜಾವ 05.07 ರ ನಂತರ ಆಹಾರ ಸೇವನೆ ನಿಷಿದ್ಧ . ಬುಧವಾರ ಬೆಳಿಗ್ಗೆ ಸೂರ್ಯೋದಯದ 6.25ರ ನಂತರ ಸ್ನಾನವಾದ ಮೇಲೆ ಆಹಾರ ಸ್ವೀಕರಿಸಬೇಕು.

➡️ಬಾಲಕರು, ಅಶಕ್ತರು, ರೋಗಿಗಳು ಮಂಗಳವಾರ ಬೆಳಿಗ್ಗೆ 10. 50 ನಿಮಿಷದ ಒಳಗೆ ಹಾಗೂ ರಾತ್ರಿ 7.00 ರ ನಂತರ ಅಲ್ಪಾಹಾರವನ್ನು / ಫಲಾಹಾರವನ್ನು ಸ್ವೀಕರಿಸಬಹುದು.

➡️24ನೇ ತಾರೀಕು ಸೋಮವಾರ ನರಕಚತುರ್ದಶಿಯಂದು ತಯಾರಿಸಿದ ಬೇಯಿಸಿದ ಪದಾರ್ಥಗಳು, ಭಕ್ಷ ಭೋಜ್ಯಗಳು ಗ್ರಹಣದ ನಂತರ ಸ್ವೀಕರಿಸಲು ಯೋಗ್ಯವಾಗಿರುವುದಿಲ್ಲ.

RELATED ARTICLES  ಲಾಯನ್ಸ್ ಕ್ಲಬ್ ಕುಮಟಾ ವತಿಯಿಂದ ಜಿಲ್ಲಾಮಟ್ಟದ ಪ್ರಬಂಧ ಸ್ಪರ್ಧೆ

➡️ಹಾಲು, ಮೊಸರು, ತುಪ್ಪ, ಬೆಲ್ಲ, ಎಣ್ಣೆ, ಉಪ್ಪಿನಕಾಯಿ, ಧವಸ ಧಾನ್ಯಗಳು, ತರಕಾರಿಗಳು, ಹಣ್ಣು ಹಂಪಲುಗಳು ಇತ್ಯಾದಗಳನ್ನು ದರ್ಭೆ- ತುಳಸಿ ಇತ್ಯಾದಿಗಳಿಂದ ಮುಚ್ಚಿಟ್ಟಲ್ಲಿ ಗ್ರಹಣದ ನಂತರವೂ ಬಳಸಬಹುದಾಗಿದೆ.

➡️ಗ್ರಹಣದ ದಿನ ಪ್ರಾತಃಸಂಧ್ಯಾವಂದನೆ ಹಾಗೂ ಮಾಧ್ಯಾಹ್ನಿಕ ಎಂದಿನಂತೆ ಮಾಡಬಹುದಾಗಿದೆ.

➡️ಗ್ರಹಣದ ನಂತರ ಸಾಯಂ ಸಂಧ್ಯಾವಂದನೆಯನ್ನು ಅಶೌಚಕಾಲದಲ್ಲಿ ಮಾಡುವ ಸಂಧ್ಯಾವಂದನೆಯ ನಿಯಮದಂತೆ ಮಾಡಬೇಕು.

➡️ಮನೆದೇವರ ಪೂಜೆ ಬೆಳಗ್ಗೆ ಅಥವಾ ಮಧ್ಯಾಹ್ನ ಮಾಡುವವರು ಎಂದಿನಂತೆ ಮಾಡುವುದು. ಅನ್ನ ನೈವೇದ್ಯ ಮಾಡುವ ಪದ್ಧತಿಯಿರುವಲ್ಲಿ ನೈವೇದ್ಯ ಮಾಡಿ ಆ ನೈವೇದ್ಯವನ್ನು ಗೋವಿಗೆ ಅಥವಾ ಜಲಚರಗಳಿಗೆ ನೀಡುವುದು.

➡️ಸಾಯಂಕಾಲ ಮಾಡುವ ದೇವರ ಪೂಜೆಯನ್ನ ಗ್ರಹಣದ ಆರಂಭಕ್ಕೂ ಮೊದಲೇ ಅಂದರೆ ಐದು ಗಂಟೆ ಏಳು ನಿಮಿಷಕ್ಕಿಂತಲು ಮೊದಲೇ ಮಾಡುವುದು. ಅನಂತರ ದೇವತಾಬಿಂಬಗಳನ್ನು ಸಂಪ್ರದಾಯದಂತೆ ಜಲದಲ್ಲಿ ಮುಳುಗಿಸಿಡುವುದು. ಮರು ದಿವಸ ಬೆಳಗ್ಗೆ ಸ್ನಾನಾನಂತರ ಪುನಃ ದೇವರನ್ನು ಪೀಠದಲ್ಲಿರಿಸಿ ಪೂಜೆ ಇತ್ಯಾದಿಗಳನ್ನು ನಡೆಸುವುದು.

➡️ಅಮಾವಾಸ್ಯೆಯ ದಿವಸ ನಡೆಸುವ ಶ್ರಾದ್ಧವನ್ನು ಮರುದಿವಸ ನಡೆಸುವುದು.

➡️ ಸೋಮವಾರ ನರಕ ಚತುರ್ದಶಿಯ ಹಬ್ಬ, ಲಕ್ಷ್ಮೀ ಪೂಜೆಗಳನ್ನಾಚರಿಸುವುದು.

➡️ಬುಧವಾರದಂದು ಪಾಡ್ಯ ಮಿತಿಯಲ್ಲಿ ಗೋ ಪೂಜೆ ,ಬಲೀಂದ್ರ ಪೂಜೆಯನ್ನಾಚರಿಸುವುದು.

➡️ಮೂರು ದಿವಸಗಳ ಬಲೀಂದ್ರಪೂಜೆ ನಡೆಸುವವರು ಮಂಗಳವಾರದಂದು ಗ್ರಹಣ ಕಾಲಕ್ಕೂ ಮೊದಲೇ ಬಲೀಂದ್ರ ಪೂಜೆಯನ್ನು ಮಾಡಿ ದರ್ಭೆ ಆಚ್ಛಾದನೆ ಮಾಡಬೇಕು. ಮರು ದಿವಸ ಬಲಿಂದ್ರ ಪೂಜೆಯನ್ನು ಮುಂದುವರೆಸುವುದು.

ಇನ್ನಿತರ ಪ್ರಮುಖ ಮಾಹಿತಿ ಹಾಗೂ ವಿವರಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಶ್ರೀಗುರುಸ್ಮರಣೆಗಳೊಂದಿಗೆ ಶ್ರೀರಾಮಚಂದ್ರಾಪುರಮಠದ ಧರ್ಮಕರ್ಮಖಂಡದಿಂದ ಲಭ್ಯವಾದ ಮಾಹಿತಿ.